ಪೌರಕಾರ್ಮಿಕರ ಗೃಹಭಾಗ್ಯ ಯೋಜನೆಯಡಿ 122 ಫಲಾನುಭವಿಗಳಿಗೆ ಲಾಟರಿ ಮೂಲಕ ನಿವೇಶನಗಳ ಸಂಖ್ಯೆ ಹಂಚಿಕೆ

latha prabhukumar
1 Min Read

ಪಬ್ಲಿಕ್ ಅಲರ್ಟ್ ನ್ಯೂಸ್ ಪೌರಕಾರ್ಮಿಕರ ಗೃಹಭಾಗ್ಯ ಯೋಜನೆಯಡಿ 122 ಫಲಾನುಭವಿಗಳಿಗೆ ಲಾಟರಿ ಮೂಲಕ ನಿವೇಶನಗಳ ಸಂಖ್ಯೆ ಹಂಚಿಕೆ

ಮೈಸೂರು, ನವೆಂಬರ್ 20, 2026:

ಮೈಸೂರು ಮಹಾನಗರ ಪಾಲಿಕೆಯ ವತಿಯಿಂದ ಪೌರಕಾರ್ಮಿಕರ ಗೃಹಭಾಗ್ಯ ಯೋಜನೆ (PKGBY) ಅಡಿಯಲ್ಲಿ ನಿರ್ಮಿಸಲಾದ 158 ವಸತಿ ಗೃಹಗಳ ಹಂಚಿಕೆಗಾಗಿ ಇಂದು ಲಾಟರಿ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಲಾಯಿತು. ಒಟ್ಟು 158 ವಸತಿ ಗೃಹಗಳ ಪೈಕಿ 122 ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ಲಾಟರಿ ಮೂಲಕ ಅತ್ಯಂತ ಪಾರದರ್ಶಕವಾಗಿ ಫಲಾನುಭವಿಗಳ ಕೈನಲ್ಲಿಯೇ ಲಾಟರಿ ಎತ್ತುವ ಮೂಲಕ ನಿವೇಶನಗಳ ಸಂಖ್ಯೆಯನ್ನು ಹಂಚಿಕೆ ಮಾಡಲಾಯಿತು.

ಮನೆಗಳ ಹಂಚಿಕೆ ಪ್ರಕ್ರಿಯೆಯಲ್ಲಿ ಮಾನವೀಯ ದೃಷ್ಟಿಕೋನಕ್ಕೆ ವಿಶೇಷ ಆದ್ಯತೆ ನೀಡಲಾಗಿದ್ದು, ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಪೌರಕಾರ್ಮಿಕರು ಹಾಗೂ ನಿವೃತ್ತ ಪೌರಕಾರ್ಮಿಕರಿಗೆ ಅನುಕೂಲವಾಗುವಂತೆ ನೆಲಮಹಡಿಯ ಮನೆಗಳ ಹಂಚಿಕೆಯಲ್ಲಿ ಆದ್ಯತೆ ನೀಡಲಾಯಿತು.

ನವೆಂಬರ್ 25ರಂದು ವಸತಿ ಗೃಹಗಳ ಉದ್ಘಾಟನೆ

ಪೌರಕಾರ್ಮಿಕರ ಗೃಹಭಾಗ್ಯ ಯೋಜನೆಯಡಿ ನಿರ್ಮಿಸಲಾದ ವಸತಿ ಗೃಹಗಳ ಉದ್ಘಾಟನಾ ಸಮಾರಂಭವು ದಿನಾಂಕ 25-11-2026ರಂದು ನಡೆಯಲಿದೆ.

ಮಾನ್ಯ ನಗರಾಭಿವೃದ್ಧಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ಅವರಿಂದ ವಸತಿ ಗೃಹಗಳ ಉದ್ಘಾಟನೆ ಹಾಗೂ ಫಲಾನುಭವಿಗಳಿಗೆ ಹಸ್ತಾಂತರ ಕಾರ್ಯಕ್ರಮ ನಡೆಯಲಿದ್ದು, ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ತನ್ವೀರ್ ಸೇಠ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಲಿದೆ.

ಇಂದಿನ ಲಾಟರಿ ಕಾರ್ಯಕ್ರಮದಲ್ಲಿ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾದ ಶ್ರೀಮತಿ ಸವಿತಾ ಎಂ.ಕೆ., ಹೆಚ್ಚುವರಿ ಆಯುಕ್ತರಾದ ಶ್ರೀಮತಿ ವೀಣಾ, ಕಾರ್ಯಪಾಲಕ ಅಭಿಯಂತರರಾದ ಶ್ರೀ ಮೃತ್ಯುಂಜಯ ಕೆ.ಎಸ್., ಸಹಾಯಕ ಕಾರ್ಯಪಾಲಕ ಅಭಿಯಂತರರು, ಆರೋಗ್ಯ ನಿರೀಕ್ಷಕರು, ವ್ಯವಸ್ಥಾಪಕರು ಹಾಗೂ ಆರೋಗ್ಯ ಮತ್ತು ವಸತಿ ವಿಭಾಗಗಳ ವಿಷಯ ನಿರ್ವಾಹಕರು ಉಪಸ್ಥಿತರಿದ್ದರು.

ಪೌರಕಾರ್ಮಿಕರ ಜೀವನಮಟ್ಟ ಸುಧಾರಣೆ, ಸಾಮಾಜಿಕ ಭದ್ರತೆ ಹಾಗೂ ಸ್ವಂತ ಸೂರಿನ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಈ ಯೋಜನೆಯು ಮಹತ್ವದ ಹೆಜ್ಜೆಯಾಗಿದೆ.

ಮೈಸೂರು ಮಹಾನಗರ ಪಾಲಿಕೆ

Share This Article
Leave a Comment