5 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕ ಜಿ.ಟಿ. ದೇವೇಗೌಡ ಚಾಲನೆ

latha prabhukumar
2 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-5 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕ ಜಿ.ಟಿ. ದೇವೇಗೌಡ ಚಾಲನೆ

ಕೈಗಾರಿಕಾ ಪ್ರದೇಶದ ಅಭಿವೃದ್ಧಿ, ಹೂಡಿಕೆ ಮತ್ತು ಉದ್ಯೋಗಕ್ಕೆ ಅನುಕೂಲ

ಮೈಸೂರು: ಬೆಳವಾಡಿ ಕೈಗಾರಿಕಾ ಪ್ರದೇಶದ ಆಟೋಮೊಟಿವ್‌ ಆಕ್ಸೆಲ್‌ನಿಂದ ರಾಣೆ ಮದ್ರಾಸ್‌ ಮೂಲಕ ಹೆಬ್ಬಾಳ ಕೈಗಾರಿಕಾ ಪ್ರದೇಶದ ವರ್ತುಲ ರಸ್ತೆಯಲ್ಲಿರುವ ಮೈಸೂರು ರಫ್ತು ಕೇಂದ್ರದವರೆಗೆ 5 ಕೋಟಿ ರೂ. ವೆಚ್ಚದಲ್ಲಿ 2.5 ಕಿ.ಮೀ. ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಜಿ.ಟಿ. ದೇವೇಗೌಡ ಸೋಮವಾರ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಕೈಗಾರಿಕಾ ಪ್ರದೇಶದಲ್ಲಿ ಗುಣಮಟ್ಟದ ರಸ್ತೆ ನಿರ್ಮಾಣವು ಕೇವಲ ಸಂಚಾರ ಸುಧಾರಣೆಗೆ ಸೀಮಿತವಾಗದೆ ಕೈಗಾರಿಕಾ ಬೆಳವಣಿಗೆ, ಹೊಸ ಹೂಡಿಕೆ, ಉದ್ಯೋಗ ಸೃಷ್ಟಿ ಹಾಗೂ ಪ್ರಾದೇಶಿಕ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಹೇಳಿದರು.

ಉತ್ತಮ ಮೂಲಸೌಕರ್ಯ ಹೊಂದಿರುವ ಕೈಗಾರಿಕಾ ಪ್ರದೇಶಗಳು ಹೊಸ ಕೈಗಾರಿಕೆಗಳು ಹಾಗೂ ಹೂಡಿಕೆದಾರರನ್ನು ಆಕರ್ಷಿಸುತ್ತವೆ. ಇದರಿಂದ ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳು ಹೆಚ್ಚಾಗಲಿದ್ದು, ಬಂದರು, ವಿಮಾನ ನಿಲ್ದಾಣ, ರೈಲು ನಿಲ್ದಾಣ ಹಾಗೂ ರಾಷ್ಟ್ರೀಯ ಹೆದ್ದಾರಿಗಳೊಂದಿಗೆ ಸಂಪರ್ಕ ಸುಲಭವಾಗಿ ರಫ್ತು ಚಟುವಟಿಕೆಗೂ ಉತ್ತೇಜನ ದೊರೆಯಲಿದೆ ಎಂದು ತಿಳಿಸಿದರು.

ಕೈಗಾರಿಕಾ ಪ್ರದೇಶದಲ್ಲಿ ಸುಗಮ ಸಾರಿಗೆ ವ್‌ಯವಸ್ಥೆ ಅತ್ಯಂತ ಮುಖ್ಯವಾಗಿದ್ದು, ಕೈಗಾರಿಕೋದ್ಯಮಿಗಳ ಬಹುಕಾಲದ ಬೇಡಿಕೆಯಂತೆ ಈ ರಸ್ತೆ ನಿರ್ಮಿಸಲಾಗುತ್ತಿದೆ. ರಸ್ತೆ ಪೂರ್ಣಗೊಂಡ ಬಳಿಕ ಕಚ್ಚಾ ವಸ್ತು ಮತ್ತು ತಯಾರಿಸಿದ ಉತ್ಪನ್ನಗಳ ಸಾಗಣೆ ವೇಗವಾಗಲಿದ್ದು, ಸಾರಿಗೆ ವೆಚ್ಚ, ಇಂಧನ ಬಳಕೆ ಹಾಗೂ ವಾಹನಗಳ ನಿರ್ವಹಣಾ ವೆಚ್ಚ ಕಡಿಮೆಯಾಗಲಿದೆ. ಸರಕು ಪೂರೈಕೆ ಮತ್ತು ವಿತರಣೆಯಲ್ಲಿ ವಿಳಂಬ ತಪ್ಪಿ ಉತ್ಪಾದನಾ ಚಟುವಟಿಕೆಗಳು ಮತ್ತಷ್ಟು ಸುಗಮವಾಗಲಿವೆ ಎಂದು ಹೇಳಿದರು.

ಉತ್ತಮ ರಸ್ತೆಯಿಂದ ಕಾರ್ಮಿಕರು ಹಾಗೂ ಸಿಬ್ಬಂದಿ ಸುರಕ್ಷಿತವಾಗಿ ಮತ್ತು ಸಮಯಕ್ಕೆ ಸರಿಯಾಗಿ ಕಾರ್ಯಸ್ಥಳ ತಲುಪಲು ಅನುಕೂಲವಾಗುತ್ತದೆ. ಇದರ ಜತೆಗೆ ಸಣ್ಣ ಕೈಗಾರಿಕೆಗಳು, ಹೋಟೆಲ್‌ಗಳು, ಗೋದಾಮುಗಳು, ಲಾಜಿಸ್ಟಿಕ್‌್ಸ ಸೇರಿದಂತೆ ಪೂರಕ ವಾಣಿಜ್ಯ ಚಟುವಟಿಕೆಗಳು ಅಭಿವೃದ್ಧಿಯಾಗಲಿದ್ದು, ಕೈಗಾರಿಕಾ ಪ್ರದೇಶದ ಭೂಮಿ ಹಾಗೂ ವಾಣಿಜ್ಯ ಆಸ್ತಿಗಳ ಮೌಲ್ಯವೂ ಹೆಚ್ಚಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಮೈಸೂರು ಕೈಗಾರಿಕೆಗಳ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್‌ಕುಮಾರ್‌ ಜೈನ್‌, ಹೂಟಗಳ್ಳಿ ನಗರಸಭೆ ಆಯುಕ್ತ ನರಸಿಂಹಮೂರ್ತಿ, ಕೆಎಐಡಿಬಿ ಅಭಿವೃದ್ಧಿ ಅಧಿ ಕಾರಿ ಮಾದೇಶ್‌, ಪರಿಶಿಷ್ಟ ಪಂಗಡ ಕೈಗಾರಿಕಾ ಸಂಘದ ಅಧ್ಯಕ್ಷ ಮಂಜುನಾಥ್‌ ಹಾಗೂ ಇತರರು ಉಪಸ್ಥಿತರಿದ್ದರು.

Share This Article
Leave a Comment