ದಸರಾ ಆನೆಗಳ ಪಟ್ಟಿ ಸಿದ್ಧಗಜಪಯಣಕ್ಕೆ ದಿನಗಣನೆ

latha prabhukumar
1 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ದಸರಾ ಆನೆಗಳ ಪಟ್ಟಿ ಸಿದ್ಧ
ಗಜಪಯಣಕ್ಕೆ ದಿನಗಣನೆ
ಬೆಂಗಳೂರು: ವಿಶ್ವವಿಖ್ಯಾತ, ನಾಡಹಬ್ಬ ದಸರೆಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಗಜಪಯಣಕ್ಕೆ ಎಲ್ಲಾ ತಯಾರಿ ನಡೆದಿದ್ದು, ಇದೇ ತಿಂಗಳ ಅಂದರೆ ಆ.೨೬ರಂದು ಮೊದಲ ತಂಡದ ಆನೆಗಳು ಮೈಸೂರಿಗೆ ಆಗಮಿಸಲಿದೆ.
ಇನ್ನೂ ದಸರಾ ಗಜಪಯಣದ ಆನೆಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಮಂಗಳವಾರ ಅರಣ್ಯ ಸಚಿವರಾದ ರಾಮಲಿಂಗಾರೆಡ್ಡಿ ಅವರು ಬೆಂಗಳೂರಲ್ಲಿ ಬಿಡುಗಡೆ ಮಾಡಿದರು.ಈ ವೇಳೆ ಡಿಸಿಎಫ್ ಪ್ರಭುಗೌಡ, ಆರ್‌ಎಫ್‌ಓ ರೇಷ್ಮಾ ಮಾಚಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಮತ್ತಿಗೋಡು, ಭೀಮನಕಟ್ಟೆ, ದೊಡ್ಡಹರವೆ, ದುಬಾರೆ, ಬಳ್ಳೆ ಹಾಗೂ ರಾಂಪುರ ಕ್ಯಾಂಪ್ ನಿಂದ ಒಟ್ಟು ೨೦ ಆನೆಗಳನ್ನು ಗುರುತಿಸಿ ಪಟ್ಟಿ ಸಿದ್ಧ ಮಾಡಲಾಗಿದ್ದು, ಅವುಗಳಲ್ಲಿ ೧೬ ಆನೆಗಳ ಪಟ್ಟಿ ಅಂತಿಮಗೊಂಡಿದೆ.
ಇನ್ನೂ ಇಂದು ಸಚಿವರು ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಗೋಪಿ, ಶ್ರೀರಾಮ, ಚೈತ್ರ, ಸುಗ್ರೀವ, ಕಾವೇರಿ, ಧನಂಜಯ, ಲಕ್ಷ್ಮಿ, ಏಕಲವ್ಯ, ಪ್ರಶಾಂತ, ರೂಪ, ಮಹೇಂದ್ರ ಹಾಗೂ ಶ್ರೀಕಂಠ, ಹರ್ಷ ಮತ್ತು ಭಗೀರಥ ಆನೆಗಳ ಹೆಸರಿದ್ದು, ನಾಳೆ(ಬುಧವಾರ) ಎಲ್ಲಾ ಆನೆಗಳ ಪಟ್ಟಿ ಅಂತಿಮಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
ಇನ್ನೂ ಅಂಬಾರಿ ಆನೆ ಆಯ್ಕೆಯ ಸವಾಲು ಅರಣ್ಯಾಧಿಕಾರಿಗಳಿಗೆ ಇದ್ದು, ೨೦೨೦ರಿಂದ ಕಳೆದ ಸಾಲಿನವರೆಗೂ ಅಂಬಾರಿ ಹೊತ್ತು ಯಶಸ್ವಿಯಾಗಿರುವ ಎಲ್ಲರ ನೆಚ್ಚಿನ ಕ್ಯಾಪ್ಟನ್ ‘ಅಭಿಮನ್ಯು’ ಈ ಬಾರಿಯೂ ದಸರೆಯ ಸಾರಥಿಯಾಗಲಿದೆ ಎನ್ನಲಾಗಿದೆ.
ಇನ್ನೂ ಇದೇ ವೇಳೆ ಅಭಿಮನ್ಯು ಜೊತೆ ಪ್ರಶಾಂತ, ಗೋಪಿ, ಧನಂಜಯ ಮತ್ತು ಮಹೇಂದ್ರ ಆನೆಗಳಿಗೂ ಕೂಡಾ ಅಂಬಾರಿ ಹೊರುವ ತರಬೇತಿ ನೀಡಲಾಗುತ್ತದೆ ಎಂದು ಸಹ ಮಾಹಿತಿ ಲಭ್ಯವಾಗಿದ್ದು, ಮುಂದಿನ ದಿನಗಳಲ್ಲಿ ಅಭಿಮನ್ಯು ಉತ್ತರಾಧಿಕಾರಿಯಾಗಿ ‘ಪ್ರಶಾಂತ’ ಆನೆಗೆ ಅಂಬಾರಿ ಹೊರುವ ಜವಾಬ್ದಾರಿ ವಹಿಸಲು ಸಹ ನಿರ್ಧರಿಸಲಾಗುತ್ತಿದೆ ಎನ್ನಲಾಗುತ್ತಿದೆ.
೫೩ ವರ್ಷದ ಪ್ರಶಾಂತ ಆನೆ ಶಿಸ್ತು ಬದ್ಧ ನಡಿಗೆಯೊಂದಿಗೆ ಹಾಗೂ ತನ್ನ ಸೌಮ್ಯ ಸ್ವಭಾವದೊಂದಿಗೆ ಎಲ್ಲರ ಮನಗೆದ್ದಿದ್ದು, ಮುಂದಿನ ದಸರಾ ಮಹೋತ್ಸವದಲ್ಲಿ ಪ್ರಶಾಂತ ಗಜಪಡೆಯ ಕ್ಯಾಪ್ಟನ್ ಆಗಲಿರುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿದೆ.

Share This Article
Leave a Comment