ಪಬ್ಲಿಕ್ ಅಲರ್ಟ್
ಮೈಸೂರು: ಮುಂದಿನ ಒಲಂಪಿಕ್ಸ್ ಪದಕ ವಿಜೇತರಿಗೆ ಕರ್ನಾಟಕ ಸರ್ಕಾರ 6 ಕೋಟಿ ರೂ. ನಗದು ಬಹುಮಾನ ನೀಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ರಾಜ್ಯ ದಸರಾ ಸಿಎಂ ಕಪ್ ಕ್ರೀಡಾಕೂಟವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು. ಈ ಕ್ರೀಡಾಕೂಟದಲ್ಲಿ ಒಂದು ವಿಭಾಗದಿಂದ 720 ಕ್ರೀಡಾಪಟುಗಳಂತೆ 5 ವಿಭಾಗಗಳಿಂದ ಒಟ್ಟು 3600 ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ಕ್ರೀಡಾಕೂಟದಲ್ಲಿ ಭಾಗವಹಿಸುವ ಎಲ್ಲಾ ಕ್ರೀಡಾಪಟುಗಳಿಗೆ ಶುಭಕೋರಿದ ಮುಖ್ಯಮಂತ್ರಿಗಳು, ಸೋಲುಗೆಲುವುಗಳಿಗಿಂತ, ಕ್ರೀಡಾಮನೋಭಾವ ಮುಖ್ಯ. ಇಂದು ಚಾಮುಂಡಿವಿಹಾರ ಕ್ರೀಡಾಂಗಣದ ಗ್ಯಾಲರಿ ಹಾಗೂ ಈಜುಕೊಳಗಳಿಗೆ ಅತ್ಯಾಧುನಿಕ ಟೆನ್ಸೈಲ್ ಮೆಂಬ್ರೇನ್ ಛಾವಣಿ ಅಳವಡಿಸುವ ಮತ್ತು ಫುಟ್ಬಾಲ್ ಅಂಕಣ ನಿರ್ಮಿಸುವ ಕಾಮಗಾರಿಯನ್ನು 20.78 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ ಎಂದರು.


ಸಮಾರಂಭದಲ್ಲಿ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಪುರಸ್ಕೃತ ಅಂತರರಾಷ್ಟ್ರೀಯ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಭಾಗವಹಿಸಿರುವುದು ವಿಶೇಷ. ಕುಸ್ತಿ ಕೇವಲ ಪುರುಷರ ಕ್ರೀಡೆ ಎಂದು ಪರಿಗಣಿಸಲಾಗಿದ್ದ ಕಾಲದಲ್ಲಿ ಸಾಮಾಜಿಕ ಅಡೆತಡೆಗಳು ಮತ್ತು ಹಿನ್ನಡೆಗಳನ್ನು ಅನುಭವಿಸಿದರೂ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಾಗಿದ್ದಾರೆ. ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿ, ಭಾರತದ ಕೀರ್ತಿ ಮೆರೆದ ವಿನೇಶ್ ಅವರು ಹರಿಯಾಣ ರಾಜ್ಯದಲ್ಲಿ ಶಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
