ಟೀಕಿಸಲು ಕಾಂಗ್ರೆಸ್ ಮುಖಂಡರಿಗೆ ನೈತಿಕತೆ ಇಲ್ಲ: ವಿ.ಶೈಲೇಂದ್ರ

latha prabhukumar
2 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ಟೀಕಿಸಲು ಕಾಂಗ್ರೆಸ್ ಮುಖಂಡರಿಗೆ ನೈತಿಕತೆ ಇಲ್ಲ: ವಿ.ಶೈಲೇಂದ್ರ
ಮೈಸೂರು, ಏ.18: ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ ಅವರನ್ನು ಟೀಕಿಸುವ ಯಾವುದೇ ನೈತಿಕತೆ ಕಾಂಗ್ರೆಸ್ ಮುಖಂಡರಿಗೆ ಇಲ್ಲ ಎಂದು ಮಾಜಿ ಉಪ ಮೇಯರ್ ವಿ. ಶೈಲೇಂದ್ರ ಆರೋಪಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು ಅವರು ಚಲವಾದಿ ನಾರಾಯಣಸ್ವಾಮಿ ಕುರಿತು ನೀಡಿರುವ ಹೇಳಿಕೆ ಖಂಡನೀಯವಾಗಿದೆ. ನಾರಾಯಣಸ್ವಾಮಿ ಅವರ ಜಾತಿ ಹಾಗೂ ಸಮುದಾಯದ ಬಗ್ಗೆ ಪ್ರಶ್ನಿಸುವ ಅರ್ಹತೆ ಕಾಂಗ್ರೆಸ್ ನಾಯಕರಿಗೆ ಇಲ್ಲ ಎಂದು ಹೇಳಿದರು.

ಚಲವಾದಿ ಮಹಾಸಭೆ ಒಳ ಮೀಸಲಾತಿ ವಿಚಾರವಾಗಿ ಕರೆ ನೀಡಿದ ಹಿನ್ನೆಲೆಯಲ್ಲಿ ಬಲಗೈ ಸಮಾಜದ ಹಿತದೃಷ್ಟಿಯಿಂದ ನಾರಾಯಣಸ್ವಾಮಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಆದರೆ ಕಾಂಗ್ರೆಸ್ ನಾಯಕರು ಅವರಿಗೆ ವೇದಿಕೆಯಲ್ಲಿ ಮಾತನಾಡಲು ಅವಕಾಶ ನೀಡಲಿಲ್ಲ. ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾತನಾಡುವ ಭಯದಿಂದಲೇ ಅವರನ್ನು ತಡೆಯಲಾಗಿದೆ ಎಂದು ದೂರಿದರು. ಇದೊಂದು ಕಾಂಗ್ರೆಸ್ ಪರವಾಗಿ ನಡೆಸಿದ ಪ್ರತಿಭಟನೆ ಎಂಬುದು ತಿಳಿದ ನಂತರ ಅವರು ಅಲ್ಲಿಂದ ನಿರ್ಗಮಿಸಿದರು ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ದಲಿತ ಸಮುದಾಯಕ್ಕೆ ನಿರಂತರ ಅನ್ಯಾಯ ಮಾಡುತ್ತಾ ಬಂದಿದೆ. 2008ರಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ವಿರೋಧ ಪಕ್ಷದ ನಾಯಕ ಸ್ಥಾನದಿಂದ ಕೆಳಗಿಳಿಸಿ ಸಿದ್ದರಾಮಯ್ಯರನ್ನು ನೇಮಕ ಮಾಡಿದ್ದು, 2013ರಲ್ಲಿ ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡದೇ ಇರುವುದು, ಡಾ.ಜಿ. ಪರಮೇಶ್ವರ್ ಅವರನ್ನು ಸೋಲಿಸಿದ್ದು ಹಾಗೂ 2016ರಲ್ಲಿ ವಿ. ಶ್ರೀನಿವಾಸ್ ಪ್ರಸಾದ್ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟದ್ದು ಕಾಂಗ್ರೆಸ್ ಪಕ್ಷದ ದಲಿತ ವಿರೋಧಿ ಧೋರಣೆಯ ಉದಾಹರಣೆಗಳು ಎಂದು ಆರೋಪಿಸಿದರು.

ಚಲವಾದಿ ನಾರಾಯಣಸ್ವಾಮಿ ಅವರು ಹಲವು ವರ್ಷ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದರೂ ಅವರನ್ನು ಒಮ್ಮೆಯೂ ಶಾಸಕರನ್ನಾಗಿ ಮಾಡಲಿಲ್ಲ. ಆದರೆ ಬಿಜೆಪಿ ಪಕ್ಷವು ಅವರನ್ನು ಸೇರ್ಪಡೆಗೊಂಡ ದಿನದಿಂದಲೇ ಎಸ್‌ಸಿ ಮೋರ್ಚಾ ಅಧ್ಯಕ್ಷ ಸ್ಥಾನ, ಬಳಿಕ ವಿಧಾನ ಪರಿಷತ್ ಸದಸ್ಯತ್ವ ಹಾಗೂ ವಿರೋಧ ಪಕ್ಷದ ನಾಯಕ ಸ್ಥಾನ ನೀಡಿ ಗೌರವಿಸಿದೆ ಎಂದು ಹೇಳಿದರು.

ಆರ್‌ಎಸ್‌ಎಸ್‌ ಒಂದು ದೇಶಭಕ್ತ ಸಂಘಟನೆ ಆಗಿದ್ದು, ಅದರ ಸಮವಸ್ತ್ರವನ್ನು ಟೀಕಿಸುವುದು ಅನಾಗರಿಕತನ ಎಂದು ವಿ.ಶೈಲೇಂದ್ರ ಅಭಿಪ್ರಾಯಪಟ್ಟರು.

ಕಾಂಗ್ರೆಸ್ ಪಕ್ಷ ದಲಿತರನ್ನು ಕೇವಲ ಮತಬ್ಯಾಂಕ್ ಆಗಿ ಬಳಸಿಕೊಂಡಿದ್ದು, ರಾಜ್ಯದಲ್ಲಿ ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡಲು ನಿರಾಕರಿಸುತ್ತಿದೆ ಎಂದು ಆರೋಪಿಸಿದ ಅವರು, ಮುಂದೆಯೂ ಚಲವಾದಿ ನಾರಾಯಣಸ್ವಾಮಿ ಹಾಗೂ ಬಿಜೆಪಿ ನಾಯಕರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದರೆ ಜಾತಿ ನಿಂದನೆ ದೂರು ದಾಖಲಿಸಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸುದ್ದಿಗೋಷ್ಟಿಯಲ್ಲಿ ರಾಕೇಶ್ ಬಟ್ಟ, ಪ್ರತಾಪ್ ಅಶೋಕಪುರಂ ಮಹೇಶ, ವಾಜಮಂಗಲ ಮಹದೇವ ಕೆ. ಗೌತಮ್ ವಿಶ್ವಕರ್ಮ ಹಾಜರಿದ್ದರು.

Share This Article
Leave a Comment