ದಸರಾಗೆ ಗಜಪಡೆ ಆಯ್ಕೆ ಪ್ರಕ್ರಿಯೆ ಆರಂಭ: ಇದೇ ಮೊದಲ ಬಾರಿಗೆ ಆನೆಗಳಿಗೆ ಇಸಿಜಿ ಪರೀಕ್ಷೆ

latha prabhukumar
2 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ದಸರಾಗೆ ಗಜಪಡೆ ಆಯ್ಕೆ ಪ್ರಕ್ರಿಯೆ ಆರಂಭ: ಇದೇ ಮೊದಲ ಬಾರಿಗೆ ಆನೆಗಳಿಗೆ ಇಸಿಜಿ ಪರೀಕ್ಷೆ!

ಅರಣ್ಯ ಇಲಾಖೆ ಇದೇ ಮೊದಲ ಬಾರಿಗೆ ದಸರಾ ಆನೆಗಳ ಹೃದಯ ತಪಾಸಣೆಗಾಗಿ ಇಸಿಜಿ ಪರೀಕ್ಷೆ ನಡೆಸಿದೆ.
ELEPHANTS HEART HEALTH CHECKUP
ಮೊದಲ ಬಾರಿಗೆ ಆನೆಗಳಿಗೆ ಇಸಿಜಿ ಪರೀಕ್ಷೆ (ETV Bharat)

ಮೈಸೂರು: ನಾಡಹಬ್ಬ ದಸರಾದಲ್ಲಿ ಭಾಗವಹಿಸುವ ಗಜಪಡೆಯ ಆಯ್ಕೆ ಪ್ರಕ್ರಿಯೆಯನ್ನು ಅರಣ್ಯ ಇಲಾಖೆ ಆರಂಭಿಸಿದ್ದು, ಮೊದಲ ಬಾರಿಗೆ ಆನೆಗಳ ಹೃದಯ ತಪಾಸಣೆಗಾಗಿ ಇಸಿಜಿ(ಎಲೆಕ್ಟ್ರೋಕಾರ್ಡಿಯೋಗ್ರಾಮ್) ಪರೀಕ್ಷೆ ನಡೆಸಲಾಗಿದೆ.

ಮೊದಲ ಹಂತವಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ವೈದ್ಯರ ತಂಡ ತಮ್ಮ ಸಿಬ್ಬಂದಿಗಳೊಂದಿಗೆ ಮಡಿಕೇರಿಯ ಮತ್ತಿಗೋಡು ಹಾಗೂ ದುಬಾರೆ ಆನೆ ಶಿಬಿರಗಳಿಗೆ ಭೇಟಿ ನೀಡಿ ಸುಮಾರು 20ಕ್ಕೂ ಹೆಚ್ಚು ಸಾಕಾನೆಗಳ ಸಮಗ್ರ ಆರೋಗ್ಯ ತಪಾಸಣೆ ನಡೆಸಿದೆ.

elephants heart health checkup
ಆನೆಗೆ ಇಸಿಜಿ ಪರೀಕ್ಷೆ (ETV Bharat)
ಏನೇನು ತಪಾಸಣೆ: ದಸರಾದಲ್ಲಿ ಭಾಗವಹಿಸುವ ಹೆಣ್ಣಾನೆಗಳ ರಕ್ತ ಹಾಗೂ ಮಲದ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದ್ದು, ಈ ಹೆಣ್ಣಾನೆಗಳಿಗೆ ಅಲ್ಟ್ರಾಸೌಂಡ್ ಮೂಲಕ ಗರ್ಭಧಾರಣೆ ಪರೀಕ್ಷೆಯನ್ನು ಮಾಡಲಾಗಿದೆ. ಜೊತೆಗೆ ಮೊದಲ ಬಾರಿಗೆ ಹೆಣ್ಣು ಮತ್ತು ಗಂಡಾನೆಗಳಿಗೆ ಇಸಿಜಿ ಮೂಲಕ ಹೃದಯ ಆರೋಗ್ಯ ತಪಾಸಣೆಯನ್ನು ನಡೆಸಲಾಗಿದೆ. ಈ ಪರೀಕ್ಷೆಯ ನಂತರ ದಸರಾ ಗಜಪಡೆಯ ತಾತ್ಕಾಲಿಕ ಆಯ್ಕೆ ಪಟ್ಟಿ ಸಿದ್ಧಪಡಿಸಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಎಲ್ಲ ಆನೆಗಳಿಗೂ ಇಸಿಜಿ ಪರೀಕ್ಷೆ ಮಾಡಲು ಚಿಂತನೆ: ಶಿಬಿರದ ಆನೆಗಳಿಗೆ ಹೃದಯ ಪರೀಕ್ಷೆ ಮಾಡುವ ಇಸಿಜಿ ಕಿಟ್ ಮೊದಲ ಬಾರಿಗೆ ಬಂದಿದೆ. ಶಿಬಿರದ ಆನೆಗಳಿಗೆ ಮೊದಲ ಬಾರಿಗೆ ಹೃದಯ ಪರೀಕ್ಷೆ ಮಾಡಲಾಗಿದೆ‌‌. ಮುಂದೆ ಎಲ್ಲ ಆನೆಗಳಿಗೂ ಇಸಿಜಿ ಪರೀಕ್ಷೆ ಮಾಡುವ ಚಿಂತನೆ ಇದೆ ಎಂದು ಪಶುವೈದ್ಯ ಡಾ.ಮುಜಿದ್ ತಿಳಿಸಿದರು.

elephants heart health checkup
ಆನೆಗೆ ಇಸಿಜಿ ಪರೀಕ್ಷೆ (ETV Bharat)
ದಸರಾ ಗಜಪಡೆ ಆಯ್ಕೆ ಪ್ರಕ್ರಿಯೆ ಹೇಗೆ?: ಮೈಸೂರು ದಸರಾ-2026 ದಸರಾ ಮಹೋತ್ಸವದಲ್ಲಿ ಭಾಗವಹಿಸುವ ಹೆಣ್ಣು ಮತ್ತು ಗಂಡಾನೆಗಳ ಆಯ್ಕೆ ಪ್ರಕ್ರಿಯೆಯನ್ನು ಅರಣ್ಯ ಇಲಾಖೆ ಆರಂಭಿಸಿದ್ದು, ಈಗಾಗಲೇ ಕೊಡಗಿನ ಮತ್ತಿಗೋಡು ಹಾಗೂ ದುಬಾರೆ ಆನೆ ಶಿಬಿರ ಜೊತೆಗೆ ಬಂಡೀಪುರದ ರಾಂಪುರ ಆನೆ ಶಿಬಿರಗಳಿಗೆ ಅರಣ್ಯ ಇಲಾಖೆಯ ಪಶು ವೈದ್ಯರ ತಂಡ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸುಮಾರು 20ಕ್ಕೂ ಹೆಚ್ಚು ಆನೆಗಳ ಆರೋಗ್ಯ ತಪಾಸಣೆ ಮಾಡಿ ಆನೆಗಳ ರಕ್ತ ಹಾಗೂ ಮಲದ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇದರ ಜೊತೆಗೆ ಹೆಣ್ಣಾನೆಗಳ ಗರ್ಭಧಾರಣಾ ಪರೀಕ್ಷೆಯನ್ನು ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮೂಲಕ ಮಾಡಲಾಗಿದೆ. ಈ ಪರೀಕ್ಷೆಯ ಮೂಲಕ ಆನೆಗಳ ಆರೋಗ್ಯ ಸ್ಥಿತಿ ಹಾಗೂ ಹೆಣ್ಣಾನೆಗಳ ಗರ್ಭಧಾರಣಾ ಸ್ಥಿತಿ ತಿಳಿಯಲು ಅನುಕೂಲವಾಗುತ್ತದೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

Share This Article
Leave a Comment