ಅಲೆಮಾರಿ, ಅರೆಅಲೆಮಾರಿ ಸಮುದಾಯಗಳ ಅನ್ಯಾಯ ಸರಿಪಡಿಸಲು ಮಹೇಶ್‌ ಆಗ್ರಹ  

ravichandra
3 Min Read


ಮೈಸೂರು: ಪರಿಶಿಷ್ಟ ಜಾತಿ ಗುಂಪಿನ ೧೦೧ ಜಾತಿಗಳಿಗೆ ಒಳ ಮೀಸಲಾತಿ ಹಂಚಿಕೆಯೂ ಸಾಮಾಜಿಕ ನ್ಯಾಯ ಅಲ್ಲ. ಅದು ರಾಜಕೀಯ ನಿರ್ಧಾರವಾಗಿದ್ದು, ಅಲೆಮಾರಿ, ಅರೆಅಲೆಮಾರಿ ಸಮುದಾಯಗಳ ಅನ್ಯಾಯ ಸರಿಪಡಿಸಿ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಎನ್.ಮಹೇಶ್ ಆಗ್ರಹಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳ ಮೀಸಲು ಹಂಚಿಕೆಯ ಬಗ್ಗೆ ವಿಸ್ತೃತವಾಗಿ ವಿಶ್ಲೇಷಿಸಿದರು. ಒಳ ಮೀಸಲಾತಿ ಜಾರಿಯ ಕ್ರೆಡಿಟ್ ಕಾಂಗ್ರೆಸ್ ಸರ್ಕಾರಕ್ಕೆ ಮಾತ್ರ ಸೇರಿದ್ದಲ್ಲ ಎಂದ ಅವರು, ಮೈಸೂರು ಭಾಗದಲ್ಲಿರುವ ಗಾದೆ ಮಾತಿನಂತೆ ಅಟ್ಟಿಕ್ಕಿದವಳನ್ನು ಬಿಟ್ಟು ಬಟ್ಟಿಗಿದ್ದವಳನ್ನು ಹೊಗಳುತ್ತಿದ್ದರು ಎಂಬಂತಾಗಿದೆ ಎಂದು ಟೀಕಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾಣ್ಮೆಯಿಂದ ಹೊಲಯ ಮತ್ತು ಮಾದಿಗ ಸಮುದಾಯಗಳಿಗೆ ಸಮಾನಂತರವಾಗಿ ಶೇ. ೬ ಮೀಸಲಾತಿ ಹಂಚಿಕೆ ಮಾಡಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದಾರೆ. ಕೇಕ್ ಕಟ್ ಮಾಡಿದಂತೆ ಕಟ್ ಮಾಡಿದ್ದಾರೆ. ಸಮಾನಾಂತರ ಜಾತಿಗಳನ್ನು ಸೇರಿಸಿ ಯಡವಟ್ಟು ಮಾಡಿದ್ದಾರೆ ಎಂದು ಹೇಳಿದರು.
ತಾವೇ ಸಾಮಾಜಿಕ ನ್ಯಾಯದ ಹರಿಕಾರ ಎಂದು ಹೇಳುವ ಸಿದ್ದರಾಮಯ್ಯ ಅವರು ಒಳ ಮೀಸಲಾತಿ ಸಂಬಂಧ ತಾರ್ಕಿಕ ಅಂತ್ಯ ನೀಡಿಲ್ಲ. ಎಸ್ಸಿ, ಎಸ್ಟಿಗಳ ಶಾಶ್ವತ ಆಯೋಗ ರಚನೆಯೂ ಕಣ್ಣೊರೆಸುವ ತಂತ್ರವಾಗಿದೆ. ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು ೫ ಗುಂಪುಗಳನ್ನು ಮಾಡಿ ಮೀಸಲಾತಿ ಹಂಚಿಕೆ ಮಾಡಿದ್ದರು. ರಾಜ್ಯ ಸರ್ಕಾರ ೩ ಗುಂಪು ಮಾಡಿದೆ. ಇದರಿಂದ ಅಲೆಮಾರಿ, ಅರೆಅಲೆಮಾರಿ ಸಮುದಾಯಗಳಿಗೆ ಅನ್ಯಾಯವಾಗಿದೆ. ಕಡಿಮೆ ಸಂಖ್ಯೆಯಲ್ಲಿರುವ ದನಿ ಇಲ್ಲದ ಈ ಜನಗಳು ತಮ್ಮ ಸೌಲಭ್ಯ ಪಡೆಯಲು ಸಾಧ್ಯವೇ? ಇವರ ಸ್ಥಿತಿ ಗುಂಪಲ್ಲಿ ಗೋವಿಂದ ಎಂಬಂತಾಗಿದೆ ಎಂದು ಹೇಳಿದರು.
ಮೀಸಲಾತಿ ಹಂಚಿಕೆ ಹೊಲಯ-ಮಾದಿಗ ಸಮುದಾಯಗಳಿಗೆ ನ್ಯಾಯ ದೊರೆತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸದಾಶಿವ ಆಯೋಗ, ಮಾಧುಸ್ವಾಮಿ ಸಮಿತಿ, ನಾಗಮೋಹನ್ ದಾಸ್ ವರದಿಯಲ್ಲಿ ಮಾದಿಗ ಸಮುದಾಯಕ್ಕೆ ಶೇ.೬ ಮೀಸಲಾತಿ ನೀಡಲಾಗಿದೆ ಎಂದು ಹೇಳಿದರು.
ಒಳ ಮೀಸಲಾತಿ ಹಂಚಿಕೆಯಲ್ಲಿ ಸಂಪೂರ್ಣ ಕ್ರೆಡಿಟ್ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲಬೇಕಿಲ್ಲ. ಒಳ ಮೀಸಲಾತಿಯನ್ನು ಮೊದಲು ಜಾರಿ ಮಾಡಿದ್ದು ಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು ಅವರ ಕಾಂಗ್ರೆಸ್ಸೆತರ ಸರ್ಕಾರ. ೨೦೦೪ರಲ್ಲಿ ಧರ್ಮಸಿಂಗ್ ಸರ್ಕಾರ ಸದಾಶಿವ ಆಯೋಗ ರಚಿಸಿದರೂ ಯಾವುದೇ ಸೌಲಭ್ಯ ಕೊಡಲಿಲ್ಲ. ೨೦೦೮ರಲ್ಲಿ ಬಿಜೆಪಿ ಸರ್ಕಾರದಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ೧೨ ಕೋಟಿ ರೂ. ಅನುದಾನ ನೀಡಿ ಆಯೋಗ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟರು.
೨೦೧೩ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ೫ ವರ್ಷ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರೂ ಸಣ್ಣ ತೀರ್ಮಾನವನ್ನು ಮಾಡಲಿಲ್ಲ. ೨೦೧೯ರಲ್ಲಿ ಬಿಜೆಪಿ ಸರ್ಕಾರ ಬಂದಾಗ ಮತ್ತೆ ಪ್ರಕ್ರಿಯೆ ಆರಂಭಗೊಂಡಿತು. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹಂಚಿಕೆ ಮಾಡಲು ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗ ರಚಿಸಲಾಯಿತು. ಆಯೋಗ ಎಸ್ಸಿ ೧೭, ಎಸ್ಟಿಗೆ ೭ ಮೀಸಲಾತಿ ನೀಡಲು ಶಿಫಾರಸ್ಸು ನೀಡಿತು. ವರದಿ ಪರಿಶೀಲನೆಗೆ ನಿಯೋಜಿಸಿದ್ದ ಮಾಧುಸ್ವಾಮಿ ಸಮಿತಿಯೂ ಮಾದಿಗ ೬, ಹೊಲಯ ೫.೫, ಸ್ಪಶ್ಯ ಜಾತಿಗಳಿಗೆ ೪.೫, ಅಲೆಮಾರಿಗೆ ಶೇ. ೧ ಮೀಸಲಾತಿ ಹಂಚುವ ದಿಟ್ಟ ನಿರ್ಧಾರ ಕೈಗೊಂಡಿತು ಎಂದು ಹೇಳಿದರು.
ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ, ಮಾಜಿ ಉಪ ಮೇಯರ್ ವಿ.ಶೈಲೇಂದ್ರ, ಎಸ್ಸಿ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ ಐ, ಮಾಧ್ಯಮ ವಕ್ತಾರ ಮಹೇಶ್ ರಾಜೇ ಅರಸ್ ಮುಂತಾದವರಿದ್ದರು.

ಕೋಟ್
ಈ ಹಿಂದೆ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಎಸ್‌ಸಿಗೆ ಶೇ.೧೭ ಮೀಸಲಾತಿ ಹಂಚಿಕೆಯನ್ನು ಇದು ಊರ್ಜಿತನ ಎಂದು ಪ್ರಶ್ನೆ ಮಾಡಿದ್ದರು. ಈಗ ಅವರೇ ಶೇ. ೧೭ ಮೀಸಲಾತಿಯನ್ನು ಹಂಚಿದ್ದಾರೆ. ಅಲ್ಲದೇ ಒಳ ಮೀಸಲಾತಿ ಹಂಚಿಕೆಯ ಸಂಬಂಧ ಎಲ್ಲ ಗೊಂದಲಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ನಿವಾರಿಸಿದ್ದಾರೆ. ಆದರೆ, ಕಾಂಗ್ರೆಸ್‌ನಿಂದ ಒಳ ಮೀಸಲಾತಿ ಲಾಭ ತೆಗೆದುಕೊಳ್ಳುವ ಪಿತೂರಿ ನಡೆದಿದೆ.
ಎನ್.ಮಹೇಶ್, ಮಾಜಿ ಸಚಿವರು

TAGGED:
Share This Article
Leave a Comment