ಧರ್ಮಸ್ಥಳ ತನಿಖೆ ನ್ಯಾಯಯುತವಾಗಿ ನಡೆಯಲಿ

Pratheek
1 Min Read

ಪಬ್ಲಿಕ್ ಅಲರ್ಟ್


ಮೈಸೂರು:ಧರ್ಮ ಸ್ಥಳದಲ್ಲಿ ನಡೆದಿರುವ ಅಪರಾಧ ಕೃತ್ಯಗಳ ತನಿಖೆ ನಡೆಸುತ್ತಿರುವ ಎಸ್‌ಐಟಿ ಮುಕ್ತ ಹಾಗೂ ಒತ್ತಡಗಳಿಲ್ಲದೇ ನ್ಯಾಯಯುತವಾಗಿ ತನಿಖೆ ನಡೆಸಲು ಅವಕಾಶ ನೀಡಬೇಕೆಂಬ ನಿರ್ಣಯವನ್ನು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪ್ರತಿಭಟನೆ ಸಭೆಯಲ್ಲಿ ಕೈಗೊಳ್ಳಲಾಯಿತು.
ಒಡನಾಡಿ ಸೇವಾ ಸಂಸ್ಥೆ ನೇತೃತ್ವದಲ್ಲಿ ನಗರದ ಚಿಕ್ಕ ಗಡಿಯಾರ ವೃತ್ತದಲ್ಲಿ ಬುಧವಾರ ಪ್ರತಿಭಟನಾ ಸಭೆ ನಡೆಸಲಾಯಿತು. ಸಭೆಯಲ್ಲಿ ಸೌಜನ್ಯ ಪ್ರಕರಣವೂ ಸೇರಿ ಧರ್ಮಸ್ಥಳದಲ್ಲಿ ನಾಲ್ಕೈದು ದಶಕಗಳಲ್ಲಿ ನಡೆದಿರುವ ಅತ್ಯಾಚಾರ, ಕೊಲೆ, ಮಹಿಳೆಯರ ನಾಪತ್ತೆ ಪ್ರಕರಣಗಳ ಹಿಂದಿರುವ ಸತ್ಯ ಏನೆಂಬುದನ್ನು ತಿಳಿಯುವುದು ದೇಶದ ಪ್ರತಿಯೊಬ್ಬರ ಹಕ್ಕು. ಇದನ್ನು ಮಾನ್ಯ ಮಾಡಿ ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ದಳ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಇಷ್ಟರಿಂದಲೇ ಬೆಚ್ಚಿ ಬಿದ್ದಿರುವ ಕೆಲವು ಶಕ್ತಿಗಳು ಎಸ್‌ಐಟಿ ತನಿಖೆಯನ್ನು ದಾರಿ ತಪ್ಪಿಸುವ ಪ್ರಯತ್ನಗಳನ್ನು ಆರಂಭಿಸಿವೆ. ವಿರೋಧ ಪಕ್ಷದ ನಾಯಕರೂ ಇಂತಹ ಪ್ರಯತ್ನಗಳಿಗೆ ಬೆಂಬಲವಾಗಿ ನಿಂತಿರುವುದು ಜನರಿಗೆ ತಿಳಿಯುತ್ತಿದೆ. ಇದಕ್ಕಾಗಿ ದೇವರು, ಧರ್ಮ ಇತ್ಯಾದಿ ಹೆಸರುಗಳನ್ನು ತಂದು ಜನರ ಮನಸ್ಸುಗಳನ್ನು ದಿಕ್ಕು ತಪ್ಪಿಸುವ ಕೆಲಸವೂ ಆರಂಭವಾಗಿದೆ.
ಈಗ ನಮ್ಮೆಲ್ಲರ ಒಕ್ಕೊರಲಿನ ದನಿ ಒಂದೇ, ರಾಜ್ಯ ಸರ್ಕಾರ ಇದೆಲ್ಲವನ್ನೂ ಗಮನಿಸಿ ಎಸ್‌ಐಟಿ ಮುಕ್ತವಾಗಿ, ಒತ್ತಡಗಳು ಇಲ್ಲದ ರೀತಿಯಲ್ಲಿ ನ್ಯಾಯಯುತವಾಗಿ ತನಿಖೆ ಮುಂದುವರಿಸುವಂತೆ ನೋಡಿಕೊಳ್ಳಬೇಕು. ಅಪರಾಧಿಗಳಿಗೆ ಶಿಕ್ಷೆ ಆಗುವಂತೆ ಮಾಡಬೇಕು. ನೊಂದವರಿಗೆ ನ್ಯಾಯ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆಯನ್ನು ರ‍್ಕಾರ ಜನರಲ್ಲಿ ಮೂಡಿಸಬೇಕು. ಹಾಗೆಯೇ, ನ್ಯಾಯಕ್ಕಾಗಿ ಹೋರಾಡುವವರಿಗೆ ಅಗತ್ಯ ರಕ್ಷಣೆ ಒದಗಿಸುವ ಹೊಣೆಯನ್ನೂ ಹೊರಬೇಕೆಂದು ಸಭೆ ನಿರ್ಣಯ ಕೈಗೊಂಡಿತು.
ಒಡನಾಡಿ ಸೇವಾ ಸಂಸ್ಥೆ ನಿರ್ದೇಶಕ ಕೆ.ವಿ.ಸ್ಯ್ಟಾನ್ಲಿ, ರೈತ ಮುಖಂಡ ಜೆ.ಪಿ.ಬಸವರಾಜು, ಸಬಿಹಾ ಭೂಮಿಗೌಡ, ಕಾಳಚನ್ನೇಗೌಡ, ಟಿ.ಗುರುರಾಜ್‌, ಪಿ.ಮರಂಕಯ್ಯ ಮುಂತಾದವರಿದ್ದರು.

ಬಾಕ್ಸ್‌
ಸಂತೋಷ್ ರಾವ್ ನಿರಪರಾಧಿ ಎಂದು ನ್ಯಾಯಾಲಯ ಹೇಳಿದೆ. ಹಾಗಾದರೆ ಕೊಲೆ, ಅತ್ಯಾಚಾರ ಮಾಡಿದವರು ಯಾರು? ಪದ್ಮಾವತಿ, ವೇದವಳ್ಳಿ ಕೊಂದವರು ಯಾರು ಜೋಡಿ ಕೊಲೆ ಮಾಡಿದ್ದು ಯಾರು? ಸತ್ತವರ ಮನೆಗಳನ್ನು ಧ್ವಂಸ ಮಾಡಿ ಕಟ್ಟಿರುವ ಕಟ್ಟಡಗಳು ಯಾರದ್ದು ? ಇದೆಲ್ಲದರ ಬಗ್ಗೆ ಸಮಗ್ರ ತನಿಖೆ ಆಗಬೇಕು.
-ಕೆ.ವಿ.ಸ್ಯ್ಟಾನ್ಲಿ, ನಿರ್ದೇಶಕ, ಒಡನಾಡಿ ಸೇವಾ ಸಂಸ್ಥೆ

Share This Article
Leave a Comment