ಪ್ರಜಾಪ್ರಭುತ್ವ, ಜಾತ್ಯಾತೀತ ವಿರೋಧಿ ಆರ್‌ಎಸ್‌ಎಸ್‌: ಚಂದ್ರಶೇಖರ್‌

Pratheek
1 Min Read

ಪಬ್ಲಿಕ್ ಅಲರ್ಟ್


ಮೈಸೂರು: ಹಿಂದೂತ್ವವನ್ನು ವಾದಿಸುತ್ತಿರುವ ಆರ್‌ಎಸ್‌ಎಸ್  ಪ್ರಜಾಪ್ರಭುತ್ವ ಮತ್ತು ಜಾತ್ಯಾತೀತ ವಿರೋಧಿಯಾಗಿದೆ ಎಂದು ಆರ್‌ಎಸ್‌ಎಸ್‌ನ ನೂರನೇ ವರ್ಷದ ಸಂಭ್ರಮಾಚರಣೆಗೆ ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಬಿ.ಕೆ.ಚಂದ್ರಶೇಖರ್ ವಿರೋಧ ವ್ಯಕ್ತಪಡಿಸಿದರು.
ನಗರದ ಜಲದರ್ಶಿನಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು.‘‘ ಕೇಂದ್ರದಲ್ಲಿರುವ  ಬಿಜೆಪಿ ಪಕ್ಷವೂ ಆರ್‌ಎಸ್‌ಎಸ್‌ನ 100 ನೇ ವರ್ಷದ ಆಚರಣೆ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ಹಿಂದೂತ್ವವನ್ನು ವಾದಿಸುತ್ತಿರುವ ಆರ್‌ಎಸ್‌ಎಸ್  ಪ್ರಜಾಪ್ರಭುತ್ವ ಮತ್ತು ಜಾತ್ಯಾತೀತ ವಿರೋಧಿಯಾಗಿದ್ದು,  ಹಿಂದೂತ್ವವೇ ಅದರ ಮೂಲ ಅಜೆಂಡಾವಾಗಿದೆ ಎಂದು ದೂರಿದರು.
ವೀರ ಸಾವರ್ಕರ್, ಹೆಗ್ಗಡೆವಾರ್ ಅವರನ್ನು ಹಿಂದೂತ್ವದ ನಾಯಕರೆಂದು ಬಿಂಬಿಸುತ್ತಿರುವ ಆರ್‌ಎಸ್‌ಎಸ್ ಇಡೀ ದೇಶವನ್ನು ಹಿಂದೂ ರಾಷ್ಟ್ರವಾಗಿಸುವ ಗುರಿ ಹೊಂದಿದೆ. ಪ್ರಧಾನಿ ಮೋದಿ ಅವರು ಚುನಾವಣಾ ಆಯೋಗಕ್ಕೆ ಮುಖ್ಯ ಆಯುಕ್ತರನ್ನು ನೇಮಕ ಮಾಡುವ ಸಮಿತಿಯಲ್ಲಿ ಇದ್ದ ಸುಪ್ರಿಂಕೋರ್ಟ್ ಮುಖ್ಯ ನ್ಯಾಯಾಮೂರ್ತಿಗಳನ್ನು ಹೊರಗಿಟ್ಟು, ಕೇಂದ್ರದ ಸಚಿವರನ್ನು ಸಮಿತಿಗೆ ಸೇರ್ಪಡೆಗೊಳಿಸುವ ಮೂಲಕ ಚುನಾವಣಾ ಆಯೋಗ ತಮ್ಮ ಕೈಗೊಂಬೆಯನ್ನಾಗಿಸಿಕೊಂಡಿದೆ. ಈ  ಮೂಲಕ ಚುನಾವಣಾ ಆಯೋಗದ ಸ್ವಾತಂತ್ರ್ಯವನ್ನು ಹರಣ ಮಾಡಲಾಗಿದೆ.’’ಎಂದರು.
ರಾಜ್ಯ ಕಾಂಗ್ರೆಸ್ ಸರಕಾರ ಜಾತಿ ಗಣತಿಯು ಪ್ರಮುಖವಾಗಿದ್ದು,  ಬಿಜೆಪಿ ಸೇರಿ ಇತರೆ ಪಕ್ಷಗಳು ಸಮೀಕ್ಷೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ. ಸಮೀಕ್ಷೆಯಲ್ಲಿ  ಜಾತಿಯ ಮಾಹಿತಿಯೊಂದಿಗೆ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಕೂಡ ಆಗಿದೆ. ಇದು ಕೇವಲ ಜಾತಿ ಸಮೀಕ್ಷೆಯಲ್ಲ. ಜನತೆ ಗಣತಿದಾರರರಿಗೆ ಮಾಹಿತಿ ನೀಡುವ ಮೂಲಕ ಸರಕಾರ ನಡೆಸುತ್ತಿರುವ ಸಮೀಕ್ಷೆಗೆ ನೆರವಾಗಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್, ಕಾಂಗ್ರೆಸ್ ನಗರಾಧ್ಯಕ್ಷ ಆರ್. ಮೂರ್ತಿ, ಜಿಲ್ಲಾ ವಕ್ತಾರ ಕೆ.ಮಹೇಶ್ ಇನ್ನಿತರರು ಇದ್ದರು.

Share This Article
Leave a Comment