ಆರ್ಥಿಕ ಶಿಸ್ತಿನಡಿ ಎಲ್ಲರಿಗೂ ನ್ಯಾಯ ಒದಗಿಸಿದ ಬಜೆಟ್ : ಡಾ.ಹೆಚ್ ಸಿ ಮಹದೇವಪ್ಪ.

latha prabhukumar
1 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ಆರ್ಥಿಕ ಶಿಸ್ತಿನಡಿ ಎಲ್ಲರಿಗೂ ನ್ಯಾಯ ಒದಗಿಸಿದ ಬಜೆಟ್ : ಡಾ.ಹೆಚ್ ಸಿ ಮಹದೇವಪ್ಪ.

2026-27 ನೇ ಸಾಲಿನಲ್ಲಿ ದಾಖಲೆಯ 17 ನೇ ಬಜೆಟ್ ಅನ್ನು ಮಂಡಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಆರ್ಥಿಕ ಶಿಸ್ತಿನ ಪರಿಮಿತಿಯಲ್ಲಿ ಎಲ್ಲರಿಗೂ ನ್ಯಾಯ ಒದಗಿಸುವ ಕೆಲಸವನ್ನು ಮಾಡಿದ್ದಾರೆ.

ಹಣಕಾಸು ಜವಾಬ್ದಾರಿ ಕಾಯ್ದೆಯ ನಿಯಮಾವಳಿಗೆ ಅನುಸಾರವಾಗಿ ನಮ್ಮ ರಾಜ್ಯದ ವಿತ್ತೀಯ ಕೊರತೆಯ ಪ್ರಮಾಣವು ಕೇವಲ 2.5% ನಷ್ಟಿದ್ದು ಸಾಲದ ಪ್ರಮಾಣವು 24.94% ನಷ್ಟಿದೆ.

4.48 ಲಕ್ಷ ಕೋಟಿಯ ರಾಜ್ಯದ ಬಜೆಟ್ ನಲ್ಲಿ ಶಿಕ್ಷಣ, ಆರೋಗ್ಯ, ಕೃಷಿ, ಸಹಕಾರ, ಪರಿಶಿಷ್ಟರ ಕಲ್ಯಾಣದ ಆದಿಯಾಗಿ ಎಲ್ಲಾ ವಲಯಗಳಿಗೂ ಕೂಡಾ ನ್ಯಾಯಬದ್ಧವಾದ ಅನುದಾನ ಹಂಚಿಕೆ ಮಾಡಲಾಗಿದ್ದು, ಎಲ್ಲ ಜಾತಿ, ಧರ್ಮ ಮತ್ತು ಜನಾಂಗದ ಹಿತಾಸಕ್ತಿಯನ್ನು ಕಾಪಾಡುವ ಕೆಲಸವನ್ನು ಸಿದ್ದರಾಮಯ್ಯನವರು ಮಾಡಿದ್ದಾರೆ.

ಮುಖ್ಯವಾಗಿ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ 15000 ಕೋಟಿ ರೂಪಾಯಿಗಳ GST ತೆರಿಗೆ ಪಾಲು ಬಾಕಿಯಿದ್ದು, ಕೇಂದ್ರದ ನಿರಂತರವಾದ ತಾರತಮ್ಯ ಧೋರಣೆಯ ನಡುವೆಯೂ ರಾಜ್ಯದ GDDP ಅಭಿವೃದ್ಧಿ ದರವು 8.1% ರಷ್ಟಿದ್ದು ಕೇಂದ್ರದ GDP ದರಕ್ಕಿಂತಲೂ ಹೆಚ್ಚಿನ ಸಾಧನೆ ಮಾಡಿರುವುದು ಸರ್ಕಾರದ ಆಡಳಿತಾತ್ಮಕ ದಕ್ಷತೆಗೆ ಹಿಡಿದ ಕನ್ನಡಿಯಾಗಿದೆ.

ಇನ್ನು ಸಮಾಜ ಕಲ್ಯಾಣ ಇಲಾಖೆಗೆ ಈ ಬಾರಿ, ಕಳೆದ ಬಾರಿಗಿಂತಲೂ ಹೆಚ್ಚಿನ ಅನುದಾನ ನೀಡಲಾಗಿದ್ದು ಶೋಷಿತರ ಬದುಕಿಗೆ ಸಂಬಂಧಿಸಿದಂತೆ ಇರುವ ಸರ್ಕಾರದ ಬದ್ಧತೆಯು ಮುಂದುವರೆದಿದೆ..

ಮುಖ್ಯವಾಗಿ ವಿಶ್ವವಿದ್ಯಾಲಯಗಳಲ್ಲಿ ಜಾತಿ/ಧರ್ಮಾಧಾರಿತವಾಗಿ ದೌರ್ಜನ್ಯಗಳನ್ನು ತಡೆಯಲು ರೋಹಿತ್ ವೇಮುಲ ಕಾಯ್ದೆಯನ್ನು ಜಾರಿ ಮಾಡಲಾಗಿದ್ದು, ಬೌದ್ಧ ಅಭಿವೃದ್ಧಿ ನಿಗಮ ಸ್ಥಾಪಿಸಿ, ಬೌದ್ಧ ಬಿಕ್ಕುಗಳಿಗೆ 6000 ರೂಪಾಯಿ ವೇತನವನ್ನು ನಿಗದಿ ಪಡಿಸಿರುವುದು ಅತ್ಯಂತ ವಿಶೇಷ ಸಂಗತಿಯಾಗಿದ್ದು ನಮ್ಮ ಸರ್ಕಾರವು ನುಡಿದಂತೆ ನಡೆಯುವ ತನ್ನ ಪರಂಪರೆಯನ್ನು ಮುಂದುವರೆಸಿದೆ.

Share This Article
Leave a Comment