RCB ಎರಡನೇ ಬಾರಿ IPL ಚಾಂಪಿಯನ್ಸ್

latha prabhukumar
1 Min Read

ಐಪಿಎಲ್ 2026 ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಜಯ ಸಾಧಿಸಿ ಮತ್ತೊಮ್ಮೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಹಣಾಹಣಿಯಲ್ಲಿ ಗುಜರಾತ್ ಟೈಟನ್ಸ್ (GT) ವಿರುದ್ಧ 5 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ ಆರ್‌ಸಿಬಿ, ಸತತ ಎರಡನೇ ಬಾರಿ ಕಪ್ ಮುಡಿಗೇರಿಸಿಕೊಂಡಿದೆ.

ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಆರ್‌ಸಿಬಿ ಬೌಲರ್‌ಗಳು ಆರಂಭದಿಂದಲೇ ಗುಜರಾತ್ ಬ್ಯಾಟರ್‌ಗಳ ಮೇಲೆ ಒತ್ತಡ ಹೇರಿದರು. ಶೂಭ್‌ಮನ್ ಗಿಲ್, ಸಾಯಿ ಸುದರ್ಶನ್ ಹಾಗೂ ಜೋಸ್ ಬಟ್ಲರ್‌ರನ್ನು ಬೇಗನೆ ಔಟ್ ಮಾಡುವ ಮೂಲಕ ಗುಜರಾತ್ ತಂಡವನ್ನು ಸಂಕಷ್ಟಕ್ಕೆ ತಳ್ಳಿದರು. ವಾಷಿಂಗ್ಟನ್ ಸುಂದರ್ ಅರ್ಧಶತಕದ ನೆರವಿನಿಂದ ಗುಜರಾತ್ 20 ಓವರ್‌ಗಳಲ್ಲಿ 155/8 ರನ್‌ಗಳನ್ನು ಕಲೆಹಾಕಿತು. ರಸಿಖ್ ಸಲಾಂ ದರ್ ಮೂರು ವಿಕೆಟ್ ಪಡೆದು ಮಿಂಚಿದರು.

156 ರನ್‌ಗಳ ಗುರಿ ಬೆನ್ನತ್ತಿದ ಆರ್‌ಸಿಬಿಗೆ ವಿರಾಟ್ ಕೊಹ್ಲಿ ಮತ್ತೊಮ್ಮೆ ಆಧಾರಸ್ತಂಭರಾದರು. ಗಾಯದ ಸಮಸ್ಯೆಯ ನಡುವೆಯೂ ಅಜೇಯ 75 ರನ್‌ಗಳ ಅಮೋಘ ಇನ್ನಿಂಗ್ಸ್ ಆಡಿದ ಕೊಹ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಈ ಗೆಲುವಿನೊಂದಿಗೆ “ಈ ಸಲನೂ ಕಪ್ ನಮ್ದೇ” ಎಂಬ ಆರ್‌ಸಿಬಿ ಅಭಿಮಾನಿಗಳ ಘೋಷಣೆ ಮತ್ತೊಮ್ಮೆ ನಿಜವಾಗಿದೆ. ರಾಜ್ಯದಾದ್ಯಂತ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದ್ದು, ಪಟಾಕಿ ಸಿಡಿಸಿ, ಸಿಹಿ ಹಂಚಿ ತಂಡದ ಐತಿಹಾಸಿಕ ಸಾಧನೆಯನ್ನು ಆಚರಿಸಿದರು. ಆರ್‌ಸಿಬಿ ಆಟಗಾರರು ಹಾಗೂ ಅಭಿಮಾನಿಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

Share This Article
Leave a Comment