ಪಬ್ಲಿಕ್ ಅಲರ್ಟ್
ಮೈಸೂರು: ರಾಜಕೀಯ ನಿರುದ್ಯೋಗಿಯಾಗಿರುವ ಪ್ರತಾಪ್‌ಸಿಂಹ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಪಡೆಯಲೆಂದು ಸುದ್ದಿಗೆ ಬರಲು ಬಾನು ಮುಷ್ತಾಕ್ ಅವರನ್ನು ದಸರಾಗೆ ಆಯ್ಕೆ ಮಾಡಿರುವುದನ್ನು ವಿರೋಧಿಸುತ್ತಿದ್ದಾರೆಂದು ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್. ಶಿವರಾಂ ಲೇವಡಿ ಮಾಡಿದರು.
ನಗರದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ಸಾಂಸ್ಕೃತಿಕ ನಗರಿಯಾದ ಮೈಸೂರು ತನ್ನದೇ ಆದ ಇತಿಹಾಸ ಹೊಂದಿದೆ. ಆದರೆ ಸಂಘ ಪರಿವಾರವು ದಸರಾವನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದೆ. ಜನರ ಭಾವನೆಯೊಡನೆ ಆಟ ಆಡುವ ನಿಟ್ಟಿನಲ್ಲಿ ಬಾನು ಮುಷ್ತಾಕ್ ಅವರ ಆಯ್ಕೆ ವಿರೋಧಿಸುತ್ತಿದೆ. ಇದೇ ರೀತಿ ಮಾತನಾಡುವ ಮಾಜಿ ಸಂಸದ ಪ್ರತಾಪ್‌ಸಿಂಹ ಅವರಿಗೆ ಏನಾದರೂ ಬೂಕರ್ ಪ್ರಶಸ್ತಿ ಪಡೆಯುವ ಅರ್ಹತೆ ಇದೆಯೇ ಎಂದು ಪ್ರಶ್ನಿಸಿದರು. ಇವರೆಲ್ಲ ನಕಲಿ ಹಿಂದುತ್ವ ವಾದಿಗಳಾಗಿದ್ದಾರೆ. ಆರ್. ಅಶೋಕ್, ಪ್ರತಾಪ್‌ಸಿಂಹ, ಬಿ.ವೈ. ವಿಜಯೇಂದ್ರ ಇದೇ ಸಾಲಿನವರಾಗಿದ್ದಾರೆ. ಈ ಹಿಂದೆ ಮಿರ್ಜಾ ಇಸ್ಮಾಯಿಲ್, ಟಿಪ್ಪು ಸುಲ್ತಾನ್ ದಸರಾ ನಡೆಸಿರಲಿಲ್ಲವೇ, ನಿಸಾರ್ ಅಹಮದ್ ಉದ್ಘಾಟಿಸಿದಾಗ ಏಕೆ ವಿರೋಧಿಸಲಿಲ್ಲ ಎಂದು ಪ್ರಶ್ನಿಸಿದರು.
ಬಳಿಕ, ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವುದನ್ನು ಬೆಂಬಲಿಸಿ ವಿವಿಧ ಸಂಘಟನೆಗಳು ಕರೆ ನೀಡಿರುವ ಸೆ.೯ರ ಚಾಮುಂಡಿಬೆಟ್ಟದತ್ತ ಸೌಹಾರ್ದಯುತ ನಡಿಗೆ ಕಾರ್ಯಕ್ರಮಕ್ಕೆ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಬೆಂಬಲ ನೀಡಿ ಪಾಲ್ಗೊಳ್ಳಲಿದೆ ಎಂದು ಜಿಲ್ಲಾಧ್ಯಕ್ಷ ಕೆ.ಎಸ್. ಶಿವರಾಮು ತಿಳಿಸಿದರು. ಬೆಳಗ್ಗೆ ೭ಕ್ಕೆ ನಗರದ ಕುರುಬಾರಹಳ್ಳಿ ವೃತ್ತದಿಂದ ನಡಿಗೆ ಹೊರಡಲಿದೆ. ಬೆಟ್ಟ ತಲುಪಿ, ಕೋಮುವಾಗಿಗಳು, ದ್ವೇಷ ಬಿತ್ತುವವರಿಗೆ ಒಳ್ಳೆಯ ಬುದ್ಧಿ ನೀಡುವಂತೆ ಚಾಮುಂಡೇಶ್ವರಿಯಲ್ಲಿ ಪ್ರಾರ್ಥನೆ ಸಲ್ಲಿಸಲಾಗುವುದೆಂದರು.
ರವಿನಂದನ್, ಎಸ್. ರಾಜೇಶ್, ಎಚ್.ಎಸ್. ಪ್ರಕಾಶ್, ಲೋಕೇಶ್ ಕುಮಾರ್ ಮಾದಾಪುರ, ಯೋಗೀಶ್ ಉಪ್ಪಾರ, ಎಸ್.ಎ. ರಹೀಂ ಮೊದಲಾದವರು ಇದ್ದರು.
