ಸೆ.22ರಿಂದ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಪುಸ್ತಕ ಮೇಳ

Pratheek
3 Min Read

ಪಬ್ಲಿಕ್ ಅಲರ್ಟ್

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು ದಸರಾ ಮಹೋತ್ಸವ ಸಮಿತಿ ಹಾಗೂ ಬೆಂಗಳೂರಿನ ಕನ್ನಡ ಪುಸ್ತಕ ಪ್ರಾಧಿಕಾರದ ಸಹಯೋಗದಲ್ಲಿ ಸೆ.22ರಿಂದ ಅ.1ರವರೆಗೆ ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಲಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ತಿಳಿಸಿದರು.
ನಗರದ ಕಲಾಮಂದಿರದಲ್ಲಿರುವ ಸುಚಿತ್ರಾ ಆರ್ಟ್ ಗ್ಯಾಲರಿಯಲ್ಲಿ ಪುಸ್ತಕ ಮೇಳ ಕುರಿತಾಗಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಸರಾ ಪ್ರಮುಖ ಭಾಗವಾಗಿ ಪ್ರತಿ ವರ್ಷವು ಪುಸ್ತಕ ಮೇಳ ನಡೆಯಲಿದ್ದು, ಈ ಬಾರಿ ಹಿಂದೆಂದಿಗಿಂತಲೂ ವಿಭಿನ್ನವಾಗಿ ಪುಸ್ತಕ ಪ್ರದರ್ಶನವನ್ನು ಆಯೋಜಿಸಲಾಗಿದೆ. ಪ್ರತಿ ದಿನವೂ ವಿಶೇಷತೆಯನ್ನು ಹೊಂದಿರುವ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಸಂಜೆ 5 ಗಂಟೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ ಎಸ್. ತಂಗಡಗಿ ಅವರು ಉದ್ಘಾಟನೆ ಮಾಡಲಿದ್ದಾರೆ. ಜೊತೆಗೆ ಕನ್ನಡ ಮತ್ತು ಸಂಸ್ಕೃತಿ‌ಇಲಾಖೆಯ ಕಾರ್ಯದರ್ಶಿ ಎಂ.ವಿ. ವೆಂಕಟೇಶ್, ನಿರ್ದೇಶಕರಾದ ಕೆ.ಎಂ.ಗಾಯಿತ್ರಿ ಅವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು‌.
‌ನಿತ್ಯ ಬೆ.10ರಿಂದ ರಾತ್ರಿ 8.30ರವರೆಗೆ ನಡೆಯಲಿರುವ ಪುಸ್ತಕ ಪ್ರದರ್ಶನ‌ ಮತ್ತು ಮಾರಾಟ ಮೇಳದಲ್ಲಿ ನಿತ್ಯವೂ ವಿಶೇಷತೆ ಹೊಂದಿದ್ದು, ಸಾಹಿತಿಗಳೊಂದಿಗೆ ಸೆಲ್ಫಿ, ಸಾಂಸ್ಕೃತಿಕ ಕಾರ್ಯಕ್ರಮ, ವಿಚಾರ ಗೋಷ್ಠಿಗಳು ನಡೆಯಲಿದೆ. ಜೊತೆಗೆ ಪ್ರತಿ‌ದಿನ ಬೆಳಿಗ್ಗೆ 11ಗಂಟೆಗೆ ಇದುವರೆವಿಗೂ ಬಿಡುಗಡೆ ಕಾಣದಿರುವ ವಿವಿಧ ಪುಸ್ತಕಗಳನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡುವ ಮೂಲಕ ಲೇಖಕರನ್ನು ಪ್ರೋತ್ಸಾಹಿಸಲಾಗುವುದೆಂದರು.
ಪುಸ್ತಕ ಮೇಳ ಉದ್ಘಾಟನೆಗೂ ಮುನ್ನ ಬೆ.10.30 ಕ್ಕೆ ಚಾಮುಂಡಿ ಬೆಟ್ಟದ ಆವರಣದಲ್ಲಿ ನಡೆಯಲಿರುವ‌ ದಸರಾ‌ ಉದ್ಘಾಟನಾ‌ ಸಮಾರಂಭದಲ್ಲಿ
ಬೂಕರ್ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್ ಅವರ ಕುರಿತು ಬರೆದಿರುವ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಗೊಂಡಿರುವ ಲೇಖಕ ಶಿವಾನಂದ್ ಅವರ ಬದುಕು ಬರಹ ಎಂಬ 350 ಪುಟ ಹೊಂದಿರುವ ಪುಸ್ತಕವನ್ನು ಮುಖ್ಯಮಂತ್ರಿ‌ ಸಿದ್ದರಾಮಯ್ಯ ಬಿಡುಗಡೆ ಮಾಡಲಿದ್ದಾರೆ ಎಂದರು.
ಇನ್ನು ಲೇಖಕರು, ಪ್ರಕಾಶಕರಿಗೆ ಸಂಪರ್ಕ ಸೇತುವೆಯಾಗಿ ಪುಸ್ತಕ ಮೇಳ ಆಯೋಜನೆಗೊಂಡಿದ್ದು, ಒಟ್ಟು 90 ಮಳಿಗೆಗಳಲ್ಲಿ‌ಸುಮಾರು 50 ಸಾವಿರ ಪುಸ್ತಕಗಳು, ಓದುಗರನ್ನು ಸೆಳೆಯಲಿದ್ದು, ಪುಸ್ತಕ ಪ್ರೇಮಿಗಳ ಗಮನ ಸೆಳೆಯುವ ನಿಟ್ಟಿನಲ್ಲಿ ಮೈಸೂರು ನಗರದಾದ್ಯಂತ ಸಂಚರಿಸಲು ಸೆ.20 ರಂದು ಬೆಳಿಗ್ಗೆ 11 ಗಂಟೆಗೆ ಮಾನಸ ಗಂಗೋತ್ರಿಯಲ್ಲಿರುವ ಕುವೆಂಪು ಪ್ರತಿಮೆ ಮುಂಭಾಗದಿಂದ ಪುಸ್ತಕ ರಥವು ಸಂಚರಿಸಲಿದ್ದು, ಜಿಲ್ಲಾಧಿಕಾರಿ ಈ ರಥಕ್ಕೆ ಚಾಲನೆ ನೀಡಲಿದ್ದಾರೆಂದರು.  
ಸಾಹಿತಿಗಳೊಂದಿಗೆ ಸೆಲ್ಪಿ: ಸೆ. 23ರಂದು ಡಾ.ಎಲ್.ಎನ್.ಮುಕುಂದರಾಜ್, ವಸುಧೇಂದ್ರ, ಸೆ.24ರಂದು ಡಾ.ಸುಕನ್ಯಾ ಮಾರುತಿ, ಡಾ.ರಾಜಪ್ಪದಳವಾಯಿ, ಸೆ.25ರಂದು ನರಸಿಂಹಮೂರ್ತಿ, ಸೆ.26ರಂದು ಶಂಕರ್ ಅಶ್ವತ್, ಸೆ.28ರಂದು ಪ್ರೊ.ಎಂ.ಕೃಷ್ಣೇಗೌಡ, ಸೆ.29ರಂದು ಡಾ.ಅರವಿಂದ ಮಾಲಗತ್ತಿ ಹಾಗೂ ಸೆ.30ರಂದಿ ಡಾ.ಟಿ.ವಿ.ವೆಂಕಟಾಚಲಶಾಸ್ತ್ರೀ ಪ್ರತಿ ಮಳಿಗೆಗಳಿ ಭೇಟಿ ನೀಡಿ ಸಾಹಿತಿಗಳೊಂದಿಗೆ ಸೆಲ್ಫಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ರಾಷ್ಟ್ರಕವಿ ಕುವೆಂಪು ವೇದಿಕೆಯಲ್ಲಿ ವಿಚಾರ ಗೋಷ್ಠಿ ಹಾಗೂ ಸಾಂಸ್ಕೃತಿಕ‌ ಕಾರ್ಯಕ್ರಮವು ಪ್ರತಿ‌ದಿನ‌ ಸಂಜೆ 4.30 ಕ್ಕೆ  ನಡೆಯಲಿದೆ. ಸೆ.23ರಂದು ವಸುಧೇಂದ್ರ, ಪ್ರೀತಿ‌ನಾಗರಾಜ್, ಮಂಜುಳಾ ಕಿರುಗಾವಲು, ಡಾ.ಸಿದ್ದರಾಮ್ ಹೊನ್ನಲ್ ಅವರಿಂದ ಬಾನು ಮುಷ್ತಾಕ್ ಬದುಕು ಬರಹ ಕುರಿತ ಚರ್ಚೆ ನಡೆಯಲಿದ್ದು, ಸೆ.24ರಂದು ರಾಯಚೂರಿನ ಕೆ.ವಿ.ಪ್ರಭಾ ಮತ್ತಿ ತಂಡದವರಿಂದ ಭಾವಗೀತೆ ಗಾಯನ, ಸೆ.25ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಲಲಿತಕಲಾ ಅಕಾಡೆಮಿ, ಕರ್ನಾಟಕ ಸಂಗೀತ‌ನೃತ್ಯ ಅಕಾಡೆಮಿರವರಿಂದ ಕವಿಗೋಷ್ಠಿ ಮತ್ತು ಕುಂಚ ಕಾವ್ಯ ಗಾಯನ, ಸೆ.26ರಂದು ಮೈಸೂರಿನ ಜಿ.ಆರ್.ಶ್ರೀ ವತ್ಸ ಮತ್ತು ತಂಡದವರಿಂದ ಜನಪದ ಗೀತೆಗಳ ಗಾಯನ, ಸೆ.27ರಂದು ಯುವರಾಜ ಕಾಲೇಜು ವಿದ್ಯಾರ್ಥಿಗಳಿಂದ ನನ್ನ ಮೆಚ್ಚಿನ ಪುಸ್ತಕದ ಓದು, ಸೆ.28ರಂದು ಮೈಸೂರಿನ ವೃಕ್ಷ ಟ್ರಸ್ಟ್ ಅವರಿಂದ ರಂಗ ಗೀತೆಗಳ ಗಾಯನ, ಸೆ.29ರಂದು ಬೆಂಗಳೂರಿನ ತೌಲನಿಕ ಅಧ್ಯಯನ ಸಂತಕವಿ ಕನಕದಾಸ ಮತ್ತು ತತಗವ ಪದಕಾರರ ಅಧ್ಯಯನ‌ ಕೇಂದ್ರದವರಿಂದ ಬಸವಣ್ಣ ಮತ್ತು ಕನಕದಾಸರ ಕುರಿತ ವಿಚಾರ ಸಂಕಿರಣ, ಸೆ.30ರಂದು ಬೆಂಗಳೂರಿನ ಕರ್ನಾಟಕ ಯಕ್ಷಗಾನ ಅಕಾಡೆಮಿ ವತಿಯಿಂದ ಕೃಷ್ಣಮೂರ್ತಿ ಶಾಸ್ತ್ರಿ ಮತ್ತು ತಂಡದವರಿಂದ ಕಂಸವಧೆ ಯಕ್ಷಗಾನ ಪ್ರಸಂಗ ಕುರಿತು ಸಾಂಸ್ಕೃತಿಕ‌ ಕಾರ್ಯಕ್ರಮಗಳು ನೆರವೇರಲಿದೆ ಎಂದು ವಿವರಿಸಿದರು.
ಗೋಷ್ಠಿಯಲ್ಲಿ ಸಮನ್ವಯಾಧಿಕಾರಿ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ, ಮೈಸೂರು ವಿವಿ‌ಪ್ರಸಾರಾಂಗದ ನಿರ್ದೇಶಕರಾದ ಡಾ.ನಂಜಯ್ಯ ಹೊಂಗನೂರು, ಆಡಳಿತಾಧಿಕಾರಿ‌ ಕೆ.ಬಿ.ಕಿರಣ್ ಸಿಂಗ್ ಸೇರಿದಂತೆ ಸಮಿತಿ ಸದಸ್ಯರಾದ ರಾಜಶೇಖರ್ ಕದಂಬ, ಚಂದ್ರಶೇಖರ್, ಡಾ.ಮಹೇಶ್ ಚಿಕ್ಕಲೂರು, ಸುಚಿತ್ರಾ, ಮೈ.ನಾ.ಲೋಕೇಶ್, ಕೆ.ಎಸ್.ಶಿವರಾಂ, ರವಿನಂದನ್ ಹಾಗೂ ಪ್ರಮೋದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Share This Article
Leave a Comment