ಪಬ್ಲಿಕ್ ಅಲರ್ಟ್
ಮೈಸೂರು: ನಾಡಹಬ್ಬ ದಸರೆಯ ಸ್ವಚ್ಛತೆಯ ನೇತೃತ್ವವಹಿಸಿದ್ದ ಸ್ವಚ್ಛತಾ ಸಮಿತಿಯ ೧೬೦ಮಂದಿ ಸದಸ್ಯರನ್ನು ಸಮಿತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ನಗರದ ಶಿವರಾಂಪೇಟೆಯ ಆಲಮ್ಮಛತ್ರದಲ್ಲಿ ನಡೆದ ಸಮಾರಂಭದಲ್ಲಿ ಸ್ವಚ್ಛತಾ ಸಮಿತಿ ಕಾರ್ಯದರ್ಶಿ ಹಾಗೂ ಉಪ ಆಯುಕ್ತರಾದ ದಾಸೇಗೌಡ ಮಾತನಾಡಿ, ನಾಡಹಬ್ಬ ದಸರೆಯಲ್ಲಿ ಬಹುದೊಡ್ಡ ಜವಾಬ್ದಾರಿಯನ್ನು ಸ್ವಚ್ಛತಾಸಮಿತಿ ಯಶಸ್ವಿಯಾಗಿ ನಿರ್ವಹಿಸಿದೆ. ಅದರಲ್ಲೂ ಆಹಾರಮೇಳ, ಅರಮನೆ ವೇದಿಕೆ, ಜಂಬೂ ಸವಾರಿ ಮೆರವಣಿಗೆಯಲ್ಲಿನ ಸ್ವಚ್ಛತೆಗೆ ಸಮಿತಿ ತಂಡವಾಗಿ ಕೆಲಸವಾಗಿ ಮಾಡಿದೆ ಎಂದರು.
ಸ್ವಚ್ಛತಾ ಸಮಿತಿ ಜಂಟಿ ಕಾರ್ಯದರ್ಶಿ ಕೆ.ವೆಂಕಟೇಶ್ ಮಾತನಾಡಿ, ೧೯೫೭ ಪೌರಕಾರ್ಮಿಕರು ಹಾಗೂ ಹೆಚ್ಚುವರಿ ೫೦೦ ಪೌರಕಾರ್ಮಿಕರಿಂದ ೧೬೦ಮಂದಿ ಸ್ವಚ್ಚತಾ ಸಮಿತಿ ಸದಸ್ಯರ ತಂಡ ಎಲ್ಲಿಯೂ ಯಾವುದೇ ಸಮಸ್ಯೆ ಆಗದ ರೀತಿ ಸ್ವಚ್ಛ ದಸರಾ ಯಶಸ್ಸಿಗೆ ಶ್ರಮಿಸಿದ್ದಾರೆಂದರು.
ಸ್ವಚ್ಚತಾ ಸಮಿತಿ ಅಧ್ಯಕ್ಷ ಸುಬಾನ್ ಮಾತನಾಡಿ, ೧೬೦ಮಂದಿ ಒಂದೊಂದು ಕಡೆ ಉಸ್ತುವಾರಿ ವಹಿಸಿಕೊಂಡು ಕಸ ನಿರ್ವಹಣೆ ಮಾಡಿದ್ದೇವೆ. ಇದೇ ವೇಳೆ ಪ್ಲಾಸ್ಟಿಕ್ ಮುಕ್ತ ದಸರೆಗೆ ೩ ಸಾವಿರ ಕೈ ಚೀಲವನ್ನು ಅರಮನೆ ವೇದಿಕೆಯಲ್ಲಿ ಕೊಟ್ಟಿದ್ದೇವೆ. ದಸರೆಯಲ್ಲಿ ಬರೋಬ್ಬರಿ ೧೦೦೦ ಟನ್ ಕಸ ತೆಗೆದಿದ್ದೇವೆ. ಜತೆಗೆ ಕುಕ್ಕರಹಳ್ಳಿಯಲ್ಲಿ ೨೦೦ ಮಕ್ಕಳು ೫ಲೋಡ್ ಮಕ್ಕಳು ಸಂಗ್ರಹಿಸಿದ್ದಾರೆ. ಹೀಗೆ ಕಸ ನಿರ್ವಹಣೆಯನ್ನು ವ್ಯವಸ್ಥಿತವಾಗಿ ಮಾಡಿದ ಸಮಿತಿಗೆ ಅಭಿನಂದನೆ ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.
