ಪಬ್ಲಿಕ್ ಅಲರ್ಟ್ ನ್ಯೂಸ್:-ನವೆಂಬರ್ 1 ರಂದು ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ :-ಆರ್. ಐಶ್ವರ್ಯ
ಮೈಸೂರು ಅ.23.( ಕರ್ನಾಟಕ ವಾರ್ತೆ ):- ನವೆಂಬರ್ 01 ರಂದು ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿಗಳಾದ ಆರ್. ಐಶ್ವರ್ಯ ಅವರು ತಿಳಿಸಿದರು
ಇಂದು ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನವೆಂಬರ್ 1 ರಂದು ಆಚರಿಸುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಸಂಬಂಧ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವನ್ನು ಬೆಳಿಗ್ಗೆ 8:00 ಗಂಟೆಗೆ ಅರಮನೆ ಆವರಣದಲ್ಲಿರುವ ಶ್ರೀ ಭುವನೇಶ್ವರಿ ದೇವಿಗೆ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ವಿಶೇಷ ಪೂಜೆ ಸಲ್ಲಿಸಲಿದ್ದಾರೆ.
ಬೆಳಿಗ್ಗೆ 9:00 ಗಂಟೆಗೆ ಓವೆಲ್ ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಂದ ಧ್ವಜಾರೋಹಣ ನೆರವೇರಲಿದ್ದು, ಪೊಲೀಸ್ ಗೌರವ ರಕ್ಷೆ ಸ್ವೀಕಾರ ನಡೆಯಲಿದೆ ಎಂದರು.
ಕನ್ನಡದ ಅನುಷ್ಠಾನದ ಬಗ್ಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಿ, ಕುಂದುಕೊರತೆಗಳನ್ನು ಸರಿಪಡಿಸಲು ಹಾಗೂ ಕನ್ನಡ ನಾಡಿನಲ್ಲಿ ಕನ್ನಡ ಭಾಷೆಯನ್ನು ಉತ್ತಮವಾಗಿ ಬಳಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಪೋಲಿಸ್ ಆಯುಕ್ತರ ಅಧ್ಯಕ್ಷತೆಯಲ್ಲಿ ಮೆರವಣಿಗೆ ಆಯೋಜನೆಗೊಳ್ಳಲಿದ್ದು, ಕೆ.ಆರ್. ವೃತ್ತದ ಮೂಲಕ ಸಾಗಲಿದೆ. ಈ ಮೆರವಣಿಗೆಯಲ್ಲಿ ಕಲಾತಂಡಗಳು, ಪೊಲೀಸ್ ಬ್ಯಾಂಡ್, ಮೌಂಟೆಡ್ ಪೊಲೀಸ್ ಹಾಗೂ ವಿವಿಧ ಇಲಾಖೆಗಳು ಮತ್ತು ಸಂಘ-ಸಂಸ್ಥೆಗಳ ಆಕರ್ಷಕ ಸ್ತಬ್ಧಚಿತ್ರಗಳು ಭಾಗವಹಿಸಲಿವೆ.
ಸಂಜೆ 6:00 ಗಂಟೆಗೆ ಕಲಾಮಂದಿರದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಜಿಲ್ಲಾ ಪಂಚಾಯತ್, ಕೆ.ಎಸ್.ಆರ್.ಟಿ.ಸಿ ನೌಕರರ ಕಂದಾಯ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬಿ ಇ ಎಂ ಎಲ್ ಕನ್ನಡ ಸಂಘ, ಕನ್ನಡ ಸಂಘ ಸಂಸ್ಥೆಗಳು ಹಾಗೂ ಮಹಿಳಾ ಸಂಘಟನೆಗಳ ವತಿಯಿಂದ ಸ್ತಬ್ಧ ಚಿತ್ರಗಳ ಪ್ರದರ್ಶನ ನಡೆಯಲಿದೆ.
ಜಿಲ್ಲಾ ಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ 20 ರಿಂದ 25 ಸಾಧಕರನ್ನು ಈ ಸಂದರ್ಭದಲ್ಲಿ ಗೌರವಿಸಿ ಸನ್ಮಾನಿಸಲಾಗುವುದು.
ಕಳೆದ ಶೈಕ್ಷಣಿಕ ಸಾಲಿನಲ್ಲಿ ಕನ್ನಡ ಭಾಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸರ್ಕಾರಿ ಶಾಲಾ ಕಾಲೇಜುಗಳ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಗುವುದು. ಶಾಲಾ-ಕಾಲೇಜು ವಿದ್ಯಾರ್ಥಿಗಳು, ಎನ್.ಎಸ್.ಎಸ್. ವಿದ್ಯಾರ್ಥಿಗಳು, ಮಹಿಳಾ ಕಾರ್ಯಕರ್ತರು, ಸಂಘಟನೆಗಳು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ. ಭಾಗವಹಿಸುವ ಮಕ್ಕಳಿಗೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಪ್ರಾಧಿಕಾರದ ವತಿಯಿಂದ ಲಘು ಉಪಾಹಾರ ವ್ಯವಸ್ಥೆ ಮಾಡಲಾಗುವುದು ಎಂದರು.
ಕಾರ್ಯಕ್ರಮಕ್ಕೆ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕಡ್ಡಾಯವಾಗಿ ಹಾಜರಾಗಬೇಕು. ಈ ಕುರಿತು ಹಾಜರಾತಿ ಪಡೆಯಲು ನೋಡೆಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಸ್ವಾಗತ ಸಮಿತಿ, ವೇದಿಕೆ ಸಿದ್ಧತೆ, ನಗರ ಅಲಂಕಾರ ಹಾಗೂ ಸ್ವಚ್ಛತಾ ಕಾರ್ಯಗಳನ್ನು ಮೈಸೂರು ಮಹಾನಗರ ಪಾಲಿಕೆ ಮತ್ತು ವಿವಿಧ ಉಪಸಮಿತಿಗಳ ನೇತೃತ್ವದಲ್ಲಿ ಸಮರ್ಪಕವಾಗಿ ನಿರ್ವಹಿಸಲು ಸೂಚಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಎಂ.ಡಿ. ಸುದರ್ಶನ್, ಹಾಗೂ ಕನ್ನಡ ಸಂಘ ಸಂಸ್ಥೆಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ವಿವಿಧ ಇಲಾಖೆಯ ಅಧಿಕಾರಗಳು ಮತ್ತಿತರರು ಉಪಸ್ಥಿತರಿದ್ದರು.
