ಯತ್ನಾಳ್‌ ಹೇಳಿಕೆ ಬಹಿರಂಗ ಕ್ಷಮೆಯಾಚನೆಗೆ ಒತ್ತಾಯ

Pratheek
1 Min Read

  ಪಬ್ಲಿಕ್ ಅಲರ್ಟ್


ಮೈಸೂರು:ಮುಸ್ಲಿಂ ಮಹಿಳೆಗೆ ಮಾತ್ರವಲ್ಲ, ಯಾವೊಬ್ಬ ದಲಿತ ಮಹಿಳೆಗೂ ದಸರಾ ಉದ್ಘಾಟಿಸುವ ಅರ್ಹತೆ ಇಲ್ಲ ಎಂಬ ಹೇಳಿಕೆ ನೀಡಿರುವ ಬಿಜೆಪಿಯ ಶಾಸಕ ಬಸವರಾಜ ಪಾಟೀಲ್ ಯತ್ನಾಳ್ ದಲಿತ ಮಹಿಳೆಯರನ್ನು ಅಪಮಾನಿಸಿದ್ದಾರೆ. ಹೀಗಾಗಿ ಅವರು ಬಹಿರಂಗ ಕ್ಷಮೆ ಯಾಚಿಸದಿದ್ದರೆ ಕಂಡಲ್ಲೆಲ್ಲ ಪಾದರಕ್ಷೆ ಎಸೆದು ಪ್ರತಿಭಟಿಸಲಾಗುವುದು ಎಂದು  ಮಾಜಿ ಮೇಯರ್ ಪುರುಷೋತ್ತಮ್ ಎಚ್ಚರಿಸಿದರು.
ನಗರದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ಯತ್ನಾಳ್ ಈ ದೇಶದ ಮೂಲ ನಿವಾಸಿಗಳ ಚರಿತ್ರೆಯನ್ನೇ ತಿಳಿದಿಲ್ಲ. ಶಾಸಕರಾದ ಮೇಲೆ ಎಲ್ಲ ಎಲ್ಲ ಧರ್ಮ, ಜಾತಿಯವರನ್ನೂ ಸಮಾನವಾಗಿ ಕಾಣಬೇಕಾಗಿತ್ತು. ಆದರೆ ಈಗ ತಮ್ಮ ಮನಸ್ಥಿತಿ ಬಹಿರಂಗಗೊಳಿಸಿದ್ದಾರೆ. ಇದು ಬಹುಸಂಖ್ಯಾತರಿಗೆ ಮಾಡಿರುವ ದೊಡ್ಡ ಅಪಮಾನವಾಗಿದೆ ಎಂದು ಕಿಡಿಕಾರಿದರು.
ಆರ್‌ಎಸ್‌ಎಸ್, ಬಿಜೆಪಿಯವರು ನಿರಂತರವಾಗಿ ದಲಿತರ ಶೋಷಣೆ ಮಾಡುತ್ತಿದ್ದಾರೆ. ಅವರ ಮುಖವಾಡ ಒಂದೊAದಾಗಿ ಕಳಚುತ್ತಿದೆ. ಇದನ್ನು ಇನ್ನೂ ಸಹಿಸಿಕೊಳ್ಳಲು ಸಾಧ್ಯವಿಲ್ಲ. ದ್ರೌಪದಿ ಮುರ್ಮು ದಲಿತ ಮಹಿಳೆಯಾಗಿದ್ದಾರೆಂಬ ಒಂದೇ ಕಾರಣಕ್ಕೆ ಹೊಸ ಸಂಸತ್ ಭವನ, ಅಯೋಧ್ಯಾ ರಾಮಮಂದಿರ ಉದ್ಘಾಟನೆಗೆ ಕರೆಯದೇ ಅಪಮಾನಿಸಿ, ಕೇವಲ ಶೋಕೇಸ್ ಬೊಂಬೆಯಾಗಿಸಿದ್ದಾರೆ. ನಮ್ಮನ್ನು ಹಿಂದೂ ಎಂದು ಒಪ್ಪದಿದ್ದ ಮೇಲೆ ಈ ಧರ್ಮ ಏಕೆ ಬೇಕು, ನಮಗೆ ಬೌದ್ಧ ಧರ್ಮವಿದೆ. ಹೀಗಾಗಿ ಈ ಬಾರಿಯ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸಮೀಕ್ಷೆ ವೇಳೆ ದಲಿತರು ಧರ್ಮ ಎಂಬ ಕಾಲಂನಲ್ಲಿ ಬೌದ್ಧ ಎಂದು ಬರೆಯಿಸುವಂತೆ ಸಲಹೆ ನೀಡಲಾಗಿದೆ ಎಂದರು.
ಬಾನು ಮುಷ್ತಾಕ್ ದಸರಾ ಉದ್ಘಾಟಿಸುವುದರ ವಿರುದ್ಧ ನ್ಯಾಯಾಲಯಕ್ಕೆ ಹೋದರು, ಏನು ತೀರ್ಪು ಬಂತು, ಇದು ಪ್ರಜಾಪ್ರಭುತ್ವ ವ್ಯವಸ್ಥೆಯಾಗಿದೆ. ಇಲ್ಲಿ ಯಾರನ್ನೂ ಧಿಕ್ಕರಿಸುವ ನೈತಿಕತೆ ಯಾರಿಗೂ ಇಲ್ಲ ಎಂದರು. ಯತ್ನಾಳ್ ವಿರುದ್ಧ ಶೀಘ್ರವೇ ಇಲ್ಲಿಯೂ ಜಾತಿ ನಿಂದನೆ ದೂರು ದಾಖಲಿಸಲಾಗುವುದು. ಸೆ. ೨೪ ರಂದು ಮಹಿಷ ದಸರಾ ಆಚರಿಸುತ್ತಿದ್ದು, ಚಾಮುಂಡಿಬೆಟ್ಟದಲ್ಲಿ ಮಹಿಷನ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲು ಅನುಮತಿ ನೀಡುವಂತೆ ಪೊಲೀಸ್ ಆಯುಕ್ತರಿಗೆ ಮನವಿ ಮಾಡಲಾಗುವುದೆಂದರು. ಸೋಮಯ್ಯ ಮಲೆಯೂರು, ಸಾಹಿತಿ ಸಿದ್ದಸ್ವಾಮಿ, ವಿಷಕಂಠು, ಪುಟ್ಟರಾಜು ಹಾಜರಿದ್ದರು.

Share This Article
Leave a Comment