ಪಬ್ಲಿಕ್ ಅಲರ್ಟ್ ನ್ಯೂಸ್:-ಪೊಲೀಸ್ ಬ್ಯಾಂಡ್ ವಾದ್ಯ ಗೋಷ್ಠಿ ಅಲೆಯಲ್ಲಿ ತೇಲಿದ ಸಂಗೀತ ಪ್ರಿಯರು
ಮೈಸೂರು:- ಅ.16 (ಕರ್ನಾಟಕ ವಾರ್ತೆ) :- ಇಷ್ಟು ದಿನ ಸಂಗೀತ ಕೇಳಿ ಕುಣಿದು ಕುಪ್ಪಳಿಸುತ್ತಿದ್ದ ಪ್ರೇಕ್ಷಕರು. ಶುಕ್ರವಾರದಂದು ಪೊಲೀಸ್ ಬ್ಯಾಂಡ್ ವಾದ್ಯಗೋಷ್ಠಿಗೆ ಸಮನಾಗಿ ಮನದಲ್ಲಿಯೇ ಹಾಡನ್ನು ಗುನುಗುವ ಮೂಲಕ ಸಂಭ್ರಮಿಸಿದ್ದು ವಿಶೇಷವಾಗಿತ್ತು.
ಮೈಸೂರು ದಸರಾ ಅಂಗವಾಗಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ವತಿಯಿಂದ ಅರಮನೆ ಆವರಣದಲ್ಲಿ ಆಯೋಜಿಸಲಾಗಿದ್ದ ಪೊಲೀಸ್ ಬ್ಯಾಂಡ್ ಕಲಾವಿದರಿಂದ ಕರ್ನಾಟಿಕ್ ಮತ್ತು ಇಂಗ್ಲಿಷ್ ಬ್ಯಾಂಡ್( ಸಮೂಹ ವಾದ್ಯ ಮೇಳ) ಕಾರ್ಯಕ್ರಮವು ಕನಕದಾಸರ ಕೀರ್ತನೆ ಯೊಂದಿಗೆ ಆರಂಭಗೊಂಡಿತು.
ತದನಂತರ ಒಂದರ ಹಿಂದೆ ಒಂದರಂತೆ
ನಗುವ ನಯನ ಮಧುರ ಮೌನ…ಜೊತೆಯಲಿ ಜೊತೆ ಜೊತೆಯಲಿ…ಎಲ್ಲೋ ಜೋಗಪ್ಪ ನಿನ್ನ ಅರಮನೆ… ಕೇಳದೆ ನಿಮಗೀಗ ದೂರದಲ್ಲಿ ಯಾರೋ… ಹಾಗೂ
ಕಿಂಗ್ ಆಫ್ ಪಾಪ್ ಮ್ಯಾಕೆಲ್ ಜಾಕ್ಸನ್ ಅವರ ಥ್ರಿಲ್ಲರ್, ಬಿಟೀಜ್ ಸಂಗೀತ ಸಂಯೋಜನೆಯ ಅಲ್ಟಿಮೇಟ್ ಪಾಪ್ ಸಿರೀಸ್,
ಜಯ್ ಹೋ, ಜಯ್ ಹೋ… ವಾದ್ಯಗೋಷ್ಠಿಯು ಸಂಗೀತ ರಸಿಕರು ಮನತಣಿಸಿತು.
ಕರ್ನಾಟಿಕ್, ಇಂಗ್ಲಿಷ್ ವಾದ್ಯ ಕಲಾವಿದರ ಜುಗಲ್ ಬಂದಿ ವಿಶೇಷ : ಕರ್ನಾಟಿಕ್ ವಾದ್ಯ ತಂಡ ಐಗಿರಿ ನಂದಿನಿ ನಂದಿತ ಮೇದಿನಿ ನುಡಿಸಿದರೆ, ಇಂಗ್ಲಿಷ್ ಬ್ಯಾಂಡ್ ನಿಂದ ಫೈನಲ್ ಕೌಂಟ್ ಡೌನ್ ಗೋಷ್ಠಿ ನುಡಿಸುವ ಮೂಲಕ ಪ್ರೇಕ್ಷಕರ ಕುತೂಹಲ ಕೆರಳಿಸಿದರು. ಬಳಿಕ ನಡೆದ
ಕರ್ನಾಟಕ ಶಾಸ್ತ್ರೀಯ ವಾದ್ಯ ಗೋಷ್ಠಿಗೆ ಸಂಗೀತ ಪ್ರಿಯರು ಚಪ್ಪಾಳೆ ಮಳೆಗರೆದರು.
ಕಾರ್ಯಕ್ರಮದಲ್ಲಿ ಗೃಹ ಸಚಿವರಾದ ಪ್ರಿಯಾಂಕ ಖರ್ಗೆ, ನಗಾರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಯತೀಂದ್ರ ಸಿದ್ದರಾಮಯ್ಯ, ಶಾಸಕರಾದ ಹರೀಶ್ ಗೌಡ, ಟಿ.ಎಸ್.ಶ್ರೀವತ್ಸ, ವಿಧಾನಪರಿಷತ್ ಸದಸ್ಯರುಗಳಾದ ತಿಮ್ಮಯ್ಯ, ಶಿವಕುಮಾರ್ ಹಾಗೂ ಪುಷ್ಪ ಅಮರ್ ನಾಥ್, ಡಿಜಿ-ಐಜಿಪಿ ಬಾ.ಎಂ.ಎ.ಸಲೀಂ, ಮೈಸೂರು ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಉಪಸ್ಥಿತರಿದ್ದರು.
