ಪಬ್ಲಿಕ್ ಅಲರ್ಟ್ ನ್ಯೂಸ್:-ಯುವದಸರಾ: ಜಾಸ್ಮಿನ್ ಸ್ಯಾಂಡ್ಲಾಸ್ ರವರ ಸಂಗೀತದ ರಸದೌತಣಕ್ಕೆ ಮೈಮರೆತ ಯುವಜನತೆ
ಯುವ ದಸರಾ ವೇದಿಕೆಯಲ್ಲಿ:ಗುಲಾಬಿ ಕ್ವೀನ್ ಜಾಸ್ಮಿನ್ ಸ್ಯಾಂಡ್ಲಾಸ್ ಅಬ್ಬರ
ಮೈಸೂರು ಅ.17.( ಕರ್ನಾಟಕ ವಾರ್ತೆ ):-ಭಾರತೀಯ
ಪ್ರಖ್ಯಾತ ಗಾಯಕಿ ಜಾಸ್ಮಿನ್ ಸ್ಯಾಂಡ್ಲಾಸ್ ಅವರು ತಮ್ಮ ವಿಶಿಷ್ಟ ಶೈಲಿಯ ಹಾಡುಗಳ ಮೂಲಕ ಯುವ ಜನತೆಯನ್ನು ಮಂತ್ರಮುಗ್ಧರನ್ನಾಗಿಸಿದರು.
ನಗರದ ಉತ್ತನಹಳ್ಳಿ ಜ್ವಾಲಾಮುಖಿ ತ್ರಿಪುರ ಸುಂದರಿ ದೇವಸ್ಥಾನದ ಹತ್ತಿರದ ಮೈದಾನದಲ್ಲಿ ವಿಜೃಂಭಣೆಯಿಂದ ನಡೆಯುತ್ತಿರುವ ಯುವದಸರಾ ಕಾರ್ಯಕ್ರಮದ ಐದನೇ ದಿನವು ಅತ್ಯಂತ ಉತ್ಸಾಹ ಮತ್ತು ಸಂಭ್ರಮದಿಂದ ಕೂಡಿತ್ತು.
ಕಾರ್ಯಕ್ರಮದ ವೇದಿಕೆಯಲ್ಲಿ ಜಾಸ್ಮಿನ್ ಸ್ಯಾಂಡ್ಲಾಸ್ ಅವರ ಗಾಯನಕ್ಕೆ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಯುವಕ-ಯುವತಿಯರು ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು. ಸಂಗೀತದ ಅಲೆಗೆ ಇಡೀ ಮೈದಾನವೇ ರೋಮಾಂಚನಗೊಂಡಿದ್ದು, ಮೈಸೂರಿನ ದಸರಾ ಮಹೋತ್ಸವದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿತು.
ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಜಾಸ್ಮಿನ್ ಸ್ಯಾಂಡ್ಲಾಸ್ ಅವರ ನೇತೃತ್ವದಲ್ಲಿ ಇಂದಿನ ಯುವ ದಸರಾ ವೇದಿಕೆಯು ಸೂಪರ್ ಫೈಯರ್ ಹಾಗೂ ಹೈ-ಎನರ್ಜಿಯೊಂದಿಗೆ ಕಳೆಗಟಿತ್ತು.
ಸಂಗೀತ ಪ್ರೇಮಿಗಳು ಹಾಗೂ ಅಭಿಮಾನಿಗಳು ಯುವದಸರಾದ ಸಂಭ್ರಮವನ್ನು ಕಣ್ತುಂಬಿಕೊಂಡು ಕುಣಿದು ಕುಪ್ಪಳಿಸಿದರು.
ಧುರಂಧರ್ ಹಾಡನ್ನು ಹಾಡುವ ಮೂಲಕ ಯುವ ಸಮೂಹವನ್ನು ಬಹುವಾಗಿ ಆಕರ್ಷಿಸಿದರು.ಸಂಗೀತ ಪ್ರೇಮಿಗಳು ಹಾಗೂ ಅಭಿಮಾನಿಗಳು ಯುವದಸರಾದ ಸಂಭ್ರಮವನ್ನು ಕಣ್ತುಂಬಿಕೊಂಡು ಸಂಭ್ರಮಿಸಿದರು.
ಕಾರ್ಯಕ್ರಮದಲ್ಲಿ ಚಾಮರಾಜನಗರ ಲೋಕಸಭಾ ಸಂಸದರಾದ ಸುನಿಲ್ ಬೋಸ್, ನಂಜನಗೂಡು ವಿಧಾನಸಭಾ ಶಾಸಕರಾದ ಧ್ರುವನಾರಾಯಣ್, ಗುಂಡ್ಲುಪೇಟೆ ಶಾಸಕರಾದ ಗಣೇಶ್ ಪ್ರಸಾದ್ , ದಸರಾ ಸಮಿತಿಯ ಅಧ್ಯಕ್ಷರಾದ ರವಿರಾಯರ ಹುಂಡಿ, ಹಾಗೂ ಸಮಿತಿಯ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.
