ಪಬ್ಲಿಕ್ ಅಲರ್ಟ್
ಮೈಸೂರು: ಉದ್ಯಮ, ರಾಜಕೀಯ, ಸಿನಿಮಾ ಕ್ಷೇತ್ರಗಳಲ್ಲಿ ಸಂದೇಶ ನಾಗರಾಜು ತಮ್ಮದೇ ಛಾಪು ಮೂಡಿಸಿದ್ದಾರೆ. ರಾಜಕೀಯವಾಗಿ ಬೇರೆ ಬೇರೆ ಪಕ್ಷಗಳಿದ್ದರು ಆತ್ಮೀಯತೆ ಸ್ನೇಹಕ್ಕೆ ಧಕ್ಕೆಯಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಮೈದಾನದಲ್ಲಿ ಸಂದೇಶ ನಾಗರಾಜು ಅಭಿಮಾನಿ ಬಳಗದ ವತಿಯಿಂದ ನಡೆದ ಸಂದೇಶ ನಾಗರಾಜ ಅವರ ೮೦ನೇ ಹುಟ್ಟುಹಬ್ಬದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂದೇಶ ನಾಗರಾಜು ಅವರು ೮೦ ವರ್ಷ ಪೂರೈಸಿ ಉತ್ತಮ ಆರೋಗ್ಯ ಕಾಪಾಡಿಕೊಂಡಿದ್ದಾರೆ. ಸಮಾಜ ಸೇವೆಗಾಗಿ ಬದುಕನ್ನು ಮುಡಿಪಿಟ್ಟಿರುವ ಸಂದೇಶ ನಾಗರಾಜು ಇವರು ಶತಾುುಂಷಿ ವಾತ್ರವಲ್ಲ, ಅದಕ್ಕಿಂತ ಹೆಚ್ಚು ಕಾಲ ಆರೋಗ್ಯಕರವಾಗಿ ಜೀವಿಸಲಿ. ಸಮಾಜಕ್ಕೆ ಅವರ ಸೇವೆ ಅಗತ್ಯವಿದೆ ಎಂದು ಹಾರೈಸಿದರು.
೧೯೮೦ ರಿಂದ ಸಂದೇಶ ನಾಗರಾಜು ಪರಿಚಯ. ನಾನು ಬಿಎಸ್‌ಸಿ ಪದವಿ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಸಂದೇಶ ನಾಗರಾಜು ಅಂತಿಮ ವರ್ಷದ ಬಿಎಸ್‌ಸಿ ವ್ಯಾಸಂಗ ಮಾಡುತ್ತಿದ್ದರು. ಸಂದೇಶ ನಾಗರಾಜು ಉತ್ತಮ ಕಬ್ಬಡಿ ಆಟಗಾರರಾಗಿದ್ದರು. ಕಬ್ಬಡಿ ನೋಡಲು ಹೋದಾಗ ಇವರನ್ನು ಕಾಣುತ್ತಿದ್ದೆ. ಬಿಎಸ್‌ಸಿ ನಂತರ ಉದ್ಯಮ ಕ್ಷೇತ್ರಕ್ಕೆ ಇಳಿದು ಎರಡು ಬಸ್ ಮಾಲೀಕರಾದರು. ನಂತರ ಹೋಟೆಲ್ ತೆರೆದರು. ಆ ಹೋಟೆಲ್ ಹೆಸರೇ ಸಂದೇಶ ಎಂದು. ಆಗಿನಿಂದ ಇವರ ಹೆಸರು ಸಂದೇಶ ನಾಗರಾಜು ಆಗಿ ಬದಲಾಯಿತು ಎಂದು ನೆನಪಿಸಿಕೊಂಡರು.
ಅಷ್ಟೊತ್ತಿಗೆ ನಾನು ವಕೀಲನಾಗಿದ್ದ ನಾನು ಹೋಟೆಲ್‌ಗೆ ಹೋಗುತ್ತಿದ್ದೆ. ಆಗ ಬಹಳ ಹತ್ತಿರದಿಂದ ಪರಿಚಯವಾಯಿತು. ಆ ನಂತರ ಉದ್ಯಮದಲ್ಲಿ, ಸಿನಿಮಾ ನಿರ್ಮಾಪಕರಾಗಿ ರಾಜಕೀಯದಲ್ಲಿ ಗುರುತಿಸಿಕೊಂಡು ತಮ್ಮದೇ ಛಾಪು ಮೂಡಿಸಿದರು. ಈ ಮೂರು ಕ್ಷೇತ್ರದಲ್ಲಿಯೂ ಯಶಸ್ವಿಯಾದರು. ಸುಮಾರು ೩೦ಕ್ಕೂ ಹೆಚ್ಚು ಜನಪ್ರಿಯ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ ಎಂದು ಪ್ರಶಂಸಿದರು.
ರಾಜಕೀಯದಲ್ಲಿ ಅವರನ್ನು ವಿರೋಧ ಮಾಡಿರುವುದೆ ಹೆಚ್ಚು. ರಾಮಕೃಷ್ಣ ಹೆಗಡೆ ಅವರ ಕಾಲದಲ್ಲಿ ನಮ್ಮ ಜೊತೆ ಇದ್ದರು. ಆ ನಂತರ ಕಾಂಗ್ರೆಸ್ ಸೇರಿಸಿದರು. ಆ ಮೇಲೆ ಜಾ.ದಳಕ್ಕೆ ಬಂದರು. ಈಗ ಕಾಂಗ್ರೆಸ್ ನಲ್ಲಿದ್ದಾರೆ. ರಾಜಕೀಯವಾಗಿ ಬೇರೆ ಬೇರೆ ಪಕ್ಷಗಳಿದ್ದರು ಆತ್ಮೀಯತೆ ಸ್ನೇಹಕ್ಕೆ ಧಕ್ಕೆಯಾಗಿಲ್ಲ. ಅವರ ಸ್ನೇಹಮಯಿ ವ್ಯಕ್ತಿತ್ವವೇ ಯಶಸ್ಸಿಗೆ ಕಾರಣವಾಗಿದೆ ಎಂದು ಹೇಳಿದರು.

