ಬೆಂಗಳೂರು ದಕ್ಷಿಣ ಜಿಲ್ಲೆ ಹಾಗೂ ಸುತ್ತಮುತ್ತಲ ಭಾಗಕ್ಕೆ ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮೀಜಿಗಳು ದೊಡ್ಡ ದೀಪವಾಗಿದ್ದರು: ಸಿಎಂ ಡಿ ಕೆ ಶಿವಕುಮಾರ್

latha prabhukumar
5 Min Read

ಪಬ್ಲಿಕ್ ಅಲರ್ಟ್ ನ್ಯೂಸ್ :-ಬೆಂಗಳೂರು ದಕ್ಷಿಣ ಜಿಲ್ಲೆ ಹಾಗೂ ಸುತ್ತಮುತ್ತಲ ಭಾಗಕ್ಕೆ ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮೀಜಿಗಳು ದೊಡ್ಡ ದೀಪವಾಗಿದ್ದರು: ಸಿಎಂ ಡಿ ಕೆ ಶಿವಕುಮಾರ್

ಸ್ವಾಮೀಜಿಗಳ ಪುಣ್ಯ ಸಂಸ್ಮರಣೋತ್ಸವ ದಿನದಂದೇ ಅವರು ಅಪೇಕ್ಷೆಪಟ್ಟಿದ್ದ ಸೇತುವೆ ಉದ್ಘಾಟನೆ ನನ್ನ ಭಾಗ್ಯ

ಸೇತುವೆಗೆ ಸ್ವಾಮೀಜಿಯವರ ಹೆಸರು ನಾಮಕರಣ

ನನಗೂ ಹಾಗೂ ಈ ಸಮಾಜಕ್ಕೂ ದೊಡ್ಡ ಸಂಬಂಧ, ಬಾಂಧವ್ಯ ಇದೆ

ಕನಕಪುರ, ಜು.03:

“ಪರಮಪೂಜ್ಯರಾದ ಶ್ರೀ.ಮ.ನಿ.ಪ್ರ.ಸ್ವ. ಡಾ. ಮುಮ್ಮಡಿ ನಿರ್ವಾಣ ಮಹಾಸ್ವಾಮೀಜಿಗಳು ನಮ್ಮ ಬೆಂಗಳೂರು ದಕ್ಷಿಣ ಜಿಲ್ಲೆ ಹಾಗೂ ಸುತ್ತಮುತ್ತಲ ಪ್ರದೇಶಕ್ಕೆ ದೊಡ್ಡ ದೀಪವಾಗಿದ್ದರು” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಸ್ಮರಿಸಿದರು.

ಕನಕಪುರದ ಶ್ರೀ ದೇಗುಲ ಮಠದ ಆವರಣದಲ್ಲಿ ಶುಕ್ರವಾರ ನಡೆದ ಲಿಂಗೈಕ್ಯ ಮುಮ್ಮಡಿ ನಿರ್ವಾಣ ಶ್ರೀಗಳ ಪುಣ್ಯ ಸಂಸ್ಮರಣೆ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಭಾಗವಹಿಸಿ ಮಾತನಾಡಿದರು.

“ಗುರುವಿನ ಪಾದಗಳಿಗೆ ಅಣೆ ಇಟ್ಟರೆ ನಮಗೆ ಜ್ಞಾನ ಹೆಚ್ಚುತ್ತದೆ ಎಂದು ಹಿರಿಯರು ಹೇಳಿದ್ದಾರೆ. ಇದು ಕಣ್ಣೀರು ಹಾಕುವ ದಿನವಲ್ಲ. ಶ್ರೀಗಳ ಕಾರ್ಯವನ್ನು ಉಳಿಸಿಕೊಂಡು ಮುಂದುವರಿಸುವ ದಿನ. ಶ್ರೀಗಳು ಇಲ್ಲಿ ಒಂದು ಸೇತುವೆ ಮಾಡಬೇಕು ಎಂದು ಬಹಳಷ್ಟು ಬಾರಿ ಹೇಳಿದ್ದರು. ಇಂದು ಶ್ರೀಗಳ ಚಿಂತನೆಯಂತೆ ಸೇತುವೆ ಉದ್ಘಾಟನೆ ಮಾಡಿರುವುದು ನನ್ನ ಭಾಗ್ಯ. ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿಗಳ ಹೆಸರನ್ನೇ ಈ ಸೇತುವೆಗೆ ನಾಮಕರಣ ಮಾಡಲಾಗಿದೆ. ಮೌನವೇ ಮಂತ್ರ, ಕಾಯಕವೇ ಪೂಜೆ ಎಂದು ನಂಬಿ ಅವರು ಸಾಧನೆ ಮಾಡಿಕೊಂಡು ಬಂದಿದ್ದರು” ಎಂದು ತಿಳಿಸಿದರು.

ನನಗೂ ಹಾಗೂ ಈ ಸಮಾಜಕ್ಕೂ ದೊಡ್ಡ ಸಂಬಂಧ, ಬಾಂಧವ್ಯ ಇದೆ

“ನಮ್ಮ ವೀರಗಂಗಾಧರ ಅಜ್ಜಯ್ಯನವರು ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ. ನಾಡು ಧರ್ಮ ಸಾಮ್ರಾಜ್ಯವಾಗಲಿ. ಭಕ್ತಿಯ ನೆಲೆ ಬೀಡಾಗಲಿ ಎಂದು ಮಾರ್ಗದರ್ಶನ ನೀಡಿದ್ದಾರೆ. ನನಗೂ ಶಿವನ ಪಾದಕ್ಕೂ ಏನು ಸಂಬಂಧವೋ ಗೊತ್ತಿಲ್ಲ. ನಮ್ಮ ಮನೆಯಲ್ಲಿ ಹಿಂದಿನ ತಲೆಮಾರುಗಳಿಂದ ಯಾರೇ ಹುಟ್ಟಿದರೂ ಕೆಂಪೇಗೌಡ ಎಂದು ಹೆಸರಿಡುವ ಪ್ರವೃತ್ತಿ ಇದೆ. ನಮ್ಮ ತಾಯಿ ಶಿವಾಲ್ದಪ್ಪ ಬೆಟ್ಟದ ಶಿವನಿಗೆ ಹರಕೆ ಕಟ್ಟಿಕೊಂಡ ಹಿನ್ನೆಲೆಯಲ್ಲಿ ನನಗೆ ಶಿವಕುಮಾರ್ ಎಂದು ಹೆಸರಿಟ್ಟರು. ಶ್ರೀ ದೇಗುಲ ಮಠದ ಸ್ವಾಮೀಜಿಗಳ ಬಳಿ ಆಶೀರ್ವಾದ ಪಡೆದಿದ್ದರು. ನಮ್ಮ ಮನೆಯಲ್ಲಿ ಏನೇ ಕೆಲಸವಾಗಬೇಕಾದರೂ ಈ ಮಠಕ್ಕೆ ಬಂದು ಮಾರ್ಗದರ್ಶನ ಪಡೆಯುತ್ತಿದ್ದರು. ನಾನು ಕೂಡ ಧರ್ಮದಿಂದ ಏಳಬೇಕು, ಧರ್ಮದಿಂದ ಬಾಳಬೇಕು, ಧರ್ಮದಿಂದ ಆಳಬೇಕು, ಧರ್ಮದಿಂದ ತಾಳ್ಮೆಯಿಂದರಬೇಕು ಎಂದು ಕೆಲಸ ಮಾಡಿಕೊಂಡು ಬಂದಿದ್ದೇನೆ. ನಾನು ಹೈದರಾಬಾದ್ ಕರ್ನಾಟಕ ವಿದ್ಯಾಸಂಸ್ಥೆಯಲ್ಲಿ ಪಿಯುಸಿ ಓದಿದೆ, ಅಜ್ಜಯ್ಯ ಅವರು ಸ್ಥಾಪಿಸಿರುವ ರೇಣುಕಾಚಾರ್ಯ ಕಾಲೇಜಿನಲ್ಲಿ ಪದವಿ ಓದಿದೆ. ಹೀಗೆ ನನಗೂ ಈ ಸಮಾಜಕ್ಕೂ ದೊಡ್ಡ ಸಂಬಂಧ, ಬಾಂಧವ್ಯ ಇದೆ. ಇದನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗುತ್ತೇನೆ” ಎಂದು ತಿಳಿಸಿದರು.

“ನಾನು ಅಜ್ಜಯ್ಯನವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದಾಗ ಸಾಕಷ್ಟು ಚರ್ಚೆಯಾಯಿತು. ಅನೇಕ ಗಣ್ಯರು ನನ್ನನ್ನು ವಿವಿಧ ರೀತಿಯಲ್ಲಿ ಕೇಳಿದರು. ನಾನು ಅವರಿಗೆ ಇದು ನನ್ನ ನಂಬಿಕೆ ಎಂದು ಹೇಳಿದೆ. ನಮ್ಮ ಆರಾಧ್ಯ ದೈವ, ನಂಬಿಕೆ, ಮಾರ್ಗದರ್ಶನ ಕೊಟ್ಟವರನ್ನು, ಕಷ್ಟಕಾಲದಲ್ಲಿ ನಿಂತವರನ್ನು ನಾವು ಸ್ಮರಿಸಬೇಕು. ಈ ವಿಚಾರ ನನಗೆ, ಯಡಿಯೂರಪ್ಪನವರಿಗೆ, ಸೋಮಣ್ಣ ಅವರಿಗೆ ಗೊತ್ತು. ಬೇರೆಯವರಿಗೆ ಇದು ಗೊತ್ತಿಲ್ಲ” ಎಂದು ತಿಳಿಸಿದರು.

ಮುಮ್ಮಡಿ ಶ್ರೀಗಳು ತಮ್ಮನ್ನು ತಾವು ಸಮಾಜಕ್ಕೆ ಮುಡಿಪಾಗಿಟ್ಟಿದ್ದರು

“ಇಂದು ಸ್ವಾಮೀಜಿಗಳು ನನ್ನ ಕೈನಿಂದ ಒಂದು ಪುಸ್ತಕ ಬಿಡುಗಡೆ ಮಾಡಿಸಿದರು. ಅದರಲ್ಲಿ ಪರೋಪಕಾರಾಯ ಫಲಂತಿ ವೃಕ್ಷಾಃ ಪರೋಪಕಾರಾಯ ವಹಂತಿ ನದ್ಯಃ, ಪರೋಪಕಾರಾಯ ದುಹಂತಿ ಗಾವಃ ಪರೋಪಕಾರಾರ್ಥಮಿದಂ ಶರೀರಮ್ ಎಂಬ ಶ್ಲೋಕವಿದೆ. ಅಂದರೆ ಮರ ತನ್ನ ಸ್ವಂತಕ್ಕಿಂದ ಬೇರೆಯವರಿಗೆ ಹಣ್ಣು, ನೆರಳು ಕೊಟ್ಟು ಉಪಕಾರ ಮಾಡುತ್ತದೆ. ಅದರಂತೆ ನದಿ ಕೂಡ ತನ್ನ ಸ್ವಂತಕ್ಕಿಂತ ಬೇರೆ ಪ್ರಾಣಿಗಳು, ಜೀವಿಗಳಿಗೆ ನೀರು ಒದಗಿಸುತ್ತದೆ. ಹಸು ಕೂಡ ತನ್ನ ಸ್ವಂತಕ್ಕಿಂತ ನಮಗೆ ಹಾಲು ನೀಡುವು, ಗೊಬ್ಬರ, ವ್ಯವಸಾಯಕ್ಕೆ ನೆರವು ನೀಡುತ್ತದೆ. ಅದೇ ರೀತಿ ನಮ್ಮ ಶರೀರ ಕೂಡ ಸಮಾಜದಲ್ಲಿ ಪರೋಪಕಾರಕ್ಕೆ ಸೀಮಿತವಾದದ್ದು ಎಂದು ಈ ಶ್ಲೋಕದ ಅರ್ಥ. ಅದೇ ರೀತಿ ನಮ್ಮ ಮುಮ್ಮಡಿ ಶ್ರೀಗಳು ತಮ್ಮನ್ನು ತಾವು ಸಮಾಜಕ್ಕೆ ಮುಡಿಪಾಗಿಟ್ಟಿದ್ದರು” ಎಂದು ತಿಳಿಸಿದರು.

“ಈ ಮಠಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ನಮ್ಮ ಮಹಾರಾಜರೂ ಇಲ್ಲಿಗೆ ಆಗಮಿಸಿದ್ದರು. ನಮ್ಮ ಸಿದ್ದಗಂಗಾ ಮಠ ಹಾಗೂ ಸುತ್ತೂರು ಮಠದ ಶ್ರೀಗಳು ಕೂಡ ಮಾರ್ಗದರ್ಶನದಲ್ಲಿ ಬೆಳೆಯುತ್ತಿದೆ. ದೇಹಕ್ಕೆ ಅಂತ್ಯವಿದೆ. ಆದರೆ ಗುರುಗಳ ಚೇತನಕ್ಕೆ ಸಾವಿಲ್ಲ ಎಂಬುದು ನಮ್ಮ ನಂಬಿಕೆ. ಆವರ ಮಾರ್ಗದರ್ಶನದಲ್ಲಿ ನಾವು ಬದುಕುತ್ತಿದ್ದೇವೆ. ಗುರುವೇ ಜಂಗಮ, ಗುರುವೇ ಆಚಾರ, ಗುರುವೇ ಶಿವಪ್ರಸಾದ ಎಂದು ನಮ್ಮ ಹಿರಿಯರು ಮಾರ್ಗದರ್ಶನ ನೀಡಿದ್ದಾರೆ” ಎಂದರು.

ನಾನು ಮುಖ್ಯಮಂತ್ರಿಯಾಗಬೇಕು ಎಂದು ಹರಸಿದ್ದರು

“ನಾನು ಕಳೆದ 45 ವರ್ಷಗಳಿಂದ ಇಲ್ಲಿಗೆ ಬಂದಾಗೆಲ್ಲಾ ಎಷ್ಟೇ ಒತ್ತಡ, ಕಷ್ಟವಿದ್ದರೂ ನನ್ನನ್ನು ಕುಟುಂಬದ ಸದಸ್ಯನಂತೆ ನನಗೆ ಆಶೀರ್ವಾದ ಮಾಡಿ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಸಿದ್ದಾರೆ. ನಾನು ಚುನಾವಣೆಯಲ್ಲಿ ಅರ್ಜಿ ಹಾಕುವಾಗ ಅವರು ಹಾಸಿಗೆ ಹಿಡಿದಿದ್ದರು. ಆಗ ಅವರನ್ನು ಭೇಟಿ ಮಾಡಿದಾಗ, ನೀವು ಮುಖ್ಯಮಂತ್ರಿಯಾಗಬೇಕು ಎಂಬುದೇ ನಮ್ಮ ಆಸೆ ಎಂದು ಚುನಾವಣೆಗೆ ಹಣ ಕೊಟ್ಟರು. ಇಂದು ನನಗೆ ದೊಡ್ಡ ಜವಾಬ್ದಾರಿ ವಹಿಸಿದಿದ್ದಾರೆ. ಮಠದ ಭಕ್ತನಾಗಿ ಮುಂದೆ ನಡೆಯಬೇಕಾದ ಕಾರ್ಯಗಳ ಹೊರೆಯನ್ನು ನನಗೆ ಹೊರಿಸಿದ್ದಾರೆ. ಮನೆ ಹುಷಾರು, ಮಠ ಹುಷಾರು ಎಂದು ನಮ್ಮ ಹಿರಿಯರು ಹೇಳಿದ್ದಾರೆ. ಅದರಂತೆ ನನ್ನ ಮನೆಯನ್ನು ಕಾಪಾಡಿಕೊಳ್ಳುವಂತೆ ಈ ಮಠವನ್ನು ಕಾಪಾಡಿಕೊಳ್ಳುತ್ತೇನೆ ಎಂದು ಭರವಸೆ ನೀಡುತ್ತೇನೆ” ಎಂದು ತಿಳಿಸಿದರು.

ಮಠಗಳ ರಕ್ಷಣೆಗೆ ಕೈಲಾದಷ್ಟು ದಾನ ಮಾಡಿ:

“ಅನ್ನ, ಅಕ್ಷರ ಹಾಗೂ ಆಶ್ರಯ ನೀಡಿ, ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ದೊಡ್ಡ ಶಕ್ತಿಯಾಗಿ ರೂಪಿಸಿದ್ದಾರೆ. ಎಷ್ಟೇ ರಾಜಕೀಯ ಜಂಜಾಟವಿದ್ದರೂ ನಾನು ಕನಕಪುರಕ್ಕೆ ಬಂದಾಗ ಶ್ರೀಗಳನ್ನು ಭೇಟಿ ಮಾಡಿ ಮನಸ್ಸಿಗೆ ನೆಮ್ಮದಿ ಪಡೆದುಕೊಳ್ಳುತ್ತಿದ್ದೆ. ಈ ಮಠವನ್ನು ಕೇವಲ ಡಿ ಕೆ ಶಿವಕುಮಾರ್ ಮಾತ್ರವಲ್ಲ ಎಲ್ಲರೂ ಸೇರಿ ಉಳಿಸಬೇಕು. ನಮಗೆ ಕೈ ಇರುವುದೇ ಸಾಧ್ಯವಾದಷ್ಟು ದಾನ ಮಾಡಲು. ನಾವು ಎಷ್ಟೇ ಸಂಪಾದನೆ ಮಾಡಿದರೂ ಹೊತ್ತುಕೊಂಡು ಹೋಗುವುದಿಲ್ಲ. ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ, ಜನನ ಉಚಿತ, ಮರಣ ಖಚಿತ. ಈ ಹಟ್ಟುಸಾವಿನ ಮಧ್ಯೆ ನಾವು ಏನು ಮಾಡುತ್ತೇವೆ ಎಂಬುದು ಮುಖ್ಯ. ಹೀಗಾಗಿ ನಮ್ಮ ಜೀವನದಲ್ಲಿ ನಮ್ಮ ಕೈಯಲ್ಲಿ ಸಾಧ್ಯವಾದಷ್ಟು ದಾನ ಧರ್ಮ ಮಾಡಬೇಕು” ಎಂದು ಕರೆ ನೀಡಿದರು.

“ನಮ್ಮ ಶ್ರೀಗಳು ಉತ್ತಮ ಚಿಂತನೆ ಮಾಡುತ್ತಾ ಸರಳ ಜೀವನ ನಡೆಸಿದರು. ಲಿಂಗವೇ ಗುರು, ಲಿಂಗವೇ ಜಂಗಮ, ಲಿಂಗವೇ ಪರಮಾತ್ಮ, ಲಿಂಗವಿಲ್ಲದ ಬದುಕು ದಿಕ್ಕಿಲ್ಲದ ಬದುಕು ಎಂದು ಬಸವಣ್ಣನವರು ಹೇಳಿದ್ದಾರೆ. ಶ್ರೀಗಳ ಸೇವೆ, ಪರಂಪರೆ ಮುಂದಿನ ಪೀಳಿಗೆಗೆ ದಾರಿದೀಪವಾಗಲಿ. ಅವರ ಸತ್ಯ, ದಯೆ, ಧರ್ಮದ ಮಾರ್ಗದರ್ಶನದಲ್ಲಿ ನಡೆಯೋಣ. ಧರ್ಮ ಇದ್ದರೆ ನಾವೆಲ್ಲ. ರಾಜಕಾರಣದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕಾರಣ ಇರಬಾರದು ಎಂದು ನಂಬಿದ್ದೇನೆ” ಎಂದು ತಿಳಿಸಿದರು.

Share This Article
Leave a Comment