ಪೊಲೀಸ್ ಇಲಾಖೆಯಲ್ಲಿ ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸಬೇಕು: ಜಿ ಪರಮೇಶ್ವರ್

latha prabhukumar
3 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ಪೊಲೀಸ್ ಇಲಾಖೆಯಲ್ಲಿ ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸಬೇಕು: ಜಿ ಪರಮೇಶ್ವರ್
ಮೈಸೂರು,ಫೆ.07 (ಕರ್ನಾಟಕ ವಾರ್ತೆ):- ಪೊಲೀಸ್ ಇಲಾಖೆಯಲ್ಲಿ ಸಾಕಷ್ಟು ಬದಲಾವಣೆ ತಂದಿದ್ದೇವೆ ಸಾರ್ವಜನಿಕರು ತಮ್ಮ ಕಷ್ಟವನ್ನು ಪರಿಹಾರ ಮಾಡಿಕೊಳ್ಳಲು ದೇವಸ್ಥಾನಕೆ ಹೋಗುತ್ತಾರೆ. ಅದೇ ರೀತಿ ಪೊಲೀಸ್ ಠಾಣೆಗೂ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಬರುತ್ತಾರೆ. ಅವರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿ ಪೊಲೀಸ್ ಇಲಾಖೆ ಜನಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಗೃಹ ಸಚಿವರಾದ ಡಾ. ಜಿ ಪರಮೇಶ್ವರ ಹೇಳಿದರು

ಇಂದು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ ಇವರ ಸಹಯೋಗದೊಂದಿಗೆ ಮೈಸೂರು ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಸಿದ್ದಾರ್ಥನಗರ ಸಂಚಾರ ಪೊಲೀಸ್ ಠಾಣೆ ಕಟ್ಟಡದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಮೈಸೂರು ಪಾರಂಪರಿಕತೆ ಹಾಗೂ ಇತಿಹಾಸಕ್ಕೆ ಹೆಸರುವಾಸಿಯಾಗಿದೆ. ಮೈಸೂರಿನಲ್ಲಿ ಕಾನೂನು ಸುವ್ಯವಸ್ಥೆಯನ್ನು ಗಟ್ಟಿಗೊಳಿಸಿ ಪ್ರವಾಸಿಗರು ಇನ್ನು ಹೆಚ್ಚು ಬೇಟಿ ನೀಡುವಂತೆ ಮಾಡಬೇಕು ಎಂದು ಹೇಳಿದರು.
ಪ್ರತಿಯೊಂದು ಪೊಲೀಸ್ ಠಾಣೆಯು ಸಹ ದೇವಸ್ಥಾನ ಎಂದು ನಾವು ತಿಳಿದುಕೊಳ್ಳಬೇಕು ಹಾಗೂ ಜನ ಸ್ನೇಹಿ ಪೊಲೀಸ್ ಆಗಿ ಕಾರ್ಯವನ್ನು ಪೊಲೀಸ್ ಅಧಿಕಾರಿಗಳು ನಿರ್ವಹಿಸಬೇಕು ಎಂದರು. ದೇಶದಲ್ಲೇ ಮನೆ ಮನೆ ಪೊಲೀಸ್ ಭೇಟಿ ಕಾರ್ಯಕ್ರಮವು ಯಶಸ್ವಿಯಾಗಿದ್ದು, ರಾಜ್ಯವು 3 ನೇ ಸ್ಥಾನವನ್ನು ಪಡೆದುಕೊಂಡಿದೆ ಎಂದರು.

ಇoಡಿಯನ್ ಜಸ್ಟಿಸ್ ರಿಪೋರ್ಟ್ ಪ್ರಕಾರ ದೇಶದ 120 ನಗರಗಳಲ್ಲಿ ಸೇಫ್ ಸಿಟಿಯಾಗಿ ಬೆಂಗಳೂರು 1 ನೇ ಸ್ಥಾನವನ್ನು ಪಡೆದಿದೆ. 5 ಲಕ್ಷ ಜನಸಂಖ್ಯೆ ಇರುವ ಉದಯಗಿರಿಯ ಪೊಲೀಸ್ ಠಾಣೆಯನ್ನು 2 ವಿಭಾಗ ಮಾಡಿ ಹೊಸ ಪೊಲೀಸ್ ಠಾಣೆ ಯನ್ನು ಮಾಡಲು ವ್ಯವಸ್ಥೆ ಮಾಡಲಾಗುತ್ತಿದೆ. ಈಗಾಗಲೇ ಪಿ ಕ್ಯಾಪ್ ಅನ್ನು ಪೊಲೀಸ್ ಕಾನ್ಸ್ಟೇಬಲ್ ಗಳಿಗೆ ಹೊಸ ರೀತಿಯ ಶೈಲಿ ಯಲ್ಲಿ ನೀಡಿದ್ದೆವೆ. ಮೈಸೂರು ನಗರದೆಲ್ಲೆಡೆ 380 ಸಿ.ಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತದೆ ಎಂದು ತಿಳಿಸಿದರು.

ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ.ಎಸ್. ಶ್ರೀವತ್ಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಮೈಸೂರಿನ ಪೊಲೀಸ್ ಮತ್ತು ಬ್ಯಾಂಡ್ ಗೆ ತನ್ನದೆ ಆದ ಗೌರವ ಮತ್ತು ಘನತೆ ಇದೆ. ಮೈಸೂರು ನಗರಕ್ಕೆ ಹಲವಾರು ದಕ್ಷ ಪೊಲೀಸರು ಅಧಿಕಾರಿಗಳು ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಮೈಸೂರಿನ ಕೃಷ್ಣರಾಜ ಕ್ಷೇತ್ರದ ವ್ಯಾಪ್ತಿಯ ಲಕ್ಷ್ಮಿ ಪುರಂ ಠಾಣೆ ವ್ಯಾಪ್ತಿಯ ವಿಸ್ತೀರ್ಣ ಬಹಳ ದೊಡ್ಡದಿರುವುದರಿಂದ ಕುವೆಂಪು ನಗರ ಭಾಗಕ್ಕೆ ಒಂದು ಸಂಚಾರಿ ಪೊಲೀಸ್ ಠಾಣೆಯನ್ನು ನಿರ್ಮಿಸಿಕೊಡಬೇಕು. ಇಂದು ಮೈಸೂರಿಗೆ ಹೆಚ್ಚಿನ ಸಂಖ್ಯೆ ಯಲ್ಲಿ ಪ್ರವಾಸಿಗರು ಬರುವುದರಿಂದ ಸಂಚಾರಿ ವ್ಯವಸ್ಥೆಯನ್ನು ಸುಗಮಗೊಳಿಸಬೇಕು ಎಂದು ಹೇಳಿದರು

ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ತನ್ವೀರ್ ಸೇಠ್ ಅವರು ಮಾತನಾಡಿ ಮೈಸೂರಿನ ಸುತ್ತಮುತ್ತ ಪರಿಸರ ವ್ಯವಸ್ಥೆಯಿಂದ ಮತ್ತು ಅರಣ್ಯದಿಂದ ಆಕರ್ಷಣೆಯವಾಗಿ ಪ್ರವಾಸಿಗರು ಮೈಸೂರಿಗೆ ಆಗಮಿಸುತ್ತಿದ್ದಾರೆ. ಪ್ರವಾಸೋದ್ಯಮ ಇನ್ನು ಬಹಳಷ್ಟು ಅಭಿವೃದ್ಧಿ ಹೊಂದಬೇಕಾಗಿದೆ. ಇಂದು ವ್ಯಸನ ಮುಕ್ತದ ಜೊತೆಗೆ ಅಪರಾಧ ಮುಕ್ತ ಸಮಾಜ ನಿರ್ಮಾಣ ಮಾಡಬೇಕಾಗಿದೆ. ಪೊಲೀಸ್ ಇಲಾಖೆ ವತಿಯಿಂದ ಮೈಸೂರಿನ ಉದಯಗಿರಿಗೆ ಹೊಸದೊಂದು ಪೊಲೀಸ್ ಠಾಣೆಯನ್ನು ನೀಡಲಾಗಿದೆ. ಸಮಾಜದಲ್ಲಿ ಜನ ಕಾನೂನಿಗೆ ಪಾಲನೆ ಮಾಡುತ್ತಿರುವಾಗ ಸಾರ್ವಜನಿಕರಿಗೆ ನೀವು ಸಹಾಯ ಮಾಡಬೇಕು ಎಂದು ಹೇಳಿದರು.

ಅರಣ್ಯ ವಸತಿ ಮತ್ತು ವಿಹಾರ ಧಾಮಗಳ ನಿಗಮದ ಅಧ್ಯಕ್ಷರು ಹಾಗೂ ಹೆಚ್. ಡಿ. ಕೋಟೆ ಕ್ಷೇತ್ರದ ವಿಧಾನ ಸಭೆ ಶಾಸಕರಾದ ಅನಿಲ್ ಕುಮಾರ್ ಸಿ. ಅವರು ಮಾತನಾಡಿ ಎಚ್. ಡಿ ಕೋಟೆ ತಾಲೂಕಿಗೂ ಹೆಚ್ಚಿನ ಪೊಲೀಸ್ ಠಾಣೆಗಳನ್ನು ನಿರ್ಮಿಸಿಕೊಡಬೇಕು. ಹೆಣ್ಣು ಮಕ್ಕಳು ಇಂದು ಬೆಂಗಳೂರಿನಲ್ಲಿ ಧೈರ್ಯವಾಗಿ ಓಡಾಡುತ್ತಿದ್ದಾರೆ ಅಂದರೆ ಗೃಹ ಇಲಾಖೆ ಕಾರಣ. ವಿವಿಧ ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ನ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ತು ಸದಸ್ಯರಾದ ಸಿ. ಎನ್. ಮಂಜೇಗೌಡ, ಮೈಸೂರು ಪೇಯಿಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್ ಅಧ್ಯಕ್ಷರಾದ ಹೆಚ್. ಡಿ. ಗಣೇಶ್, ದಕ್ಷಿಣವಲಯ ಮಹಾನಿರೀಕ್ಷರಾದ ಡಾ|| ಬೋರಲಿಂಗಯ್ಯ ಎಂ.ಬಿ, ಮೈಸೂರು ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, ಮೈಸೂರು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ಮಲ್ಲಿಕಾರ್ಜುನ ಬಾಲದಂಡಿ, ಕೇಂದ್ರ ಸ್ಥಾನ ಸಂಚಾರ ಮತ್ತು ಅಪರಾಧ ಉಪ ಪೊಲೀಸ್ ಆಯುಕ್ತರಾದ ಕೆ.ಎಸ್. ಸುಂದರ್ ರಾಜ್ ಅವರು ಮತ್ತಿತರರು ಉಪಸ್ಥಿತರಿದ್ದರು.

Share This Article
Leave a Comment