ಶೀಘ್ರ ಡಿಕೆಶಿಯವರಿಂದ ಲ್ಯಾನ್ಸ್‌ಡೌನ್‌, ದೇವರಾಜ ಮಾರುಕಟ್ಟೆ ವೀಕ್ಷಣೆ: ತನ್ವೀರ್‌ಸೇಠ್

latha prabhukumar
4 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ಶೀಘ್ರ ಡಿಕೆಶಿಯವರಿಂದ ಲ್ಯಾನ್ಸ್‌ಡೌನ್‌, ದೇವರಾಜ ಮಾರುಕಟ್ಟೆ ವೀಕ್ಷಣೆ: ತನ್ವೀರ್‌ಸೇಠ್‌
ಮೈಸೂರು: ಶೀಘ್ರದಲ್ಲೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ನಗರದ ಪ್ರಮುಖ ಲ್ಯಾನ್ಸ್‌ ಡೌನ್‌ ಕಟ್ಟಡ ಹಾಗೂ ದೇವರಾಜ ಮಾರುಕಟ್ಟೆಯನ್ನು ವೀಕ್ಷಣೆ ಮಾಡಿ ಅದರ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಲಿದ್ದಾರೆ ಎಂದು ಶಾಸಕ ತನ್ವೀರ್‌ ಸೇಠ್‌ ತಿಳಿಸಿದರು.
ಕರ್ನಾಟಕ ಪೊಲೀಸ್‌ ಅಕಾಡೆಮಿ ರಸ್ತೆಯ ಬೀದಿ ದೀಪ ಅಳವಡಿಕೆಗೆ ಚಾಲನೆ ನೀಡಿ ಮಾತನಾಡಿದ ಅವರು, ಇತ್ತೀಚೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿ ಮಾಡಿದ ಸಂಧರ್ಭದಲ್ಲಿ ಮೈಸೂರಿನ ಅಳಿಯನಾಗಿ ನಾಲ್ವಡಿಯವರು ಹಾಕಿಕೊಟ್ಟ ಅಭಿವೃದ್ಧಿ ಪಂಕ್ತಿಯಲ್ಲಿ ಅವರು ಸಾಗಬೇಕೆಂಬ ಚಿಂತನೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದ ಲ್ಯಾನ್ಸ್‌ ಡೌನ್‌ ಕಟ್ಟಡ, ದೇವರಾಜ ಮಾರುಕಟ್ಟೆಯನ್ನು ತಾವೇ ಬಂದು ಪರಿಶೀಲನೆ ಮಾಡುವುದಾಗಿ ಹೇಳಿದ್ದು, ಈ ವೇಳೆಗೆ ನ್ಯಾಯಾಲಯದ ಆದೇಶ ಎನಿದೆ. ಸರ್ಕಾರದಿಂದ ಯಾವ ರೀತಿಯ ಕೆಲಸ ಮಾಡಬೇಕೆಂದು ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ದಸರಾ ವೇಳೆ ಅಥವಾ ಅನಂತರದಲ್ಲಾದರೂ ಮೈಸೂರು ಜನತೆಗೆ ಕೊಡುಗೆ ಆಗಿ ಈ ಕೆಲಸ ಮಾಡಬೇಕೆಂದು ಹೇಳಿದ್ದೇವೆ. ದೇವರಾಜ, ವಿನೋಬಾ ಮಾರುಕಟ್ಟೆ ನವೀಕರಣದ ವೇಳೆಯಲ್ಲೇ ನಗರದ ನಾಲ್ಕು ವಿಧಾನಸಭಾ ಕ್ಷೇತ್ರದಲ್ಲಿ ಪ್ರತ್ಯೇಕ ಹೊಸ ಮಾರುಕಟ್ಟೆಗಳ ನಿರ್ಮಾಣಕ್ಕೂ ಸಹ ಬೇಡಿಕೆ ಇಟ್ಟಿದ್ದೇನೆ. ಇವು ಕಾರ್ಯ ರೂಪಕ್ಕೆ ಬಂದರೆ ಸರ್ವೋಚ್ಚ ನ್ಯಾಯಾಲಯದ ಆದೇಶದನ್ವಯ ಬೀದಿ ಬದಿ ವ್ಯಾಪಾರಿಗಳನ್ನು ಸ್ಥಳಾಂತರಿಸುವ ವ್ಯವಸ್ಥೆಯೇ ನಮಗೆ ಅನ್ವಯಿಸುವುದಿಲ್ಲ ಎಂದು ಹೇಳಿದರು.
ಅಳಿಯನಾಗಿ ಅಭಿವೃದ್ಧಿ: ಕೇಂದ್ರ ಮಹಾತ್ಮಗಾಂಧಿ ನಗರ ಪುನಶ್ಚೇತನ ಯೋಜನೆ, ರಾಷ್ಟ್ರೀಯ ಹಸಿರು ಯೋಜನೆ ಒಳಚರಂಡಿ ಸಂಬಂಧಿಸಿದಂತೆ ಕಾಮಗಾರಿ ಆರಂಭಿಸಿದ್ದೇನೆ. ರಾಜ್ಯ ಸರ್ಕಾರದಿಂದ ಎಲ್ಲಾ ಭಾಗದಲ್ಲಿಯೂ ಅಭಿವೃದ್ಧಿ ಕೆಲಸ ಆಗುತ್ತಿದೆ. ರಾಜ್ಯ ಸರ್ಕಾರ ದಿವಾಳಿ ಎದ್ದಿದೆ ಎನ್ನುವ ಪ್ರತಿಪಕ್ಷದ ಮಾತಿಗೆ ಯಾವುದೇ ಸತ್ಯಾಂಶ ವಿಲ್ಲ. ಅವರ ಸರ್ಕಾರ ಇದ್ದಾಗ ಅವರ ಶಾಸಕರಿಗೆ ಕೊಟ್ಟಂತ ಕೆಲಸ ನಮ್ಮ ಸರ್ಕಾರ ಮಾಡುತ್ತಿಲ್ಲ. ಯಾವುದೇ ಕ್ಷೇತ್ರದ ಶಾಸಕರಿಗೆ ಅಗತ್ಯವಿರುವ ಕೆಲಸಕ್ಕೆ ಅನುದಾವವನ್ನು ನಿಲ್ಲಿಸಿಲ್ಲ. ವಿಶೇಷವಾಗಿ ಮೈಸೂರು ನಗರಕ್ಕೆ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯನವರು ಮಹಾರಾಣಿ ಕಾಲೇಜು, ವಿದ್ಯಾರ್ಥಿನಿಲಯ, ಹಳೆ ಕಾಲೇಜು ನವೀಕರಣ ಕಟ್ಟಡಗಳು, ಆರೋಗ್ಯ ಕ್ಷೇತ್ರದ ಕಟ್ಟಡ ಹೀಗೆ ಅನೇಕ ಶಾಶ್ವತ ಕೆಲಸ ಮಾಡಿದ್ದಾರೆ. ಮೈಸೂರು ಜಿಲ್ಲೆಯ ಮಗನಾಗಿ ಅವರು ಹಾಕಿಕೊಟ್ಟ ಹಾದಿಯಲ್ಲಿ ಮೈಸೂರಿನ ಅಳಿಯನಾಗಿ ಡಿಕೆಶಿಯವರು ಅದನ್ನು ಮುಂದುವರೆಸಿಕೊಂಡು ಹೋಗುತ್ತಾರೆಂದರು.
ವಿವಾದಿತ ರಸ್ತೆಗೆ ಮುಕ್ತಿ: ನಗರದ ಅತಿ ಹೆಚ್ಚು ವಿವಾದಕ್ಕೆ ಈಡಾಗಿದ್ದ ಪೊಲೀಸ್‌ ಅಕಾಡೆಮಿಯ ರಸ್ತೆ ಫೋರಂ ಮಾಲ್‌ ನಿಂದ ಎಸ್ಪಿ ವೃತ್ತದವರೆಗೂ ೪೦ ಮರಗಳನ್ನು ಹನನ ಮಾಡಿದ ಕೂಗು ಬಹಳ ಜೋರಾಗಿ ಕೇಳಿಬಂದಿತ್ತು. ಅದಕ್ಕೆ ಪರ್ಯಾಯವಾಗಿ ೧೨೬ ಸಸಿಗಳನ್ನು ನೆಡಿಸಿ ರಸ್ತೆ ಅಗಲೀಕರಣ ಕಾಮಗಾರಿಯನ್ನು ಸಮಯಕ್ಕೆ ಸರಿಯಾಗಿ ವೇಗದಲ್ಲಿ ಕೆಲಸ ಮಾಡಿದ್ದೇವೆ. ಒಂದು ಕಲ್ಪನೆಯ ರಸ್ತೆಯ ವಿದ್ಯುತ್‌ ದೀಪಗಳನ್ನು ಅಳವಡಿಸಿ ಲೋಕಾರ್ಪಣೆ ಮಾಡುವ ಕೆಲಸ ಮಾಡಿದ್ದೇವೆ. ಇದರೊಟ್ಟಿಗೆ ಎಳು ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದೇನೆ. ಎಚ್‌.ಸಿ.ಮಹದೇವಪ್ಪ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಂದರ್ಭದಲ್ಲಿ ವಿವಿಧ ರಸ್ತೆಗಳ ಪ್ರಸ್ತಾವನೆಯನ್ನು ಸಲ್ಲಿಸಿದ್ದೇವೆ. ಈ ಪೈಕಿ ಈ ರಸ್ತೆಯ ಅಭಿವೃದ್ಧಿ ಆಗಿದೆ. ಅಂಬೇಡ್ಕರ್‌ ವೃತ್ತದಿಂದ ಫೌಂಟೇನ್‌ ವೃತ್ತದವರೆಗೂ ನೂರಡಿ ರಸ್ತೆ ಅಗಲೀಕರಣ ಆಗಬೇಕೆಂದು ಹೇಳಿ ಸರ್ಕಾರಿ ಸಿಪಿಸಿ ಪಾಲಿಟೆಕ್ನಿಕ್‌ ಜಾಗ ಪಡೆಯಬೇಕೆಂದು ಸರ್ಕಾರಕ್ಕೆ ಪಸ್ತಾವನೆ ಸಲ್ಲಿಸಲಾಗಿದೆ. ಮತ್ತೊಂದೆಡೆ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ೯ರಿಂದ 12 ಮೀಟರ್‌ ರಸ್ತೆ ಅಗಲೀಕರಣಕ್ಕೆ ಬೇಕಾಗುವ ಜಂಟಿ ಸರ್ವೇ ಆಗಿ ಈ ವಾರದಲ್ಲೇ ಆದೇಶ ಬರುವ ನಿರೀಕ್ಷೆಯಿದೆ. ಮಣಿಪಾಲ್‌ ವೃತ್ತದಿಂದ ಮೈಸೂರು ಹೃದಯ ಭಾಗದಲ್ಲಿ ರಸ್ತೆ ಅಗಲೀಕರಣದಲ್ಲಿ ಅದರಲ್ಲೂ ನನ್ನ ಕ್ಷೇತ್ರದಲ್ಲಿ ಉತ್ತಮ ರಸ್ತೆ ಆಗಿರುವುದು ಸಂತಸದ ವಿಚಾರ. ಕ್ಷೇತ್ರದಲ್ಲೆ ಎನಾಯ್ತು ಎನಾಯ್ತು ಎಂದು ಕೇಳುವವರಿಗೆ ಇದೆ ಉತ್ತರ ಎನ್ನಬಹುದಾಗಿದೆ ಎಂದರು.
ಅಧಿಕಾರ ಕುಂಠಿತವಾಗಲ್ಲ: ದಸರೆಯಲ್ಲಿ ಒಂದು ಇಲಾಖೆಯಿಂದ ಒಂದು ಕಾರ್ಯಕ್ರಮ ನಡೆಯುತ್ತವೆ. ಸಂಬಂಧಪಟ್ಟ ಇಲಾಖಾ ಕಾರ್ಯಕ್ರಮ ಮೇಲುಸ್ತುವಾರಿ ಆ ಇಲಾಖೆಯ ಉಸ್ತುವಾರಿ ಮಾಡಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದೀಪಾಲಂಕಾರ ಹೀಗೆ ಎಲ್ಲಾ ಇಲಾಖೆಗಳ ಜವಾಬ್ದಾರಿ ಆಯಾ ಸಚಿವರೇ ನಿಭಾಯಿಸಬೇಕೆಂದು ಹೇಳಿದ್ದಾರೆ. ಇದು ಬರುವ ಪ್ರವಾಸಿಗರಿಗೆ ಸ್ಥಳೀಯರಿಗೆ ಅಬಾಸ ಆಗಬಾರದು. ಸಚಿವರೇ ಖುದ್‌ ಇದ್ದಾಗ ಅಧಿಕಾರಿಗಳು ಚುರುಕಾಗಿ ಕೆಲಸ ಮಾಡುತ್ತಾರೆಂಬ ಕಾರಣಕ್ಕೆ ೨೨ಮಂದಿ ಸಚಿವರ ನೇಮಿಸಿದ್ದಾರೆ. ದಸರಾ ಆಚರಣೆಗೆ ಮೆರುಗು ತಂದು ಕೊಡಬೇಕು. ನಾಡಹಬ್ಬದ ಅರ್ಥ ನಿಜಕ್ಕೂ ಜನರಿಗೆ ತಲುಪಬೇಕಿದೆ ಎಂಬ ನಿಟ್ಟಿನಲ್ಲಿ ಹೀಗೆ ಮಾಡಿದ್ದಾರೆ. ಜಿಲ್ಲಾ ಸಚಿವರ ಅಧಿಕಾರ ಎಲ್ಲಿಯೂ ಕುಂಠಿತವಾಗಲ್ಲ ಎಂದು ಹೇಳಿದರು.
ದಾಖಲೆ ಸಮೇತ ಚರ್ಚೆಗೆ ಬನ್ನಿ: ನಜರಬಾದ್‌ ದೇವಾಲಯ ಸಮೀಪದ ಮನೆಗಳ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ೧೪೦ ಚದರ ಗಜ ಜಾಗವನ್ನು ದೇವಾಲಯಕ್ಕೆ ಮಂಜೂರಾಗಿದೆ. ಅರಳಿಮರ, ಪೂಜಾ ಗುಡಿಯನ್ನು ದೇವಾಲಯಕ್ಕೆ ಬಳಕೆ ಮಾಡಿಕೊಳ್ಳಬೇಕೆಂದು ಷರತ್ತು ಹಾಕಲಾಗಿದೆ. ಆದರೆ, ಅನೇಕರು ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿದ್ದರು. ಈ ಬಗ್ಗೆ ಎಂಟು ವರ್ಷದಿಂದ ತಕರಾರು ನಡೆಯುತ್ತಿದೆ. ಇಂದು ಪೊಲೀಸರ ಮೇಲೆ ಹಲ್ಲೆ, ಕಲ್ಲು ತೂರಾಟ ಮಾಡಿದ್ದಾರೆ. ಆ ಭಾಗದ ಮರಾಠ ಸಮುದಾಯಕ್ಕೆ ಸಂಬಂಧಿಸಿದ ಶಾಲೆಗೆ ಹಾವು, ಚೇಳುಗಳ ಸಮಸ್ಯೆ ಎದುರಾಗಿದೆ. ಹೀಗಾಗಿ ನಾಲ್ಕು ಬಾರಿ ಟೆಂಡರ್‌ ಮಾಡಿ ಇದೊಂದೆ ಕಾರಣಕ್ಕೆ ಸ್ಥಗಿತಗೊಂಡಿದ್ದನು, ಐದನೇ ಬಾರಿ ಎಲ್ಲರನ್ನೂ ಒಪ್ಪಿಸಿ ಕೆ.ಎನ್‌.ಪುರ ರಸ್ತೆಯಾಗಿ ಮರುನಾಮಕರಣ ಮಾಡಿ ಶಾಲೆಯ ಮುಂದೆ ಅನೂಕೂಲ, ಅಭಿವೃದ್ಧಿಗೆ ರಸ್ತೆಗೆ ನಿಗಧಿಪಡಿಸಿದ ಜಾಗವನ್ನಷ್ಟೇ ತೆರವು ಮಾಡಲಾಗಿದೆ. ನಾನು ದೇವರ ಭಕ್ತನೇ ದೇವಾಲಯಕ್ಕೂ ಕೈ ಹಾಕುವುದಿಲ್ಲ. ನನ್ನ ಕ್ಷೇತ್ರದಲ್ಲಿ ಎಷ್ಟು ದೇವಾಲಯ, ಗುಡಿ ಉಳಿಸಿದ್ದಿನಿ ಎಂಬುದು ನನಗೆ ಗೊತ್ತು. ಅದನ್ನು ರಾಜಕೀಯ ಪ್ರಚಾರಕ್ಕೆ ಬಳಸಿಕೊಳ್ಳಲು ಹೋಗುವುದಿಲ್ಲ. ನನಗೆ ಪ್ರತಿಸ್ಪರ್ಧಿಯಾದ ಸಂದೇಶ್‌ ಸ್ವಾಮಿಯವರೊಟ್ಟಿಗೆ ಮಾತನಾಡಿದಾಗಲೂ ಸದರಿ ಜಾಗ ಅಭಿವೃದ್ಧಿ ಆಗಬೇಕೆಂದು ಹೇಳಿದ್ದಾರೆ. ಹೀಗಿರುವಾಗ ಜನರನ್ನು ತಪ್ಪು ದಾರಿಗೆ ಎಳೆಯುವುದು ಬೇಡ. ಅಭಿವೃದ್ಧಿ ದೃಷ್ಠಿಕೋನದಿಂದ ಕೆಲಸ ಮಾಡಿದ್ದೇವೆ. ಎತ್ತಿ ಕಟ್ಟುವ, ದಾರಿ ತಪ್ಪಿಸುವ ಮಂದಿ ಎನಾದರೂ ಸಮಸ್ಯೆ ಇದ್ದರೂ ನನ್ನೊಟ್ಟಿಗೆ ಚರ್ಚೆ ಮಾಡಿ ನಿಮಗೆ ದಾಖಲೆ ಸಮೇತ ಉತ್ತರ ಕೊಡುತ್ತೇನೆಂದು ಹೇಳಿದರು. ನರಸಿಂಹರಾಜ ಕ್ಷೇತ್ರದ ಬ್ಲಾಕ್‌ ಅಧ್ಯಕ್ಷ ಸಯ್ಯದ್‌ ಎಕ್ಬಾಲ್‌, ಸೈನ್‌ ಶಾ ಮಹಮ್ಮದ್‌, ಶಫ್ರಸ್‌ಖಾನ್‌, ಘೋಷ್‌ ಬಾಬು ಇನ್ನಿತರರು ಉಪಸ್ಥಿತರಿದ್ದರು.

Share This Article
Leave a Comment