ಅನಕ್ಷರಸ್ಥ ಸಂಸ್ಕೃತಿಗೆ ಪರಂಪರೆಯಿದೆ: ಜಿ.ಸಿದ್ದರಾಮಯ್ಯ

Pratheek
2 Min Read

ಪಬ್ಲಿಕ್ ಅಲರ್ಟ್

ಮೈಸೂರು: ಅಕ್ಷರದ ದಾಖಲೆಗೆ ಸಿಗದ ಸಂಸ್ಕೃತಿ ಅನಕ್ಷರಸ್ಥರ ಪರಂಪರೆ ಸಂಸ್ಕೃತಿ. ಅವುಗಳಿಗೆ ಚರಿತ್ರೆಯಿಲ್ಲ. ಆದರೆ ಪರಂಪರೆಯಿದೆ ಎಂದು  ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ತಿಳಿಸಿದ್ದಾರೆ.
ಮೈಸೂರಿನ ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿಎಂಶ್ರೀ ಸಭಾಂಗಣದಲ್ಲಿ ಮಂಟೇಸ್ವಾಮಿ ಸಿದ್ದಪ್ಪಾಜಿ ಮತ್ತು ರಾಚಪ್ಪಾಜಿ ಪೀಠ ಹಾಗೂ ಪಿ.ಆರ್.ತಿಪ್ಪೇಸ್ವಾಮಿ ಪೀಠಗಳ ಸಹಯೋಗದಲ್ಲಿ ಹಮ್ಮಿಕೊಂಡಿರುವ ‘ಜನಪದ ಮಹಾಕಾವ್ಯಗಳಲ್ಲಿ ಸ್ತ್ರೀ ಸಂವೇದನೆ’ ವಿಷಯ ಕುರಿತು ಎರಡು ದಿನಗಳ ರಾಷ್ಟ್ರೀಯ ವಿಚಾರಗೋಷ್ಠಿ ಉದ್ಘಾಟಿಸಿ  ಮಾತನಾಡಿದ ಅವರು,  ಬದಲಾವಣೆಯ ಕಾಲಘಟ್ಟದಲ್ಲಿ ಹಳೆ ಬೇರು, ಚಿಗುರಾಗಿ ಅದರ ಮಾದರಿಯೊಳಗೆ ಅದರ ಸತ್ವವನ್ನು ಕಟ್ಟಿಕೊಂಡು ಉಳಿದು ಬೆಳೆಯುತ್ತಾ ಹೋಗುತ್ತಾ ಪರಂಪರೆಯನ್ನಾಗಿಸಿಕೊಳ್ಳುತ್ತಾ ನಿರಂತರವಾಗಿರುತ್ತಿರುವುದೇ, ಈ ಜಾನಪದ ಪರಂಪರೆ ಎಂದರು.
ಗರಿಕೆ ಹುಲ್ಲನ್ನು, ತುಳಿದಷ್ಟು ಮತ್ತೆ ಅದು ತನ್ನ ಸತ್ವದಿಂದ ಚಿಗುರಿ ಮೇಲೆಳುವಂತೆ, ಈ ದೇಶದಲ್ಲಿ ಎಷ್ಟೋ ಬುಡಕಟ್ಟುಗಳು ಇವತ್ತಿಗೂ ಗರಿಕೆ ಬೇರಿನ ಸತ್ವದಂತೆ ಗಟ್ಟಿಗೊಂಡು ಉಸಿರಾಡುತ್ತಿವೆ. ಇದನ್ನು ನಾವು ಗಮನಿಸಬೇಕಾಗಿದ್ದು, ಇದರ ನಡುವೆ ಸಂಘರ್ಷ ಉದ್ದಕ್ಕೂ ಬೆಳೆದು ಬಂದಿದೆ. ಹೊಸ ಪದ್ಧತಿಗಳನ್ನು, ಪಂಥಗಳನ್ನು, ಧರ್ಮಗಳನ್ನು ಹುಟ್ಟುಹಾಕಿದೆ ಎಂದ ಅವರು,  ಜಾನಪದ ಪರಂಪರೆಗೆ ಯಾವುದೇ ಪಠ್ಯವಿಲ್ಲ. ಅದು ಹಾಡುವ ಹೊತ್ತಿನೊಳಗೆ ಅದರಲ್ಲಿ ಪಠ್ಯ ನಿರ್ಮಾಣವಾಗುತ್ತದೆ. ಕೆಲವು ಬಿಟ್ಟು ಹೋಗುತ್ತವೆ. ಕೆಲವು ಸೇರ್ಪಡೆಯಾಗುತ್ತವೆ. ಆ ರೀತಿಯೊಳಗೆ ಬಹು ಪಠ್ಯವಾಗಿ, ಸತ್ಯೋಧಾರಿತವಾಗಿ ಬೆಳೆಯುವುದು ಜಾನಪದದ ಲಕ್ಷಣ. ಆ ದೃಷ್ಟಿಯಿಂದಲೇ ಸೃಜನಾತ್ಮಕತೆ ಎಂಬುದು ಜಾನಪದದೊಳಗೆ ವ್ಯಕ್ತಿ ನಿಷ್ಠವಾಗಿಯಲ್ಲದೇ, ಸಮೂಹ ನಿಷ್ಠವಾಗಿಯೂ, ಸಂದರ್ಭ ನಿಷ್ಠವಾಗಿಯೂ ಇರುತ್ತದೆ ಎಂದು ತಿಳಿಸಿದರು.
ಜಾನಪದವನ್ನು ಅಧ್ಯಯನ ಮಾಡುವುದರೊಳಗೆ, ನಮ್ಮ ಅಕ್ಷರ ಪರಂಪರೆಯ ವಿಮಾಂಸೆ ದೃಷ್ಟಿಕೋನ, ಓದಿನ ದೃಷಿಕೋನ ಸೋತಿದೆ. ಇನ್ನ ಕುಲಚರಿತೆಯನ್ನು ನೋಡಿದರೆ, ಇವತ್ತು ಹಲವಡೆಗಳಲ್ಲಿ ಹಾಡು, ಕುಣಿತ, ವೇದಿಕೆ ಕಾರ್ಯಕ್ರಮ, ಬೀದಿ ನಾಟಕಗಳನ್ನು ನಡೆಸುತ್ತೇವೆ. ಆದರೆ ಅದರೊಳಗಿನ ಕುಲಗಳ ಚರಿತೆಯ ಸಂಪತ್ತು, ನಿಜವಾದ ಸಂವೇದನೆ ಏನು, ಅಲ್ಲಿ ಹೆಣ್ಣಿನ ಸ್ಥಾನ, ಸಂವೇದನೆ ಹೇಗೆ ವ್ಯಕ್ತವಾಗಿದೆ. ಯಾವ ಕಾರಣಕ್ಕೆ ಅಂತಹ ಮಾತೃ ಸಂವೇದನೆಯ ಮೇಲೆ ಹೊರಗಿನ ಸಂಸ್ಕೃತಿ ಆಕ್ರಮಣ ಮಾಡಿವೆ ಎಂಬ ಸೂಕ್ಷ್ಮವನ್ನು ಅರಿಯಬೇಕಿದೆ ಎಂದ ಅವರು, ಇವತ್ತಿನ ರಾಜಕೀಯವಾಗಿ ಚಾರಿತ್ರಿಕ ದ್ವೇಷಗಳು, ಸೂಕ್ಷ್ಮತೆಗಳು ಸಹಜವಾಗಿ ಬೆಳೆದು ಬಂದಿವೆ. ಅದನ್ನು ಮುರಿಯುವ, ಹೋಗಲಾಡಿಸುವ ಕೆಲಸವನ್ನು ಶಿಕ್ಷಣ ಮಾಡುತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಪಿ.ಆರ್.ತಿಪ್ಪೇಸ್ವಾಮಿ ಪೀಠದ ಸಂದರ್ಶಕ ಪ್ರಾಧ್ಯಾಪಕರು ಪ್ರೊ.ಆರ್.ಸುನಂದಮ್ಮ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕಿ ಪ್ರೊ.ಎನ್.ಕೆ.ಲೋಲಾಕ್ಷಿ, ಮಂಟೇಸ್ವಾಮಿ ಸಿದ್ದಪ್ಪಾಜಿ ಮತ್ತು ರಾಚಪ್ಪಾಜಿ ಪೀಠದ ಸಂದರ್ಶಕ ಪ್ರಾಧ್ಯಾಪಕ ಪ್ರೊ.ಕೇಶವ ಶರ್ಮ ಉಪಸ್ಥಿತರಿದ್ದರು.

Share This Article
Leave a Comment