ಚಾಮುಂಡಿ ಬೆಟ್ಟದಲ್ಲಿ ಆಷಾಢ ಶುಕ್ರವಾರದ ಸಿದ್ಧತೆಗಳ ಪರಿಶೀಲನೆ ನಡೆಸಿದ ಡಾ ಯತೀಂದ್ರ ಸಿದ್ದರಾಮಯ್ಯ

latha prabhukumar
2 Min Read

​ಪಬ್ಲಿಕ್ ಅಲರ್ಟ್ ನ್ಯೂಸ್;-ಚಾಮುಂಡಿ ಬೆಟ್ಟದಲ್ಲಿ ಆಷಾಢ ಶುಕ್ರವಾರದ ಸಿದ್ಧತೆಗಳ ಪರಿಶೀಲನೆ ನಡೆಸಿದ ಡಾ ಯತೀಂದ್ರ ಸಿದ್ದರಾಮಯ್ಯ

ಮೈಸೂರು ಜುಲೈ 15(ಕರ್ನಾಟಕ ವಾರ್ತೆ) ಜಿಲ್ಲಾ ಉಸ್ತುವಾರಿ ಹಾಗೂ ನಗರಾಭಿವೃದ್ಧಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಇಂದು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ಆಷಾಢ ಶುಕ್ರವಾರದ ಪೂಜಾ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಕೈಗೊಳ್ಳಲಾಗಿರುವ ಪೂರ್ವ ಸಿದ್ಧತೆಗಳನ್ನು ಖುದ್ದಾಗಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಅವರು, ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದಂತೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಸೂಚನೆ ನೀಡಿದರು.

ಆಷಾಢ ಶುಕ್ರವಾರಗಳಂದು ಸಾಮಾನ್ಯ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ತಡೆಯಲು ವಿಐಪಿ ದರ್ಶನಕ್ಕೆ ಅವಕಾಶ ನೀಡಲಾಗಿದೆ ಎಂದರು.

ಮೊದಲ ಆದ್ಯತೆ ಸಾಮಾನ್ಯ ಭಕ್ತಾದಿಗಳಿಗೆ ಸುಲಭವಾಗಿ ದರ್ಶನ ಸಿಗುವಂತೆ ಮಾಡುವುದು. ಆದ್ದರಿಂದ, ನಿಗದಿತ ಸಮಯದ ನಂತರ ಬರುವ ವಿಐಪಿಗಳು ಸಾಮಾನ್ಯ ಸಾಲಿನಲ್ಲೇ ಬರಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಯಾವುದೇ ರೀತಿಯ ಪ್ರಭಾವಿ ವ್ಯಕ್ತಿಗಳ ಶಿಫಾರಸು ಪತ್ರಗಳನ್ನು ತಂದರೂ ಅವರಿಗೆ ವಿಶೇಷ ರಿಯಾಯಿತಿ ಅಥವಾ ದರ್ಶನ ಇರುವುದಿಲ್ಲ.ಆಷಾಢ ಶುಕ್ರವಾರ ಮತ್ತು ವರ್ಧಂತಿ ಉತ್ಸವದ ದಿನಗಳಂದು ಭಕ್ತಾದಿಗಳ ಖಾಸಗಿ ವಾಹನಗಳಿಗೆ ಬೆಟ್ಟದ ಮೇಲೆ ಹೋಗಲು ಅನುಮತಿ ಇರುವುದಿಲ್ಲ ಎಂದು ತಿಳಿಸಿದರು.

ಪ್ರಭಾವಿ ವ್ಯಕ್ತಿಗಳು ಸೇರಿದಂತೆ ಯಾರೇ ಆದರೂ ತಮ್ಮ ವಾಹನಗಳನ್ನು ಕೆಳಗಿನ ನಿಗದಿತ ಪಾರ್ಕಿಂಗ್ ಮೈದಾನದಲ್ಲಿ ಲಲಿತ ಮಹಲ್ ಮೈದಾನ ಪಾರ್ಕ್ ಮಾಡಿ, ಅಲ್ಲಿಂದ ಉಚಿತ ಕೆಎಸ್‌ಆರ್‌ಟಿಸಿ ಬಸ್ ಮೂಲಕವೇ ಬೆಟ್ಟಕ್ಕೆ ಬರಬೇಕಾಗುತ್ತದೆ.

ಮೆಟ್ಟಿಲುಗಳ ಮೂಲಕ ಬೆಟ್ಟ ಹತ್ತಿ ಬರುವ ಭಕ್ತಾದಿಗಳ ಅನುಕೂಲಕ್ಕಾಗಿ ಕುಡಿಯುವ ನೀರು, ಶೌಚಾಲಯ, ವಿಶ್ರಾಂತಿ ಸ್ಥಳಗಳು ಹಾಗೂ ಉಚಿತ ಬಾದಾಮಿ ಹಾಲು ಮತ್ತು ಬಿಸ್ಕೆಟ್ ವಿತರಣೆಯ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಹೇಳಿದರು.

ಕಂಬಳ ನಮ್ಮ ರಾಜ್ಯದ ಸಾಂಸ್ಕೃತಿಕ ಕ್ರೀಡೆಯಾಗಿದ್ದು, ಪರಿಸರಕ್ಕೆ ಮತ್ತು ಪ್ರಾಣಿಗಳಿಗೆ ಹಾನಿಯಾಗದಂತೆ ಇದನ್ನು ಆಯೋಜಿಸುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಪರಿಶೀಲನೆ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಜಿ ಲಕ್ಷ್ಮಿಕಾಂತ ರೆಡ್ಡಿ , ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್ ಯುಕೇಶ್ ಕುಮಾರ್,ಮೈಸೂರು ನಗರ ಪೊಲೀಸ್‌ ಆಯುಕ್ತೆ ಸೀಮಾ ಲಾಟ್ಕ‌ರ್,ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್‌ ಬಾಲದಂಡಿ, ನಗರ ಪೊಲೀಸ್‌ ಉಪ ಆಯುಕ್ತೆ ಡಾ. ಹರ್ಷಾ ಪ್ರಿಯಂವದ, ಡಿ.ಸಿ.ಪಿ ಸುಂದ‌ರ್ ರಾಜ್, ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರೂಪ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Share This Article
Leave a Comment