ಪಬ್ಲಿಕ್ ಅಲರ್ಟ್ ನ್ಯೂಸ್:-ಮೈಸೂರು, ಮೇ 1: ಕಾರ್ಮಿಕ ದಿನಾಚರಣೆಯ ಅಂಗವಾಗಿ ನಗರದ ವೈಭವಿ ಸಿಲ್ಕ್ ಅಂಡ್ ಸ್ಯಾರೀಸ್ ವತಿಯಿಂದ ಸುಮಾರು 75 ಆಟೋ ಚಾಲಕರಿಗೆ ಆಹಾರ ಕಿಟ್ಗಳನ್ನು ವಿತರಿಸುವ ಮೂಲಕ ಮಾನವೀಯತೆ ಹಾಗೂ ಸಾಮಾಜಿಕ ಕಾಳಜಿಯ ಸಂದೇಶ ಸಾರಲಾಯಿತು.
ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಟೋ ಚಾಲಕರಿಗೆ ಅಕ್ಕಿ, ಕಾಳು, ಎಣ್ಣೆ ಸೇರಿದಂತೆ ಅಗತ್ಯ ದಿನಸಿ ಸಾಮಗ್ರಿಗಳನ್ನು ಒಳಗೊಂಡ ಆಹಾರ ಕಿಟ್ಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಚಾಲಕರು ಸಂಸ್ಥೆಯ ಸಮಾಜಮುಖಿ ಕಾರ್ಯವನ್ನು ಮೆಚ್ಚುಗೆ ವ್ಯಕ್ತಪಡಿಸಿದರು.
ಕಿಟ್ ವಿತರಿಸಿ ಮಾತನಾಡಿದ ಅಂಜಲಿ ವಿಜಯ್ ಅವರು, ದಿನದಿಂದ ದಿನಕ್ಕೆ ಗ್ಯಾಸ್, ಇಂಧನ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಆಟೋ ಚಾಲಕರು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಅವರ ಸಂಕಷ್ಟಕ್ಕೆ ಸ್ಪಂದಿಸುವ ಉದ್ದೇಶದಿಂದ ಕಾರ್ಮಿಕ ದಿನಾಚರಣೆಯ ಅಂಗವಾಗಿ ಈ ಸೇವಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಅಂಜಲಿ ಅವರ ತಂದೆ ವಿಜಯ್ ಮಾತನಾಡಿ, “ನಾನು ಹಿಂದೆ ಆಟೋ ಓಡಿಸಿ ಜೀವನ ಕಟ್ಟಿಕೊಂಡಿದ್ದೇನೆ. ಆಟೋ ಚಾಲಕರ ಕಷ್ಟ ಮತ್ತು ಶ್ರಮ ಏನೆಂಬುದು ನನಗೆ ಚೆನ್ನಾಗಿ ತಿಳಿದಿದೆ. ಅವರ ಉತ್ತಮ ಬದುಕಿಗೆ ನೆರವಾಗಲಿ ಎಂಬ ಆಶಯದಿಂದ ಪತ್ನಿ ಶ್ರೀಮತಿ ಭಾರತಿ ಹಾಗೂ ಮಗಳ ಹೆಸರಿನಲ್ಲಿ ಈ ಸೇವಾ ಕಾರ್ಯವನ್ನು ನಡೆಸುತ್ತಿದ್ದೇನೆ,” ಎಂದು ಹೇಳಿದರು.
ಸಮಾಜದ ಎಲ್ಲ ವರ್ಗಗಳಿಗೂ ನೆರವಾಗುವ ಉದ್ದೇಶದಿಂದ ಮುಂದೆಯೂ ಇಂತಹ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಮುಂದುವರಿಸಲಾಗುವುದು ಎಂದು ಸಂಸ್ಥೆಯವರು ತಿಳಿಸಿದರು. ಕಾರ್ಯಕ್ರಮದಲ್ಲಿ ಆಟೋ ಚಾಲಕರು, ಸಂಸ್ಥೆಯ ಸಿಬ್ಬಂದಿ ಹಾಗೂ ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು.
