ಪಬ್ಲಿಕ್ ಅಲರ್ಟ್
ಮೈಸೂರು: ರಾಷ್ಟ್ರಕವಿ ಕುವೆಂಪು ಅವರಿಗೆ ಭಾರತ ರತ್ನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕುವೆಂಪು ವಿಶ್ವಮಾನವ ಕ್ಷೇಮಾಭಿವೃದ್ಧಿ ಟ್ರಸ್ಟ್ ಅಭಿನಂದಿಸಿದೆ.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ಅಧ್ಯಕ್ಷ ಹೆಚ್.ಕೆ.ರಾಮು ಮಾತನಾಡಿ, ಆ.೨೯ರಂದು ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕುವೆಂಪು ಅವರಿಗೆ ಭಾರತ ರತ್ನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಈ ವಿಷಯ ವಿಳಂಬವಾಗಿದೆ ಎಂದು ತಿಳಿಸಿ, ಸಂಪುಟ ಸಭೆಯಲ್ಲಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ. ಅವರಿಗೆ ಹಾಗೂ ಸರ್ಕಾರಕ್ಕೆ ಮೈಸೂರಿನ ಜನತೆ ನಾಡಿನ ಎಲ್ಲಾ ಸಾಹಿತಿಗಳ ಪರ ಧನ್ಯವಾದ ತಿಳಿಸಿದರು.
ಟ್ರಸ್ಟ್ ವತಿಯಿಂದ ಪ್ರಧಾನ ಮಂತ್ರಿ ಮೋದಿ ಅವರಿಗೆ ಮನವಿ ಸಲ್ಲಿಸಲು ಸದ್ಯದಲ್ಲಿಯೇ ತೆರಳುತ್ತೇವೆ. ಅದಕ್ಕೂ ಮುನ್ನ ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ, ವಿ.ಸೋಮಣ್ಣ ಪ್ರಹ್ಲಾದ್ ಜೋಷಿ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ವೀರಪ್ಪ ಮೋಯ್ಲಿ ಡಾ.ಮಂಜುನಾಥ್ ಅವರನ್ನು ಭೇಟಿ ಮಾಡಿ ಒತ್ತಡ ಹಾಕುವಂತೆ ಮನವಿ ಮಾಡುತ್ತೇವೆ ಎಂದರು.
ಹಿರಿಯ ಸಾಹಿತಿ ಸಿ.ಪಿ.ಕೃಷ್ಣಕುಮಾರ್ ಮಾತನಾಡಿ, ನಮ್ಮ ಮನವಿ ಇಂದು ಸಫಲವಾಗಿದ್ದು, ಮಖ್ಯಮಂತ್ರಿಗಳು ಕೇಂದ್ರಕ್ಕೆ ಶಿಫಾರಸು ಮಾಡಿದ್ದಾರೆ. ಅವರಿಗೆ, ಸರ್ಕಾರಕ್ಕೆ ಧನ್ಯವಾದ. ಈಗ ಚೆಂದು ಕೇಂದ್ರ ಸರ್ಕಾರದ ಅಂಗಳದಲ್ಲಿದ್ದು, ರಾಜ್ಯದಿಂದ ಆಯ್ಕೆಗೊಂಡಿರುವ ಸಂಸದರು ಒತ್ತಡ ಹಾಕಬೇಕು ಎಂದ ಅವರು, ರಾಜ್ಯ ಸರ್ಕಾರ ನಟ ಡಾ.ವಿಷ್ಣುವರ್ಧನ್ ಮತ್ತು ನಟಿ ಬಿ.ಸರೋಜಾದೇವಿ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿರುವುದಕ್ಕೂ ಅಭಿನಂದನೆ ತಿಳಿಸಿದರು.
ನಂತರ ಪ್ರೊ.ಕೆ.ಎಸ್.ಭಗವಾನ್ ಮಾತನಾಡಿ, ರಾಜ್ಯದ ಎಲ್ಲಾ ಸಂಸತ್ತು ಸದಸ್ಯರು ಪಕ್ಷತೀತವಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು. ಇದರಿಂದ ಕೆಲಸ ಬೇಗ ಈಡೇರುತ್ತದೆ. ಒತ್ತಡ ಇಲ್ಲದಿದ್ದರೆ ಈ ಕೆಲಸ ಆಗುವುದಿಲ್ಲ. ಕುವೆಂಪು ಅವರಿಗೆ ಭಾರತ ರತ್ನ ನೀಡುವುದರಿಂದ ಭಾರತ ರತ್ನಕ್ಕೆ ಗೌರವ ಬರುತ್ತದೆ ಎಂದರು.
ಕೆ.ಟಿ.ವೀರಪ್ಪ ಮಾತನಾಡಿ, ಕುವೆಂಪು ಅವರ ಶ್ರೀ ರಾಮಾಯಣ ದರ್ಶನ ಕೃತಿಗಳು ಹಿಂದಿ, ಸಂಸ್ಕೃತಭಾಷೆಗೆ ಅನುವಾದಗೊಂಡಿದೆ. ಮೋದಿ ಅವರಿಗೆ ಅವಿಗಳನ್ನು ನೀಡಿದರೆ ಉತ್ತಮ ಎಂದು ಸಲಹೆ ನೀಡಿದರು.
ಡಾ.ಎಸ್.ಪಿ.ಯೋಗಣ್ಣ ಮಾತನಾಡಿ, ಸಿದ್ದರಾಮಯ್ಯ ಅವರು ಮನಸ್ಸು ಮಾಡಿದರೆ ಏನು ಬೇಕದರೂ ಮಾಡುತ್ತಾರೆ. ಅದರಲ್ಲೂ ಅವರು ಸಾಹಿತ್ಯ ಅಭಿಮಾನಿಯಾಗಿರುವುದರಿಂದ ಅವರು ಇಷ್ಟು ಬೇಗ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ದೆಹಲಿಯಲ್ಲಿ ಕುವೆಂಪು ಅವರ ಸಾಹಿತ್ಯ, ವಿಚಾರಧಾರೆಯನ್ನು ತಿಳಿಸಬೇಕಿದೆ. ವಿಚಾರ ಸಂಕಿರಣವನ್ನು ಏರ್ಪಡಿಸಬೇಕು ಎಂಬ ಆಲೋಚನೆ ಇದೆ ಎಂದು ತಿಳಿಸಿದರು.
