ಪಬ್ಲಿಕ್ ಅಲರ್ಟ್
ಮೈಸೂರು : ವಿಶ್ವ ವಿಖ್ಯಾತ ಮೈಸೂರು ದಸರಾ ಉದ್ಘಾಟಕರಾಗಿ ರಾಜ್ಯ ಸರ್ಕಾರ ಬಾನು ಮುಷ್ತಾಖ್ ಅವರನ್ನು ಆಯ್ಕೆ ಮಾಡಿದ್ದು ಅವರ ಆಯ್ಕೆ ಹಿಂಪಡೆಯುವಂತೆ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಅನೀಶ್ ಮಾತನಾಡಿ, ತಾಯಿ ಶ್ರೀ ಚಾಮುಂಡೇಶ್ವರಿಯನ್ನು ನವರಾತ್ರಿಯ ೯ ದಿನಗಳ ಕಾಲ ಶ್ರದ್ಧಾ, ಭಕ್ತಿಯಿಂದ ಆರಾಧಿಸುವ ಹಿಂದೂ ಸಮಾಜವು ಮುಸ್ಲಿಂ ಉದ್ಘಾಟಕರ ಆಯ್ಕೆಯನ್ನು ವಿರೋಧಿಸುತ್ತದೆ.
ಈ ಹಿಂದೆ ಬಾನು ಮುಷ್ತಾಖ್ ಅವರು ಕನ್ನಡಾಂಬೆ ತಾಯಿ ಭುವನೇಶ್ವರಿಯ ಬಗ್ಗೆ, ಅರಿಶಿನ ಕುಂಕುಮದ ಬಗ್ಗೆ, ಕನ್ನಡ
ಭಾಷೆಯ ವೈಶಾಲ್ಯತೆಯ ಬಗ್ಗೆ, ನಾಡಿನ ಸಂಸ್ಕೃತಿಯ ಬಗ್ಗೆ ಸಂಕುಚಿತವಾಗಿ ಮಾತನಾಡಿ ನಾಡಿನ ಜನತೆಯ
ಭಾವನೆಗಳಿಗೆ ಧಕ್ಕೆ ತಂದಿರುತ್ತಾರೆ. ಇದೇ ರೀತಿಯ ಭಾವನೆಗಳನ್ನು ದಸರಾ ಮಹೋತ್ಸವದಲ್ಲಿಯೂ ವ್ಯಕ್ತಪಡಿಸುವ
ಸಾಧ್ಯತೆ ಇದೆ ಎಂದು ಅವರ ಹಿಂದಿನ ಪ್ರವೃತ್ತಿಗಳಿಂದ ಕಂಡುಬಂದಿರುತ್ತದೆ. ಮೂರ್ತಿ ಆರಾಧನೆಯನ್ನು ವಿರೋಧಿಸುವರು, ಬಹು ವಿಗ್ರಹ ಆರಾಧಕರನ್ನು ನಿಂದಿಸುವವರು, ಅನೇಕರು
ಇಸ್ಲಾಂ ಮತದಲ್ಲಿ ಇದ್ದಾರೆ. ಅದೇ ರೀತಿಯಲ್ಲಿ ಈ ದೇಶದ ಬಹುಸಂಖ್ಯಾತ ಹಿಂದೂಗಳ ಭಾವನೆಗಳಿಗೆ ನಿರಂತರವಾಗಿ
ಧಕ್ಕೆಯನ್ನು ತರುತ್ತಿರುವವರಲ್ಲಿ ಬಾನು ಮುಷ್ತಾಖ್ ಸಹ ಒಬ್ಬರು. ಹಾಗಾಗಿ ಕರ್ನಾಟಕ ರಾಜ್ಯ ಸರ್ಕಾರವು ತಕ್ಷಣ
ಇವರ ಆಯ್ಕೆಯನ್ನು ಹಿಂಪಡೆದು ಈ ನಾಡಿಗೆ, ನಾಡಿನ ಸಂಸ್ಕೃತಿಗೆ, ಬಹುಸಂಖ್ಯಾತ ಹಿಂದೂಗಳ ಭಾವನೆಗೆ ಗೌರವ ಕೊಡುವ ವ್ಯಕ್ತಿಯನ್ನು ಉದ್ಘಾಟಕರಾಗಿ ಆಯ್ಕೆ ಮಾಡುವಂತೆ ಆಗ್ರಹಿಸುತ್ತದೆ.
ಆಯ್ಕೆ ವಾಪಸ್ ಪಡೆಯದಿದ್ದಲ್ಲಿ ತಾಯಿ ಚಾಮುಂಡೇಶ್ವರಿಯ ಭಕ್ತರು ಮುಂದಿನ ದಿನಗಳಲ್ಲಿ ಜನಾಂದೋಲನವನ್ನು ನಡೆಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಸಹ ನೀಡಿದ್ದಾರೆ.
ಈ ವೇಳೆ ರಂಗಸ್ವಾಮಿ, ರಾಜನ್, ವಸಂತ ಕುಮಾರ್, ಚಂದ್ರು, ಸ್ವಾಮಿ ಇದ್ದರು.