ಪಬ್ಲಿಕ್ ಅಲರ್ಟ್
ಮೈಸೂರು: ಅರಣ್ಯ ಪ್ರದೇಶಗಳು ಕ್ಷೀಣಿಸುತ್ತಿದ್ದು, ವಸತಿ ಪ್ರದೇಶಗಳ ವಿಸ್ತರಣೆಯಿಂದ ಮಾನವ ವನ್ಯಜೀವಿ ಸಂಘರ್ಷ ಹೆಚ್ಚಾಗುತ್ತಿದೆ. ವನ್ಯಜೀವಿಗಳೊಂದಿಗೆ ಸಹಬಾಳ್ವೆ ಇಂದಿನ ಅಗತ್ಯವಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.
ಜಿಲ್ಲಾಡಳಿತ, ಮೈಸೂರು ಮತ್ತು ಕೊಡಗು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪ್ರಾದೇಶಿಕ ಕಚೇರಿ, ಮೈಸೂರು ಮತ್ತು ಕೊಡಗು ಸಹಯೋಗದೊಂದಿಗೆ ಮಹಾರಾಜ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಂಸ್ಥಾಪನೆಗೊoಡು 50 ವರ್ಷಗಳಾದ ಹಿನ್ನೆಲೆಯಲ್ಲಿ ಸುವರ್ಣ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ವನ್ಯಜೀವಿಗಳು ಪ್ರಕೃತಿ ಸಮತೋಲನ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದು, ಕಾಡಿನಂಚಿನ ಜನರಿಗೆ ಮತ್ತು ಮಕ್ಕಳಿಗೆ ವನ್ಯಜೀವಿಗಳ ಸ್ವಭಾವದ ಬಗ್ಗೆ ಮತ್ತು ಸಹಬಾಳ್ವೆಯ ಬಗ್ಗೆ ತಿಳಿಸಿ ಹೇಳುವ ಅಗತ್ಯವಿದೆ. ಈ ಕಾರ್ಯವನ್ನು ಸರ್ಕಾರೇತರ ಸಂಸ್ಥೆಗಳು ಮತ್ತು ಅರಣ್ಯ ಸಿಬ್ಬಂದಿ ಮಾಡಬೇಕು ಎಂದರು.
ಪ್ರಕೃತಿ ಪರಿಸರ ಚೆನ್ನಾಗಿದ್ದರೆ ಮಾತ್ರ ಭೂಮಿಯಲ್ಲಿ ಮನುಷ್ಯ ಜೀವಿಸಲು ಸಾಧ್ಯ, ಪ್ರಕೃತಿ ವಿಕೋಪವಾದರೆ ಏನೇನು ಅನಾಹುತ ಸಂಭವಿಸುತ್ತದೆ ಎಂಬುದು ನಾವೆಲ್ಲ ನೋಡಿದ್ದೇವೆ. ಪ್ರತಿ ವರ್ಷ ಒಂದಲ್ಲ ಒಂದು ಭಾಗಗಳಲ್ಲಿ ಪ್ರಕೃತಿ ವಿಕೋಪದಿಂದ ಸಾವಿರಾರು ಜನ ಸಾಯುತ್ತಿದ್ದಾರೆ ಹಾಗಾಗಿ ಪ್ರಕೃತಿ ವಿಕೋಪಗಳು ಆಗಲು ನಾವುಗಳೇ ಕಾರಣ ಇದನ್ನು ಅರಿಯಲು ಮುಂದಿನ ಪೀಳಿಗೆ ಮಕ್ಕಳಿಗೆ ಪ್ರಕೃತಿ ಹಾಗೂ ಪರಿಸರ ಉಳಿವಿಗೆ ಎಷ್ಟು ಮಹತ್ವ ಕೊಡಬೇಕು ಎಂಬುದನ್ನು ಅರಿವು ಮೂಡಿಸಬೇಕಿದೆ ಎಂದು ಹೇಳಿದರು.


ಸಿಕ್ಕ ಸಿಕ್ಕ ಕಡೆಗಳಲ್ಲಿ ಬೋರ್ ಕೊರೆಸಲಾಗುತ್ತಿದ್ದು, ಇದು ನೈಸರ್ಗಿಕ ವಿಕೋಪಕ್ಕೆ ಕಾರಣವಾಗಿದೆ. ಮರಗಳನ್ನು ಬೆಳೆಸುವುದಕ್ಕಿಂತ ಕಡಿಯಲಾಗುತ್ತಿದೆ. ಎಲ್ಲಂದರಲ್ಲಿ ಮುಗಿಲೆತ್ತರದ ಕಟ್ಟಡಗಳು ಕಟ್ಟಲಾಗುತ್ತಿದೆ. ಇದೆಲ್ಲ ಕಾರಣಗಳಿಂದ ಆಕ್ಸಿಜನ್ ಕೊರತೆ ಆಗುತ್ತಿದೆ. ಕೊರೊನಾ ಸಮಯದಲ್ಲಿ ಎಷ್ಟೋ ಜನರು ಆಕ್ಸಿಜನ್ ಸಿಗದೆ ಸಾವನ್ನಪ್ಪಿದರು. ಇದೆಲ್ಲ ಪರಿಸರ ವಿಕೋಪದಿಂದ ಆಗುತ್ತಿದ್ದರು ನಾವುಗಳು ಇನ್ನೂ ಎಚ್ಚೆತ್ತುಕೊಂಡಿಲ್ಲ. ನಮ್ಮ ರಾಜ್ಯ ಅನೇಕ ವನ್ಯ ಸಂಪತ್ತು ಹೊಂದಿರುವ ರಾಜ್ಯ ಸುತ್ತಲೂ ಅರಣ್ಯ ಪ್ರದೇಶ ಹೊಂದಿದೆ ಇದನ್ನು ಕಾಪಾಡುವುದು ಎಲ್ಲರ ಜವಾಬ್ದಾರಿ ಎಂದು ಹೇಳಿದರು.
ನಿನ್ನೆ ಸರಗೂರು ತಾಲೂಕಿನಲ್ಲಿ ಹುಲಿ ದಾಳಿಯಿಂದ ಮೃತಪಟ್ಟ ರಾಜಶೇಖರ್ ಅವರ ಆತ್ಮಕ್ಕೆ ಶಾಂತಿ ಕೋರಿದ ಸಚಿವರು, ಅವರ ಕುಟುಂಬದವರೊಂದಿಗೆ ಸರ್ಕಾರ ಇದೆ. ನಿಯಮಾನುಸಾರ ಕುಟುಂಬದವರಿಗೆ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.
ಮೈಸೂರು ಪ್ಲಾಸ್ಟಿಕ್ ಮುಕ್ತ ನಗರ: ಮೈಸೂರು ನಗರವನ್ನು ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ನಗರ ಎಂದು ಮಾನ್ಯ ಮುಖ್ಯಮಂತ್ರಿಯವರೇ ಘೋಷಿಸಿದ್ದಾರೆ. ಮಂಡಳಿಯ ಅಧಿಕಾರಿಗಳು ಸ್ಥಳೀಯ ಸಂಸ್ಥೆಗಳೊಂದಿಗೆ ಸೇರಿ ಮೈಸೂರು ನಗರವನ್ನು ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ಮಾಡಲು ಕೈಜೋಡಿಸಬೇಕು. ಮಾರುಕಟ್ಟೆಗೆ ಹೋಗುವಾಗ ಬಟ್ಟೆಯ ಕೈಚೀಲ ತೆಗೆದುಕೊಂಡು ಹೋಗಬೇಕು. ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಬಳಸಬಾರದು ಎಂದರು.
ಹವಾಮಾನ ವೈಪರೀತ್ಯದ ಸವಾಲು: ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ ಏರಿಕೆ ಇಂದು ದೊಡ್ಡ ಸವಾಲಾಗಿದ್ದು, ಪ್ರಕೃತಿ ವಿಕೋಪಗಳು ಸಂಭವಿಸುತ್ತಿವೆ. 2 ವರ್ಷಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಶಿರೂರಿನಲ್ಲಿ ಗುಡ್ಡ ಕುಸಿತ ಆಗಿತ್ತು, ಕೇರಳದ ವಯನಾಡಿನಲ್ಲಿ ಊರಿಗೆ ಊರೇ ಕೊಚ್ಚಿ ಹೋಗಿತ್ತು. ಇಂತಹ ಅನಾಹುತ ತಪ್ಪಬೇಕಾದರೆ ಪ್ರಕೃತಿ ಪರಿಸರದ ಕಾಳಜಿ ವಹಿಸಬೇಕು ಎಂದರು.
ಹವಾಮಾನ ವೈಪರೀತ್ಯದಿಂದ ಒಂದು ತಿಂಗಳ ಮಳೆ ಒಂದು ವಾರದಲ್ಲಿ ಬೀಳುತ್ತಿದೆ. ಒಂದು ವಾರದ ಮಳೆ ಒಂದು ದಿನದಲ್ಲಿ ಬೀಳುತ್ತಿದೆ. ಒಂದು ದಿನದ ಮಳೆ ಒಂದು ಗಂಟೆಯಲ್ಲಿ ಸುರಿಯುತ್ತಿದೆ. ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದನ್ನು ತಡೆಗಟ್ಟಲು ನಾವು ಹೆಚ್ಚು ಹೆಚ್ಚು ಮರ ಬೆಳೆಸಬೇಕು, ಅರಣ್ಯ ಸಂರಕ್ಷಿಸಬೇಕು ಎಂದು ತಿಳಿಸಿದರು.
ಬೇಸಿಗೆಯಲ್ಲಿ ತಾಪಮಾನವೂ ಅಧಿಕವಾಗಿ ಏರುತ್ತಿದೆ. ಹಜ್ ಯಾತ್ರೆಗೆ ಹೋದ ಸಾವಿರಾರು ಜನರು ಬಿಸಿಲ ತಾಪದಿಂದ ಮೃತಪಟ್ಟರು, ದೆಹಲಿ, ಉತ್ತರ ಭಾರತದಲ್ಲೂ ಬಿಸಿಲ ತಾಪಕ್ಕೆ ಜನರು ಬಲಿಯಾಗುತ್ತಾರೆ. ತಾಪಮಾನ ಏರಿಕೆಯನ್ನು ವೃಕ್ಷ ಸಂವರ್ಧನೆಯಿಂದ ಮಾತ್ರ ತಡೆಯಲು ಸಾಧ್ಯ ಎಂದರು.
ಇಂದಿರಾಗಾಂಧಿ ಕೊಡುಗೆ ಸ್ಮರಣೆ:
ದೂರ ದರ್ಶಿತ್ವದ ನಾಯಕರಾಗಿದ್ದ ದಿವಂಗತ ಪ್ರಧಾನಿ ಇಂದಿರಾಗಾಂಧಿ ಅವರು ಪ್ರಕೃತಿ ಪರಿಸರ, ವನ, ವನ್ಯಜೀವಿ ಉಳಿಸಲು ರೂಪಿಸಿದ ಕಾನೂನುಗಳು ಮತ್ತು ಕ್ರಮಗಳ ಫಲವಾಗಿ ಇಡೀ ದೇಶದಲ್ಲಿ ಪರಿಸರ, ಪ್ರಕೃತಿ, ಅರಣ್ಯ ಉಳಿದಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಚಿವ ಡಾ.ಹೆಚ್.ಸಿ. ಮಹದೇವಪ್ಪ ಮಾತನಾಡಿ ಪರಿಸರ ಮಾಲಿನ್ಯ ನಿಯಂತ್ರಣ ಎಂಬುದು ಇಂದು ವಿಜ್ಞಾನ ವಿಷಯದ ಒಂದು ಭಾಗವಾಗಿದೆ. ಜನರ ಜೀವನ ಮತ್ತು ಆರೋಗ್ಯ ಪರಿಸರವನ್ನೇ ಅವಲಂಬಿಸಿದೆ. ಪರಿಸರವನ್ನು ಸಂರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಬೇಕು ಎಂದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಅವರು ಮಾತನಾಡಿ ಪರಿಸರದ ಬಗ್ಗೆ ಅರಿವು ಮೂಡಿಸಬೇಕು ಎಂಬ ನಿಟ್ಟಿನಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಮುಂದಿನ ಪೀಳಿಗೆಗೆ ನಾವು ಕೊಡುವ ದೊಡ್ಡ ಆಸ್ತಿ ಎಂದರೆ ಅದು ಶುದ್ಧ ಗಾಳಿ,ಜಲ ಮತ್ತು ಆಹಾರ ಎಂದು ಹೇಳಿದರು.
ಇಂದಿರಾ ಗಾಂಧಿ ಅವರು ಪರಿಸರವನ್ನು ರಕ್ಷಣೆ ಮಾಡಬೇಕು ಎಂಬ ದೂರ ದೃಷ್ಟಿಕೋನವನ್ನು ಇಟ್ಟುಕೊಂಡು ಅನೇಕ ಪರಿಸರ ಕಾಯಿದೆಗಳನ್ನು ಜಾರಿಗೆ ತಂದಿದ್ದಾರೆ. ಅದರ ಅನ್ವಯ ನಾವು ಪರಿಸರವನ್ನು ರಕ್ಷಣೆ ಮಾಡಬೇಕು. ಯುವ ಜನರು ಪ್ರಕೃತಿಯ ಬಗ್ಗೆ ಹೆಚ್ಚು ಕಾಳಜಿಯನ್ನು ವಹಿಸಿ ಮುಂಬರುವ ಪೀಳಿಗೆಯವರಿಗೆ ಮಾದರಿಯಾಗಬೇಕು. ಪರಿಸರವನ್ನು ಉಳಿಸುವುರದ ಜೊತೆಗೆ ಮಾನವ ಸಂಕುಲಗಳನ್ನು ಉಳಿಸಬೇಕು. ಪ್ರಕೃತಿ ಉಳಿದರೆ ಮನುಷ್ಯರು ಉಳಿಯುವುದಕ್ಕೆ ಸಾಧ್ಯ ಎಂದು ಹೇಳಿದರು.
ಶಾಸಕ ಕೆ.ಹರೀಶ್ ಗೌಡ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಈ ಸಂಧರ್ಭದಲ್ಲಿ ಶ್ರೀ ಜಯಚಾಮರಾಜೇಂದ್ರ ಕಾಲೇಜು ಕಾಲೇಜು ಆಫ್ ಇಂಜಿನಿಯರಿಂಗ್, ಜೆ.ಎಸ್ ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ, ಮಡಿಲು ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ, ಪರಿಸರ ಮತ್ತು ಸಾಮಾಜಿಕ ತಜ್ಞರಾದ ಕೀರ್ತಿ ಡಿಸೋಜ, ಭಾರತ್ ಸ್ಕೌಡ್ಸ್ ಅಂಡ್ ಗೈಡ್ಸ್, ಕೊಡಗು ಜಿಲ್ಲೆ ಮಡಿಕೇರಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಕೊಡಗು ಜಿಲ್ಲಾ ಸಮಿತಿ, ಕೊಡಗು ಜಿಲ್ಲೆ, ಹ್ಯೂಮನ್ ವರ್ಲ್ಡ್ ಫಾರ್ ಅನಿಮಲ್ಸ್ , ಹೂಡಿಕೇರಿ, ಪೊನ್ನಂಪೇಟೆ ತಾಲ್ಲೂಕು ಕೊಡಗು ಜಿಲ್ಲೆ, ಒಟ್ಟು 6 ಸಂಸ್ಥೆಗಳಿಗೆ ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಅರಣ್ಯ ವಸತಿ ಮತ್ತು ವಿಹಾರಧಾಮಗಳ ನಿಗಮದ ಅಧ್ಯಕ್ಷ ಸಿ. ಅನಿಕುಮಾರ್, ಶಾಸಕ ಜಿ.ಟಿ.ದೇವೇಗೌಡ, ವಿಧಾನ ಪರಿಷತ್ ನ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ಡಾ.ಎಸ್.ಯತೀಂದ್ರ, ಕೆ.ಶಿವಕುಮಾರ್, ಕಾವೇರಿ ಜಲಾನಯನ ಯೋಜನೆಯ ಅಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷ ಮರಿಸ್ವಾಮಿ, ರಾಜ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿಗಳಾದ ಎಸ್. ಎಸ್. ಲಿಂಗರಾಜು, ಜಿಲ್ಲಾಧಿಕಾರಿಗಳಾದ ಜಿ.ಲಕ್ಷ್ಮಿಕಾಂತ ರೆಡ್ಡಿ, ಅಪರ ಜಿಲ್ಲಾಧಿಕಾರಿ ಡಾ. ಪಿ.ಶಿವರಾಜು,ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್.ಯುಕೇಶ್ ಕುಮಾರ್, ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಅಸೀಫ್ ಸೇರಿ ಮತ್ತಿತರರು ಉಪಸ್ಥಿತರಿದ್ದರು.
