ಪಬ್ಲಿಕ್ ಅಲರ್ಟ್
ಮೈಸೂರು: ಮೈಸೂರಿನಲ್ಲಿ ನಡೆದ ರಾಜ್ಯ ಸರ್ಕಾರದ ಲೂಟಿ ದಸರಾ ಬಗ್ಗೆ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಬೇಕೆಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಒತ್ತಾಯಿಸಿದೆ.
ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ರವಿಕುಮಾರ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ದಸರಾ ಜಂಬೂಸವಾರಿ ಮರ್ಗದಲ್ಲಿ ಮೊಮ್ಮಗನೊಂದಿಗೆ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಕ್ಷಮಾಪಣೆ ಕೋರಬೇಕು. ರಾಜ್ಯ ಸರ್ಕಾರ ಏರ್ ಶೋ ಟಿಕೆಟ್ ನಲ್ಲಿ ಲೂಟಿ ಮಾಡುತ್ತಿದೆ. ದಸರಾ ಗೋಲ್ಡ್ ಪಾಸ್ ನಲ್ಲಿಯೂ ಲೂಟಿ ಮಾಡುತ್ತಿದೆ. ಯುವ ದಸರಾ ಹೆಸರಿನಲ್ಲಿ ಲೂಟಿ ನಡೆಸುತ್ತಿದೆ. ದೀಪಾಲಂಕಾರ, ಫಲಪುಷ್ಪ ಪ್ರದರ್ಶನ ದುಬಾರಿ ಟಿಕೆಟ್ ನಲ್ಲಿ ಲೂಟಿ ಮಾಡುತ್ತಿದೆ ಎಂದು ಆರೋಪಿಸಿದರು.
ರಾಜಕೀಯ ನಾಯಕರು, ಅಧಿಕಾರಿಗಳು ಮತ್ತು ಅವರ ಕುಟುಂಬಸ್ಥರಿಂದ ಸರ್ಕಾರಿ ವಾಹನಗಳ ದುರ್ಬಳಕೆ ಆಗಿದೆ. ಅವರೆಲ್ಲರಿಗೂ ವಿವಿಐಪಿ ಕೋಟಾ ಅಡಿ ಉಚಿತವಾಗಿ ಬಿಡಲಾಗಿದೆ. ವಿಶೇಷ ಸವಲತ್ತು ಒದಗಿಸಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಅಥವಾ ನಗರ ಪೊಲೀಸ್ ಆಯುಕ್ತರಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಇದು ಸಚಿವ ಡಾ.ಎಚ್.ಸಿ. ಮಹದೇವಪ್ಪ ಚೇಲಗಳ ವೈಯಕ್ತಿಕ ಕಾರ್ಯಕ್ರಮವೋ? ಸರ್ಕಾರದಿಂದ ನಡೆಸುವ ಜನ ಸಾಮಾನ್ಯರ ದಸರಾವೋ? ಎಂಬುದು ಸಾರ್ವಜನಿಕ ಪ್ರಶ್ನೆ. ಅದಕ್ಕೆ ಸಿಎಂ ಸಿದ್ದರಾಮಯ್ಯ ಉತ್ತರಿಸಬೇಕು. ದಸರಾ ಕರ್ಚು ವೆಚ್ಚದ ಬಗ್ಗೆ ಪಾರದರ್ಶಕವಾಗಿ ಸಾರ್ವಜನಿಕವಾಗಿ ಚರ್ಚೆ ಆಗಬೇಕು ಎಂದು ಆಗ್ರಹಿಸಿದರು.
ಸಂವಿಧಾನದ ಹೆಸರು ಹೇಳಿಕೊಂಡು ರಾಜಕೀಯ ಮಾಡುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಸರ್ಕಾರಿ ವಾಹನ ದುರ್ಬಳಕೆ ಮಾಡಿಕೊಂಡು ವಂಶ ರಾಜಕೀಯ ಬೆಳೆಸಲು ಮುಂದಾಗಿದ್ದಾರೆ. ಮೊಮ್ಮಗನನ್ನು ಸರ್ಕಾರಿ ವಾಹನದಲ್ಲಿ ಬಿಳಿ ಬಟ್ಟೆ ತೊಡಿಸಿ ಕರೆದುಕೊಂಡು ಬರುವ ಅಗತ್ಯವೇನಿತ್ತು. ಇದು ಸಂವಿಧಾನದ ಆಶಯಕ್ಕೆ ವಿರುದ್ಧವಲ್ಲವೇ? ಈ ಸಂಬಂಧ ಅವರು ಕ್ಷಮೆಯಾಚಿಸಬೇಕು. ಇದನ್ನು ಪ್ರಶ್ನಿಸುವ ನೈತಿಕತೆಯವನ್ನು ಬಿಜೆಪಿಯೂ ಕಳೆದುಕೊಂಡಿದೆ. ಎಸ್.ಟಿ.ಸೋಮಶೇಖರ್ ಸಚಿವರಾಗಿದ್ದಾಗಲೂ ದಸರಾ ಪಾಸ್ ದುರ್ಬಳಕೆಯಾಗಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ನಗರಾಧ್ಯಕ್ಷ ನಾಗೇಂದ್ರ, ನಾಗರಾಜು, ರವಿ, ರಾಜೇಂದ್ರ ಇದ್ದರು.
