ಪಬ್ಲಿಕ್ ಅಲರ್ಟ್
ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ಚಾಮುಂಡಿಬೆಟ್ಟದಲ್ಲಿ ಅ.6ರಂದು ರಥೋತ್ಸವ ಹಾಗೂ ಅ.8ರಂದು ತೆಪ್ಪೋತ್ಸವ ನಡೆಯಲಿದ್ದು, ಅದಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ದಸರಾ ಮಹೋತ್ಸವದ ಜಂಬೂಸವಾರಿ ನೆರವೇರಿದ ನಂತರ ನಿಗದಿತ ಮುಹೂರ್ತದಲ್ಲಿ ಚಾಮುಂಡಿಬೆಟ್ಟದಲ್ಲಿ ಭವ್ಯ ರಥೋತ್ಸವ ನಡೆಸುವ ಸಂಪ್ರದಾಯವಿದೆ. ಅ.6ರಂದು ಬೆಳಗ್ಗೆ 9.36 ರಿಂದ 9.58ರೊಳಗೆ ಸಲ್ಲುವ ಶುಭ ಲಗ್ನದಲ್ಲಿ ಬೆಟ್ಟದ ದೇವಾಲಯದ ಮುಂಭಾಗ ರಥೋತ್ಸವಕ್ಕೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಚಾಲನೆ ನೀಡಲಿದ್ದಾರೆ. ಈ ವೇಳೆ ಸಂಸದ ಯದುವೀರ ಒಡೆಯರ್, ತ್ರಿಷಿಕಾ ಕುಮಾರಿ ಒಡೆಯರ್, ಶಾಸಕ ಜಿ.ಟಿ.ದೇವೇಗೌಡ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.
ರಥೋತ್ಸವ ಜರುಗಿದ ಎರಡು ದಿನದ ನಂತರ ಅ.8ರಂದು ಸಂಜೆ 6 ಗಂಟೆ ನಂತರ ಚಾಮುಂಡಿಬೆಟ್ಟದ ದೇವಿಕೆರೆಯಲ್ಲಿ ಚಾಮುಂಡೇಶ್ವರಿ ತಾಯಿಯ ಉತ್ಸವ ಮೂರ್ತಿಗೆ ತೆಪ್ಪೋತ್ಸವ ಸೇವೆ ಜರುಗಲಿದೆ. ತೆಪ್ಪೋತ್ಸವದ ವೇಳೆ ರಾಜವಂಶಸ್ಥರು ಪಾಲ್ಗೊಳ್ಳಲಿದ್ದಾರೆ. ತೆಪ್ಪೋತ್ಸವದ ಮೂಲಕ ಈ ಸಾಲಿನ ದಸರಾ ಮಹೋತ್ಸವದ ಧಾರ್ಮಿಕ ಕಾರ್ಯ ಸಂಪನ್ನಗೊಳ್ಳಲಿದೆ.
