ವಿಶ್ವವಿಖ್ಯಾತ ಮೈಸೂರು ದಸರಾಗೆ ಮೊದಲ ಹಂತದ ಗಜಪಯಣಕ್ಕೆ ಚಾಲನೆ

admin
2 Min Read

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) 2025ರ ಅಧಿಕೃತ ಕಾರ್ಯಕ್ರಮ ಸೋಮವಾರ ಶುರುವಾಗಿದೆ. ದಸರಾಗಾಗಿ ಕ್ಯಾಪ್ಟನ್ ಅಭಿಮನ್ಯು ಟೀಂ ಕಾಡಿನಿಂದ ನಾಡಿಗೆ ಆಗಮಿಸಿದ್ದು, ಆನೆಗಳ ಮೊದಲ ತಂಡಕ್ಕೆ ಹೆಚ್.ಡಿ ಕೋಟೆಯ ವೀರನಹೊಸಹಳ್ಳಿಯಲ್ಲಿ ಶುಭ ಕೋರಲಾಯಿತು. ಈ ವೇಳೆ ವನ್ಯಜೀವಿಗಳನ್ನು ಸಂರಕ್ಷಣೆ ಮಾಡುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ.ಬಿ ಖಂಡ್ರೆ (Eshwar Khandre) ಮನವಿ ಮಾಡಿದ್ದಾರೆ.

ಹುಣಸೂರು ತಾಲೂಕು ವೀರನಹೊಸಹಳ್ಳಿಯಲ್ಲಿಂದು (ಆ.4) ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ 14 ಆನೆಗಳ ಪೈಕಿ 9 ಆನೆಗಳ ಮೊದಲ ತಂಡಕ್ಕೆ ಸಾಂಪ್ರದಾಯಿಕವಾಗಿ ಪೂಜೆ ನೆರವೇರಿಸಿ, ಕಬ್ಬು, ಅಕ್ಕಿ, ಬೆಲ್ಲ ತಿನ್ನಿಸಿ ಗಜಪಯಣಕ್ಕೆ ಚಾಲನೆ ನೀಡಲಾಯಿತು. ಈ ಬಾರಿಯೂ 750 ಕೆ.ಜಿ ತೂಕದ ಅಂಬಾರಿಯನ್ನು ಹೊರಲಿರುವ ಅಭಿಮನ್ಯು, ಇಡೀ ತಂಡವನ್ನು ಮುನ್ನಡೆಸಲಿದ್ದಾನೆ. ವಿವಿಧ ಆನೆ ಶಿಬಿರಗಳಿಂದ ಆನೆಗಳನ್ನು ಆಯ್ಕೆ ಮಾಡಿರುವ ಅಧಿಕಾರಿಗಳು ಈಗಾಗಲೇ ಆನೆಗಳ ಆರೋಗ್ಯ ತಪಾಸಣೆ ಪೂರ್ಣಗೊಳಿಸಿದ್ದಾರೆ. ಆನೆ ಶಿಬಿರದಲ್ಲಿರುವ ಹೆಣ್ಣು ಆನೆಗಳ ಗರ್ಭಧಾರಣೆ ಪರೀಕ್ಷೆಗಾಗಿ ರಕ್ತಗಳ ಮಾದರಿ ಸಂಗ್ರಹಿಸಿ ಲ್ಯಾಬ್‌ನಲ್ಲಿ ಪರೀಕ್ಷೆ ಮಾಡಿಸಿ ನಂತರ ಈ ಹೆಣ್ಣಾನೆಗಳನ್ನು ದಸರಾಗೆ ಆಯ್ಕೆ ಮಾಡಲಾಗಿದೆ. ನಾಳೆ ಒಂದು ದಿನ ಮೈಸೂರಿನಲ್ಲಿ ವಿಶ್ರಾಂತಿ ಪಡೆಯಲಿರುವ ಗಜಪಡೆ ಆ.7ರಂದು ಅರಮನೆ ಪ್ರವೇಶ ಮಾಡಲಿವೆ.

ಮೊದಲ ತಂಡದ ಆನೆಗಳ ಪಟ್ಟಿ.
1. ಅಭಿಮನ್ಯು, ಗಂಡು : 59 ವರ್ಷ
2. ಪ್ರಶಾಂತ, ಗಂಡು : 53 ವರ್ಷ
3. ಧನಂಜಯ, ಗಂಡು : 45 ವರ್ಷ
4. ಮಹೇಂದ್ರ, ಗಂಡು : 42 ವರ್ಷ
5. ಏಕಲವ್ಯ, ಗಂಡು : 40 ವರ್ಷ
6. ಕಂಜನ್, ಗಂಡು : 26 ವರ್ಷ
7. ಭೀಮ, ಗಂಡು : 25 ವರ್ಷ
8. ಲಕ್ಷ್ಮಿ, ಹೆಣ್ಣು : 54 ವರ್ಷ
9. ಕಾವೇರಿ, ಹೆಣ್ಣು : 45 ವರ್ಷ

ಗಜಪಯಣಕ್ಕೆ ಚಾಲನೆ ನೀಡಿ ಮಾತನಾಡಿದ ಈಶ್ವರ್ ಖಂಡ್ರೆ, ಪ್ರಕೃತಿ ಪರಿಸರದ ಸಮತೋಲನಕ್ಕೆ ವನ್ಯಜೀವಿಗಳು ಅತ್ಯವಶ್ಯಕವಾಗಿದ್ದು, ಅವುಗಳ ರಕ್ಷಣೆಗೆ ನಾವೆಲ್ಲರೂ ಕಟಿಬದ್ಧರಾಗಬೇಕು. ತಂತಿ ಬೇಲಿಗಳಿಗೆ ಅಕ್ರಮವಾಗಿ ಪ್ರವಹಿಸಿದ ವಿದ್ಯುತ್ ಸ್ಪರ್ಶದಿಂದ ಆನೆಗಳು ಮೃತಪಡುತ್ತಿದ್ದರೆ, ಉರುಳಿಗೆ ಚಿರತೆಗಳು ಸಿಲುಕಿ ನರಳಾಡಿ ಸಾಯುತ್ತಿವೆ. ಇತ್ತೀಚೆಗೆ ಮಲೆ ಮಹದೇಶ್ವರ ಬೆಟ್ಟದ ವನ್ಯಜೀವಿಧಾಮದಲ್ಲಿ ವಿಷ ಪ್ರಾಶನದಿಂದ ಮೃತಪಟ್ಟಿವೆ. ಈ ಭೂಮಿಯಲ್ಲಿ ಹುಟ್ಟಿದ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ. ವನ್ಯಜೀವಿಗಳ ಜಾಗವನ್ನು ಆಕ್ರಮಿಸಿರುವ ನಾವು ಅವುಗಳನ್ನು ನಿರ್ದಯವಾಗಿ ಕೊಲ್ಲದೆ, ಅವುಗಳ ಸಂರಕ್ಷಣೆಗೆ ಸಂಕಲ್ಪ ಮಾಡಬೇಕು ಎಂದು ಹೇಳಿದರು.

 
Share This Article
Leave a Comment