ಪಬ್ಲಿಕ್ ಅಲರ್ಟ್
ಮೈಸೂರು: ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣವನ್ನು ಖಂಡಿಸಿ ಎಐಎಂಎಸ್ಎ ಮತ್ತು ಎಐಡಿಎಸ್ಒ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ಹಳೇ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಎಐಎಂಎಸ್ಎ ರಾಜ್ಯ ಉಪಾಧ್ಯಕ್ಷೆ ಸೀಮಾ ಜಿ.ಎಸ್. ಮಾತನಾಡಿ, ಹತ್ತು ವರ್ಷದ ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಮಾಡಿ ಭೀಕರವಾಗಿ ಹತ್ಯೆಗೈಯ್ಯಲಾಗಿರುವ ಹೃದಯವಿದ್ರಾವಕ ಘಟನೆಯಾಗಿದೆ. ಇದರಿಂದಾಗಿ ಸಾಂಸ್ಕೃತಿಕ ನಗರಿಯ ಜನತೆಯಲ್ಲಿ ಆಘಾತ ಉಂಟಾಗಿದೆ. ದಸರದಲ್ಲಿ ತಮ್ಮ ಜೀವನೋಪಾಯಕ್ಕಾಗಿ ದುಡಿಯಲು ಬಂದ ವಲಸೆ ಕಾರ್ಮಿಕರು ತಮ್ಮ ಮಗಳ ದುರಂತ ಅಂತ್ಯವನ್ನು ಕಾಣುವಂತಾಗಿದೆ. ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ಸರ್ಕಾರಗಳು ತಕ್ಷಣ ಎಲ್ಲಾ ರೀತಿಯ ಕ್ರಮ ವಹಿಸಬೇಕೆಂದು ಆಗ್ರಹಿಸಿದರು.
ಪ್ರಕರಣವನ್ನು ಸಮಗ್ರವಾಗಿ ತನಿಖೆ ನಡೆಸಿ ಅಪರಾಧಿಗೆ ಉಗ್ರ ಶಿಕ್ಷೆಯನ್ನು ವಿಧಿಸಬೇಕು. ಮೃತ ಬಾಲಕಿಯ ಪೋಷಕರಿಗೆ ಸೂಕ್ತ ಪರಿಹಾರವನ್ನು ಒದಗಿಸಬೇಕು. ಈ ಘಟನೆಯ ನ್ಯಾಯ ನಿರ್ಣಯದಲ್ಲಿ ಯಾವುದೇ ರೀತಿಯ ವಿಳಂಬವಾಗಬಾರದು ಎಂದು ಒತ್ತಾಯಿಸಿದರು. ಎಐಡಿಎಸ್ಒ ಜಿಲ್ಲಾ ಕಾರ್ಯದರ್ಶಿ ನಿತಿನ್ ಮಾತನಾಡಿದರು. ಪ್ರತಿಭಟನೆಯಲ್ಲಿ ಆಸಿಯಾ ಬೇಗಂ, ಉಗ್ರ ನರಸಿಂಹ ಗೌಡ, ಬಾಬು ರಾಜನ್, ರತಿ ರಾವ್, ಪಿ.ಮರಂಕಯ್ಯ ಮುಂತಾದವರಿದ್ದರು.
