ಪಬ್ಲಿಕ್ ಅಲರ್ಟ್ ನ್ಯೂಸ್:-ಯುವ ದಸರಾ 2026 ಶೀರ್ಷಿಕೆ ಗೀತೆಯ ಪ್ರೋಮೋ ಬಿಡುಗಡೆ
ಯುವ ದಸರಾ 2026ರ ಶೀರ್ಷಿಕೆ ಗೀತೆಯ ಪ್ರೋಮೋವನ್ನು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಾನ್ಯ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬಿಡುಗಡೆ ಮಾಡಿದರು.
ಮೈಸೂರಿನ ಸಾಂಸ್ಕೃತಿಕ ವೈಭವ, ಯುವಜನತೆಯ ಉತ್ಸಾಹ ಹಾಗೂ ಯುವ ದಸರಾ ಸಂಭ್ರಮವನ್ನು ಪ್ರತಿಬಿಂಬಿಸುವಂತೆ ಶೀರ್ಷಿಕೆ ಗೀತೆಯನ್ನು ರೂಪಿಸಲಾಗಿದೆ. ‘ಕಾಂತಾರ’ ಚಿತ್ರದ ಯಶಸ್ವಿ ಸಂಗೀತ ನಿರ್ದೇಶಕರಾದ ಅಜನೀಶ್ ಲೋಕನಾಥ್ ಅವರು ಸಂಗೀತ ಸಂಯೋಜಿಸಿದ್ದು, ಸೋಮಶೇಖರ್ ಜಿಗಣಿ ಅವರು ಸಾಹಿತ್ಯ ರಚಿಸಿದ್ದಾರೆ. ಮನೋಜ್ ಸೌಗಂಧ್ ಅವರು ಸಾಹಿತ್ಯ ರಚನೆಗೆ ಸಹಕಾರ ನೀಡಿದ್ದಾರೆ.
ಈ ಶೀರ್ಷಿಕೆ ಗೀತೆಯ ಪರಿಕಲ್ಪನೆ ಹಾಗೂ ರಚನಾ ಕಾರ್ಯದಲ್ಲಿ ಸೋಮಶೇಖರ್ ಜಿಗಣಿ ಅವರ ಪ್ರಮುಖ ಪಾತ್ರವಿದ್ದು, ಗೀತೆಯು ಯುವ ದಸರಾ 2026ರ ಸಾಂಸ್ಕೃತಿಕ ಆಶಯವನ್ನು ಪ್ರತಿಬಿಂಬಿಸುವಂತೆ ರೂಪುಗೊಂಡಿದೆ.
ಗೀತೆಯ ವಿಶೇಷ ಆಕರ್ಷಣೆಯಾಗಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಶಾಸಕರು ಹಾಗೂ ವಿವಿಧ ಜನಪ್ರತಿನಿಧಿಗಳು ಭಾಗವಹಿಸಿರುವುದು ಗಮನಾರ್ಹವಾಗಿದೆ. ಜನಪ್ರತಿನಿಧಿಗಳು ಯುವ ದಸರಾ ಸಂಭ್ರಮಕ್ಕೆ ಧ್ವನಿಗೂಡಿಸುವ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದ್ದಾರೆ.
ಯುವ ದಸರಾ 2026ರ ಐದು ದಿನಗಳ ಸಾಂಸ್ಕೃತಿಕ ಸಂಭ್ರಮಕ್ಕೆ ಈ ಶೀರ್ಷಿಕೆ ಗೀತೆ ಮತ್ತಷ್ಟು ಉತ್ಸಾಹ ಮತ್ತು ವೈಭವವನ್ನು ತುಂಬುವ ನಿರೀಕ್ಷೆಯಿದೆ.
