ವಸ್ತು ಪ್ರದರ್ಶನ ಆವರಣದಲ್ಲಿ ಡಾ. ರಾಜ್‌ಕುಮಾರ್ ಪ್ರತಿಮೆ ಸ್ಥಳಾಂತರ: ಅಧ್ಯಕ್ಷ ಅಯೂಬ್ ಖಾನ್ ವಿರುದ್ಧ ಕನ್ನಡಪರ ಹೋರಾಟಗಾರರ ಆಕ್ರೋಶ

latha prabhukumar
3 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ವಸ್ತು ಪ್ರದರ್ಶನ ಆವರಣದಲ್ಲಿ ಡಾ. ರಾಜ್‌ಕುಮಾರ್ ಪ್ರತಿಮೆ ಸ್ಥಳಾಂತರ: ಅಧ್ಯಕ್ಷ ಅಯೂಬ್ ಖಾನ್ ವಿರುದ್ಧ ಕನ್ನಡಪರ ಹೋರಾಟಗಾರರ ಆಕ್ರೋಶ

ಕನ್ನಡ ಬಾವುಟ, ಡಾ.ರಾಜ್ ಬಾವುಟ ಹಿಡಿದು ಪ್ರತಿಭಟನೆ: ಹಳೆಯ ಸ್ಥಳದಲ್ಲೇ ಪ್ರತಿಮೆ ಮರು ಸ್ಥಾಪನೆಗೆ ಆಗ್ರಹ

ಮೈಸೂರು:20-9-2026

ಮೈಸೂರಿನ ದಸರಾ ವಸ್ತು ಪ್ರದರ್ಶನ ಆವರಣದಲ್ಲಿ ಅಳವಡಿಸಲಾಗಿದ್ದ ಕನ್ನಡದ ಮೇರು ನಟ, ನಾಡಿನ ರತ್ನ ಡಾ. ರಾಜ್‌ಕುಮಾರ್ ಅವರ ಪ್ರತಿಮೆಯನ್ನು ಯಾವುದೇ ಪೂರ್ವ ಸೂಚನೆ ಇಲ್ಲದೆ ಸ್ಥಳಾಂತರಿಸಿರುವ ಕ್ರಮದ ವಿರುದ್ಧ ಕನ್ನಡಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ಅವರ ಏಕಪಕ್ಷೀಯ ನಡೆಯ ವಿರುದ್ಧ ಕಿಡಿಕಾರಿರುವ ಹೋರಾಟಗಾರರು, ಕೂಡಲೇ ಮೊದಲಿದ್ದ ಸ್ಥಳದಲ್ಲೇ ಪ್ರತಿಮೆಯನ್ನು ಮರು ಸ್ಥಾಪಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

ಇಂದು ವಸ್ತು ಪ್ರದರ್ಶನ ಆವರಣದ ಮುಖ್ಯ ದ್ವಾರದ ಎದುರು ಜಮಾಯಿಸಿದ ವಿಧಾನಪರಿಷತ್ ಸದಸ್ಯ ಕೌಟಿಲ್ಯ ರಘು, ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಸಂತೋಷ್ ಕುಮಾರ್ ನೇತೃತ್ವದಲ್ಲಿ ಹಲವು ಕನ್ನಡಪರ ಹೋರಾಟಗಾರರು ಕನ್ನಡ ಬಾವುಟ ಹಾಗೂ ಡಾ. ರಾಜ್‌ಕುಮಾರ್ ಅವರ ಭಾವಚಿತ್ರವಿರುವ ಬಾವುಟಗಳನ್ನು ಹಿಡಿದು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಏನಿದು ಘಟನೆ?
ದಸರಾ ವಸ್ತು ಪ್ರದರ್ಶನ ಆವರಣದ ಪ್ರಮುಖ ಸ್ಥಳದಲ್ಲಿ ಕನ್ನಡಿಗರ ಅಭಿಮಾನದ ಸಂಕೇತವಾಗಿದ್ದ ಡಾ. ರಾಜ್‌ಕುಮಾರ್ ಅವರ ಪ್ರತಿಮೆ ಇತ್ತು. ಆದರೆ ಇತ್ತೀಚೆಗೆ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ಅವರು ಆ ಪ್ರತಿಮೆಯನ್ನು ತೆರವುಗೊಳಿಸಿ ಬೇರೆಡೆಗೆ ಸ್ಥಳಾಂತರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಕ್ರಮ ಕನ್ನಡಿಗರ ಭಾವನೆಗೆ ಧಕ್ಕೆ ತಂದಿದೆ ಎಂದು ಹೋರಾಟಗಾರರು ಆರೋಪಿಸಿದ್ದಾರೆ.

ಪ್ರತಿಭಟನೆಯಲ್ಲಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಕೌಟಿಲ್ಯ ರಘು ಅವರು, “ಡಾ. ರಾಜ್‌ಕುಮಾರ್ ಅವರು ಕೇವಲ ನಟರಲ್ಲ, ಕನ್ನಡದ ಸಂಸ್ಕೃತಿ, ನಾಡಿನ ಅಸ್ಮಿತೆ. ಅವರ ಪ್ರತಿಮೆಯನ್ನು ಅವಮಾನ ಮಾಡಿರುವುದು ಇಡೀ ಕನ್ನಡಿಗರಿಗೆ ಮಾಡಿದ ಅವಮಾನ. ಅಧ್ಯಕ್ಷ ಅಯೂಬ್ ಖಾನ್ ಅವರು ಕನ್ನಡಪರವಾಗಿ ಕೆಲಸ ಮಾಡಬೇಕಿತ್ತು, ಆದರೆ ಕನ್ನಡದ ದಿಗ್ಗಜರ ಪ್ರತಿಮೆ ತೆರವುಗೊಳಿಸುವ ಮೂಲಕ ತಮ್ಮ ಕನ್ನಡ ವಿರೋಧಿ ನಿಲುವು ಪ್ರದರ್ಶಿಸಿದ್ದಾರೆ. ಕೂಡಲೇ ಅದೇ ಗೌರವಯುತ ಸ್ಥಳದಲ್ಲಿ ಪ್ರತಿಮೆಯನ್ನು ಮರು ಸ್ಥಾಪಿಸಬೇಕು, ಸಿದ್ದರಾಮಯ್ಯನವರ ಹೆಸರಿನ ಫೌಂಟನ್ ಹೊಡೆದು ಹಾಕಿದ್ದಾರೆ, ಸ್ವಾಮಿ ವಿವೇಕಾನಂದ ಪ್ರತಿಮೆಯನ್ನು ಕೂಡ ಸ್ಥಳಾಂತರಿಸಿದ್ದಾರೆ, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ತಾಲಿಬಾನ್ ಆಡಳಿತ ಹೇರುವ ಪ್ರಯತ್ನ ಬೇಡ, ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.

ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಸಂತೋಷ್ ಕುಮಾರ್ ಮಾತನಾಡಿ, “ವಸ್ತು ಪ್ರದರ್ಶನ ಪ್ರಾಧಿಕಾರ ಎಂದರೆ ಕನ್ನಡ ನಾಡಿನ ಹೆಮ್ಮೆ. ಅಲ್ಲಿ ಕನ್ನಡದ ರಾಯಭಾರಿ ಡಾ. ರಾಜ್‌ಕುಮಾರ್ ಪ್ರತಿಮೆ ಇರಲೇಬೇಕು. ಅಧ್ಯಕ್ಷರ ಈ ದುರ್ನಡತೆಯನ್ನು ನಾವು ಖಂಡಿಸುತ್ತೇವೆ. ಇದೇ ತಿಂಗಳ 30ನೇ ತಾರೀಖಿನೊಳಗೆ ಪ್ರತಿಮೆಯನ್ನು ಮೊದಲಿದ್ದ ಜಾಗದಲ್ಲೇ ಪ್ರತಿಷ್ಠಾಪಿಸದಿದ್ದರೆ, ಪ್ರಾಧಿಕಾರದ ಕಚೇರಿಗೆ ಮುತ್ತಿಗೆ ಹಾಕಿ ಹೋರಾಟ ತೀವ್ರಗೊಳಿಸುತ್ತೇವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಹಲವು ಕನ್ನಡಪರ ಹೋರಾಟಗಾರರು, ಡಾ. ರಾಜ್ ಅಭಿಮಾನಿಗಳು ಭಾಗವಹಿಸಿ, “ಡಾ. ರಾಜ್‌ಕುಮಾರ್ ಪ್ರತಿಮೆ ಸ್ಥಳಾಂತರ ಖಂಡನೀಯ, ಅಧ್ಯಕ್ಷರ ವಿರುದ್ಧ ಕ್ರಮ ಕೈಗೊಳ್ಳಿ” ಎಂದು ಘೋಷಣೆ ಕೂಗಿದರು.

ಪ್ರತಿಭಟನೆಯಲ್ಲಿ ಡಾ , ರಾಜ್ ಕುಮಾರ್ ಅಭಿಮಾನಿಗಳು ಹಾಗೂ ಕನ್ನಡಪರ ಹೋರಾಟಗಾರರಾದ ರವಿ, ಕೆ , ರಾಜು ಎನ್ , ರಾಜಶೇಖರಣ್ಣ ರಾಮನಳ್ಳಿ,, ಸೋಮಣ್ಣ ರಮ್ನಳ್ಳಿ ಅರವಿಂದ್ ಬೆಂಗಳೂರು ಅನಿಲ್ ಬಂಗಾರಪ್ಪ ಶಿವು ಕೆಲ್ಲಳ್ಳಿ ಬಾಲರಾಜು ಹೆಬ್ಬಾಳ್ ಪ್ರಕಾಶಣ್ಣ ಒಂಟಿಕೊಪ್ಪಲ್, ಶಂಕರ್ ಸೇರಿ ನೂರಾರು ಪ್ರತಿಭಟನಾಕಾರರು ಉಪಸ್ಥಿತರಿದ್ದರು.

Share This Article
Leave a Comment