ದಿವ್ಯಾಂಗರು ಹಾಗೂ ಹಿಂದುಳಿದ ವರ್ಗಗಳ ಸಬಲೀಕರಣಕ್ಕೆ ಕೇಂದ್ರ ಸರ್ಕಾರ ಬದ್ಧ: ಕೇಂದ್ರ ರಾಜ್ಯಖಾತೆ ಸಚಿವರಾದ ಶ್ರೀ ರಾಮದಾಸ್ ಅಠಾವಳೆ

latha prabhukumar
3 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ದಿವ್ಯಾಂಗರು ಹಾಗೂ ಹಿಂದುಳಿದ ವರ್ಗಗಳ ಸಬಲೀಕರಣಕ್ಕೆ ಕೇಂದ್ರ ಸರ್ಕಾರ ಬದ್ಧ: ಕೇಂದ್ರ ರಾಜ್ಯಖಾತೆ ಸಚಿವರಾದ ಶ್ರೀ ರಾಮದಾಸ್ ಅಠಾವಳೆ

ಮೈಸೂರಿನಲ್ಲಿ ‘ಶಿಲ್ಪ ಸಮಾಗಮ ಮೇಳ’ಕ್ಕೆ ಸಚಿವರಿಂದ ಚಾಲನೆ


ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯಖಾತೆ ಸಚಿವರಾದ ಶ್ರೀ ರಾಮದಾಸ್ ಅಠಾವಳೆ ಅವರು ಇಂದು ಮೈಸೂರಿನ ದಸರಾ ಪ್ರದರ್ಶನ ಆವರಣದಲ್ಲಿ ಆಯೋಜನೆಗೊಂಡಿರುವ ಶಿಲ್ಪ ಸಮಾಗಮ ಮೇಳವನ್ನು ಉದ್ಘಾಟಿಸಿ, ಕರಕುಶಲ ವಸ್ತು ಪ್ರದರ್ಶನ ಮೇಳಗಳಿಗೆ ಭೇಟಿ ನೀಡಿದರು.

ಇದಕ್ಕೂ ಮುನ್ನ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆಗಳು ತಲುಪಬೇಕು ಎಂಬುದು ಕೇಂದ್ರ ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರ ಹಿಂದುಳಿದ ವರ್ಗಗಳು, ಹಿರಿಯ ನಾಗರಿಕರು ಹಾಗೂ ದಿವ್ಯಾಂಗರ ಸರ್ವಾಂಗೀಣ ಅಭಿವೃದ್ಧಿಗಾಗಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಹಲವಾರು ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಇಂತಹ ಶೋಷಿತ ಹಾಗೂ ವಂಚಿತ ಸಮುದಾಯಗಳ ಆರ್ಥಿಕ ಸ್ವಾವಲಂಬನೆಗಾಗಿ ಕೇಂದ್ರ ಸರ್ಕಾರದ ವಿವಿಧ ಅಭಿವೃದ್ಧಿ ನಿಗಮಗಳ ಮೂಲಕ ₹1.5 ಲಕ್ಷದಿಂದ ₹35 ಲಕ್ಷದವರೆಗೆ ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದರು.

ಸಣ್ಣ ಉದ್ಯಮಿಗಳು, ಕರಕುಶಲ ಕರ್ಮಿಗಳು ಮತ್ತು ದಿವ್ಯಾಂಗ ಕಲಾವಿದರು ತಯಾರಿಸುವ ವಿಶಿಷ್ಟ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಅವಕಾಶ ಹಾಗೂ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ದೇಶಾದ್ಯಂತ ‘ಸಮಾಗಮ ಮೇಳ’ ಮತ್ತು ‘ದಿವ್ಯ ಕಲಾ ಮೇಳ’ಗಳನ್ನು ನಿರಂತರವಾಗಿ ಆಯೋಜಿಸಲಾಗುತ್ತಿದೆ. ಈ ಮೇಳಗಳು ಕೇವಲ ವ್ಯಾಪಾರಕ್ಕಷ್ಟೇ ಸೀಮಿತವಾಗದೆ, ಕುಶಲಕರ್ಮಿಗಳಿಗೆ ಸ್ವಾವಲಂಬಿ ಜೀವನ ರೂಪಿಸಿಕೊಳ್ಳಲು ಉತ್ತಮ ವೇದಿಕೆಯಾಗಿವೆ ಎಂದು ಸಚಿವರು ಅಭಿಪ್ರಾಯಪಟ್ಟರು.

ಒಕ್ಕೂಟ ವ್ಯವಸ್ಥೆ ಮತ್ತು ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಪರಿಶಿಷ್ಟ ಜಾತಿಗೆ 15% ಹಾಗೂ ಪರಿಶಿಷ್ಟ ಪಂಗಡಕ್ಕೆ 7.5% ಮೀಸಲಾತಿಯನ್ನು ಕಲ್ಪಿಸಲಾಗಿದೆ. ಅಂತೆಯೇ ಮಂಡಲ್ ಆಯೋಗದ ಶಿಫಾರಸಿನಂತೆ ಇತರ ಹಿಂದುಳಿದ ವರ್ಗಗಳಿಗೆ 27% ಮೀಸಲಾತಿಯನ್ನು ಜಾರಿಗೆ ತರಲಾಗಿದ್ದು, ಸಾಮಾಜಿಕ ಸಮಾನತೆಯನ್ನು ಎತ್ತಿಹಿಡಿಯಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಪ್ರಧಾನಮಂತ್ರಿ ಜನಧನ್ ಯೋಜನೆ, ಪ್ರಧಾನಮಂತ್ರಿ ಮುದ್ರಾ ಯೋಜನೆ, ಉಜ್ವಲ ಯೋಜನೆ, ಪ್ರಧಾನಮಂತ್ರಿ ಆವಾಸ್ ಯೋಜನೆ ಹಾಗೂ ಆಯುಷ್ಮಾನ್ ಭಾರತ್ ನಂತಹ ಹಲವು ಪ್ರಮುಖ ಯೋಜನೆಗಳು ದೇಶದ ಕೋಟ್ಯಂತರ ಬಡ ಮತ್ತು ಮಧ್ಯಮ ವರ್ಗದ ಜನರ ಜೀವನದಲ್ಲಿ ಗಮನಾರ್ಹ ಬದಲಾವಣೆ ತಂದಿವೆ. ಈ ಯೋಜನೆಗಳ ನೇರ ಲಾಭವು ಸಮಾಜದ ನೈಜ ಫಲಾನುಭವಿಗಳನ್ನು ತಲುಪುತ್ತಿದ್ದು, ದೇಶವನ್ನು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಶಕ್ತಗೊಳಿಸಲಾಗುತ್ತಿದೆ ಎಂದು ಶ್ರೀ ರಾಮದಾಸ್ ಅಠಾವಳೆ ಅವರು ಹೇಳಿದರು.

ಈ ವೇಳೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಮೈಸೂರಿನ ದಸರಾ ವಸ್ತುಪ್ರದರ್ಶನ ಮೈದಾನದಲ್ಲಿ ಅಕ್ಟೋಬರ್ 11ರಿಂದ 19ರವರೆಗೆ ‘ಶಿಲ್ಪ ಸಮಾಗಮ ಮೇಳ’ ನಡೆಯಲಿದ್ದು, ಪ್ರಸಿದ್ಧ ಮೈಸೂರು ದಸರಾ ಉತ್ಸವದ ಹಿನ್ನೆಲೆಯಲ್ಲಿ ಸಚಿವಾಲಯವು ಈ ಹಣಕಾಸು ವರ್ಷದಲ್ಲಿ ಹಮ್ಮಿಕೊಂಡಿರುವ ಮೊದಲ ಮೇಳ ಇದಾಗಿದೆ. ಕಲೆ ಮತ್ತು ಸಂಸ್ಕೃತಿಗೆ ಹೆಸರುವಾಸಿಯಾಗಿರುವ ಮೈಸೂರಿನಲ್ಲಿ, ಸಚಿವಾಲಯದ ಮೂರು ರಾಷ್ಟ್ರೀಯ ನಿಗಮಗಳಾದ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮ (NSFDC), ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮ (NBCFDC) ಹಾಗೂ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಹಣಕಾಸು ಮತ್ತು ಅಭಿವೃದ್ಧಿ ನಿಗಮ (NSKFDC) ಜಂಟಿಯಾಗಿ ಈ ಪ್ರದರ್ಶನವನ್ನು ಸಂಘಟಿಸಿವೆ.

ಈ ಮೇಳದ ವಿಶೇಷ ಆಕರ್ಷಣೆಯಾಗಿರುವ ‘ಭಾರತ್ ಟ್ಯುಲಿಪ್ ಹೆರಿಟೇಜ್’ ಮಳಿಗೆಯಲ್ಲಿ ಅತ್ಯುನ್ನತ ಗುಣಮಟ್ಟದ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದ್ದು, ಆಯಾ ಕುಶಲಕರ್ಮಿಗಳ ಬ್ಯಾಂಕ್ ಖಾತೆಗಳಿಗೇ ನೇರವಾಗಿ ಹಣ ವರ್ಗಾವಣೆ ಮಾಡಲಾಗುತ್ತದೆ. ಅಲ್ಲದೆ, ಮೇಳದಲ್ಲಿ ಪಾಲ್ಗೊಳ್ಳುವ ಎಲ್ಲ ಕುಶಲಕರ್ಮಿಗಳಿಗೆ ಉಚಿತ ಮಳಿಗೆಗಳೊಂದಿಗೆ ಪ್ರಯಾಣ ವೆಚ್ಚ, ದೈನಂದಿನ ಭತ್ಯೆ, ಸರಕು ಸಾಗಣೆ ಸೌಲಭ್ಯ ಹಾಗೂ ಊಟದ ವ್ಯವಸ್ಥೆಯನ್ನು ಉಚಿತವಾಗಿ ಕಲ್ಪಿಸಲಾಗಿದೆ.

Share This Article
Leave a Comment