ಪಬ್ಲಿಕ್ ಅಲರ್ಟ್ ನ್ಯೂಸ್:-ಭಾರತದ ಸರ್ವೋಚ್ಛ ನ್ಯಾಯಾಲಯದಿಂದ ‘ಸಮಾಧಾನ ಸಮಾರೋಹ-2026’
ಪ್ರಥಮ ಬಾರಿಗೆ ವಿಶೇಷ ಲೋಕ್ ಅದಾಲತ್ ಆಯೋಜನೆ
ಬೆಂಗಳೂರು, ಏಪ್ರಿಲ್ 30 (ಕರ್ನಾಟಕ ವಾರ್ತೆ):
ಭಾರತದ ಸರ್ವೋಚ್ಛ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸಿಕೊಳ್ಳಲು ಭಾರತದ ಸರ್ವೋಚ್ಛ ನ್ಯಾಯಾಲಯ ‘ಸಮಾಧಾನ ಸಮಾರೋಹ-2026’ ಎಂಬ ವಿಶೇಷ ಲೋಕ ಅದಾಲತ್ನ್ನು ಆಗಸ್ಟ್ 21, 22 ಮತ್ತು 23 ರಂದು ಮೂರು ದಿನಗಳ ಕಾಲ ಹಮ್ಮಿಕೊಂಡಿದೆ ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳು ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರಾದ ಶ್ರೀಮತಿ ಅನು ಸಿವರಾಮನ್ ತಿಳಿಸಿದರು.
ಇಂದು ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಸುಪ್ರೀಂ ಕೋರ್ಟ್ ಪ್ರಥಮ ಬಾರಿಗೆ ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದ ಒಟ್ಟು 4,328 ವಿಚಾರಣೆಗೆ ಬಾಕಿ ಇರುವ ಪ್ರಕರಣಗಳನ್ನು ಸಂಧಾನಕ್ಕಾಗಿ ಗುರುತಿಸಿ ಈ ವಿಶೇಷ ಲೋಕ ಅದಾಲತ್ ಆಯೋಜಿಸಿದ್ದು, ಆಸಕ್ತಿವುಳ್ಳವರು ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಇರುವ ತಮ್ಮ ವ್ಯಾಜ್ಯಗಳನ್ನು ಪರಿಹರಿಸಿಕೊಳ್ಳಲು ನೋಂದಣಿಗೆ ಸಹ ಅವಕಾಶ ಕಲ್ಪಿಸಲಾಗಿದೆ.
ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಸಂಪರ್ಕಿಸುವ ಮೂಲಕ ಸಾರ್ವಜನಿಕರು ತಮ್ಮ ವ್ಯಾಜ್ಯಗಳನ್ನು ಪರಿಹರಿಸಿಕೊಳ್ಳಲು ಇಂದಿನಿಂದಲೇ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಆಯ್ಕೆಯಾದ ವ್ಯಾಜ್ಯಗಳನ್ನು ನೋಂದಾಯಿತ ಕಾನೂನು ಸಮನ್ವಯಕರ ಮಧ್ಯಸ್ಥಿಕೆಯಲ್ಲಿ ತಾವಿರುವ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿಯೇ ಸಮಸ್ಯೆಯನ್ನು ಬಗೆಹರಿಸಿ ಕೊಳ್ಳಬಹುದಾಗಿದೆ.
ಪ್ರಸ್ತುತ ಸುಪ್ರೀಂ ಕೋರ್ಟ್ ಪ್ರಮುಖವಾಗಿ ಬ್ಯಾಂಕಿಂಗ್ ಮತ್ತು ವಿಮಾ ಸಂಬಂಧಿತ ಪ್ರಕರಣಗಳು, ನಾಗರೀಕ ಕಾನೂನು, ಮೋಟಾರು ಅಪಘಾತ ಪರಿಹಾರ ಪ್ರಕರಣಗಳು, ಗ್ರಾಹಕ ವ್ಯಾಜ್ಯಗಳು ಮತ್ತು ರೇರಾ, ಕ್ರಿಮಿನಲ್ ಪ್ರಕರಣಗಳು, ಕೌಟುಂಬಿಕ ವಿವಾದಗಳು, ಕಾರ್ಮಿಕ ಮತ್ತು ಕೈಗಾರಿಕಾ ಕಾನೂನುಗಳು ವಿವಾದಗಳು, ಭೂಸ್ವಾಧೀನ ಮತ್ತು ಪುನರ್ವಸತಿ, ಆಸ್ತಿ ತೆರಿಗೆ, ಬಾಡಿಗೆ ನಿಯಂತ್ರಣ ಮತ್ತು ಸಾರ್ವಜನಿಕ ಆವರಣ (ತೆರವುಗೊಳಿಸುವಿಕೆ) ಕಾಯ್ದೆ, ವರ್ಗಾವಣೆ ಅರ್ಜಿಗಳು ಮತ್ತು ಸೇವಾ ಕಾನೂನುಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಇತ್ಯರ್ಥಕ್ಕೆ ಗುರುತಿಸಲಾಗಿದೆ.
ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದ ಒಟ್ಟು 4,328 ವಿಚಾರಣೆಗೆ ಬಾಕಿ ಇರುವ ಪ್ರಕರಣಗಳನ್ನು ಸಂಧಾನಕ್ಕಾಗಿ ಗುರುತಿಸಲಾಗಿದ್ದು ಅದರಲ್ಲಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 1,245, ಬೆಳಗಾವಿ 517, ಕಲಬುರಗಿ 269, ವಿಜಯಪುರ 213, ಧಾರವಾಡ 188, ಬಾಗಲಕೋಟೆ 159, ಗದಗದಲ್ಲಿ 125, ಬಳ್ಳಾರಿ 109, ತುಮಕೂರು 101, ಕೊಪ್ಪಳ 98, ಹಾವೇರಿ 81, ಉಡುಪಿ 78, ಬೀದರ್ 77, ದಕ್ಷಿಣ ಕನ್ನಡ 75, ಶಿವಮೊಗ್ಗ 69, ರಾಯಚೂರು 69, ಚಿತ್ರದುರ್ಗ 58, ಮೈಸೂರು 56, ದಾವಣಗೆರೆ 47, ಉತ್ತರ ಕನ್ನಡ 35 ಮಂಡ್ಯ 30, ಚಿಕ್ಕಮಗಳೂರು 27, ಹಾಸನ 24, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 18, ರಾಮನಗರ 17, ಚಿಕ್ಕಬಳ್ಳಾಪುರ 17, ಕೊಡಗು 15, ಯಾದಗಿರಿ 14 ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ 4 ಪ್ರಕರಣಗಳು ಒಳಗೊಂಡಿವೆ.
ಕರ್ನಾಟಕದ ವ್ಯಾಪ್ತಿಯ ಹೊರಗಿನಿಂದ 36 ಪ್ರಕರಣಗಳು ವರದಿಯಾಗಿದ್ದು, ಸರಿಯಾಗಿ ಗುರುತಿಸಲಾಗದ ಪ್ರಕರಣಗಳ ಸಂಖ್ಯೆ 347 ಆಗಿದೆ.
ಸುಪ್ರೀಂ ಕೋರ್ಟ್ ಈಗಾಗಲೇ ಗುರುತಿಸಲಾದ ಪ್ರಕರಣಗಳಲ್ಲಿ 937ಕ್ಕೂ ಹೆಚ್ಚು ಪ್ರಕರಣಗಳು ಸರ್ಕಾರವು ಪಕ್ಷವಾಗಿರುವ ಪ್ರಕರಣಗಳಾಗಿವೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಸಕಾರಾತ್ಮಕವಾಗಿ ಸ್ಪಂದಿಸಲು ಮತ್ತು ಪ್ರಕರಣಗಳ ಇತ್ಯರ್ಥಕ್ಕೆ ಮುಂದಾಗುವಂತೆ ಮಾನ್ಯ ಅಡ್ವಕೇಟ್ ಜನರಲ್ ಅವರೊಂದಿಗೆ ಈಗಾಗಲೇ ಸಮಾಲೋಚನೆ ನಡೆಸಲಾಗಿದೆ ಎಂದರು.
ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ಕಾನೂನು ಸೇವೆಗಳ ಸಮಿತಿ ಅಧ್ಯಕ್ಷರಾದ ಆರ್ ದೇವದಾಸ್ ಅವರು ಮಾತನಾಡಿ ಈ ವಿಶೇಷ ಲೋಕ ಅದಾಲತ್ ಜನಸಾಮಾನ್ಯರಿಗೆ ತಮ್ಮ ಕಾನೂನು ಹೋರಾಟವನ್ನು ತ್ವರಿತವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ಮುಗಿಸಿಕೊಳ್ಳಲು ಸಿಕ್ಕಿರುವ ಮಹತ್ವದ ಅವಕಾಶವಾಗಿದೆ. ಇದರಿಂದ ಸಮಯ ಮತ್ತು ಹಣ ಉಳಿತಾಯವಾಗುವುದಲ್ಲದೆ, ಉಭಯ ಪಕ್ಷಗಳ ನಡುವೆ ಸೌಹಾರ್ದ ಸಂಬಂಧ ಉಳಿಯಲು ಸಹಕಾರಿಯಾಗಲಿದೆ. ಸಾರ್ವಜನಿಕರು ಈ ಅದಾಲತ್ ಪ್ರಯೋಜನ ಪಡೆಯುವಂತೆ ಮನವಿ ಮಾಡಿದರು.
ಆಸಕ್ತ ಕಕ್ಷಿದಾರರು ಅಥವಾ ಅವರ ವಕೀಲರು ಸರ್ವೋಚ್ಚ ನ್ಯಾಯಾಲಯದ ವೆಬ್ಸೈಟ್ನಲ್ಲಿ ನೀಡಲಾದ ಗೂಗಲ್ ಫಾರ್ಮ್ ಲಿಂಕ್ https://forms.gle/jqxefqF4BCWzukoP6 ಮೂಲಕ ಮೇ 31, 2026 ರೊಳಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ನೋಟಿಸ್ ಪಡೆದ ಕಕ್ಷಿದಾರರು ತಾವಿರುವ ಜಿಲ್ಲಾ ಅಥವಾ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರದ ಮುಂದೆ ಖುದ್ದಾಗಿ ಅಥವಾ ವಿಡಿಯೋ ಕಾನ್ಫರೆನ್ಸ್ ಮೂಲಕ ಪೂರ್ವ ಸಂಧಾನ ಸಭೆಗಳಿಗೆ ಹಾಜರಾಗಬಹುದು.
ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ:
ಭಾರತದ ಸರ್ವೋಚ್ಚ ನ್ಯಾಯಾಲಯದ ಒನ್ ಸ್ಟಾಪ್ ಕೇಂದ್ರದ ಸಂಪರ್ಕ ಸಂಖ್ಯೆ: 011-23112428, 011-23112528, 011-23116464, 011-23116465, 011-23115652. ಇಮೇಲ್: speciallokadalat2026 @sci.nic.in.
ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಸಂಪರ್ಕ ಸಂಖ್ಯೆ: 011-23382778, 011-23382121 ಹಾಗೂ ಟೋಲ್ ಫ್ರೀ ಸಂಖ್ಯೆ. 15100
ಸರ್ವೋಚ್ಚ ನ್ಯಾಯಾಲಯದ ಕಾನೂನು ಸೇವಾ ಸಮಿತಿಯ ಸಂಪರ್ಕ ಸಂಖ್ಯೆ: 011-23381257, 211-23116353, 011-23116354. ಇಮೇಲ್: sclsc@nic.in
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸಂಪರ್ಕ ಸಂಖ್ಯೆ: 080-22111729, 080-22111714.
ಇಮೇಲ್: samadhansamaroh@gmail.com ಹಾಗೂ ಟೋಲ್ ಫ್ರೀ ಸಂಖ್ಯೆ: 15100 (24*7)
ಉಚ್ಛ ನ್ಯಾಯಾಲಯ ಕಾನೂನು ಸೇವಾ ಸಮಿತಿ, ಬೆಂಗಳೂರು ಸಂಪರ್ಕ ಸಂಖ್ಯೆ: 080-22869988. ಇ-ಮೇಲ್ : hclscbng@gmail.com ಗೆ ಸಂಪರ್ಕಿಸಬಹುದು.
