ದಸರೆಗೆ ಮೆರುಗು ತಂದ ರೈತದಸರಾ

Pratheek
2 Min Read

ಪಬ್ಲಿಕ್ ಅಲರ್ಟ್


ಮೈಸೂರು: ನಗರದಲ್ಲಿ ರಸ್ತೆಗಿಳಿದ ಎತ್ತು, ಹಳ್ಳಿಕಾರ್‌ ಹೋರಿ, ಬಂಡೂರು ಕುರಿಗಳು ಸೇರಿ ಮಿನಿ ಜಂಬೂ ಸವಾರಿಯ ಮಾದರಿ ನಗರದ ದಸರೆಗೆ ಮೂರು ದಿನಗಳ ರೈತದಸರಾ ಮೆರುಗು ತಂದಿತು.
ಅರಮನೆ ಕೋಟೆ ಆಂಜನೇಯ ಮೈದಾನದಿಂದ ದೇವರಾಜ ಅರಸು ರಸ್ತೆಯ ಮೂಲಕ ಜೆ. ಕೆ ಗ್ರೌಂಡ್ ವರೆಗೂ ಸಾಗಿದ ರೈತ ಮೆರವಣಿಗೆಯಲ್ಲಿ ಸಾವಿರಾರು ಜನರು ಭಾಗವಹಿಸಿದರು. ಈ ಬಾರಿ ವಿಶೇಷವಾಗಿ ನಂದಿ ಧ್ವಜ, ನಗಾರಿ ಹಾಗೂ ತಮಟೆ, ವೀರಗಾಸೆ, ವೀರಗಾಸೆ ವೀರಭದ್ರ ನೃತ್ಯ, ಖಡ್ಗ ಪ್ರದರ್ಶನ, ಕಂಸಾಳೆ ನೃತ್ಯ, ಚಿಲಿಪಿಲಿ ಗೊಂಬೆ, ನಾದಸ್ವರ ಪೂಜೆ ಕುಣಿತ ಜೊತೆಗೆ ವಿವಿಧ ತಳಿಯ ಎತ್ತುಗಳು, ಕರುಗಳು,  ಆಂಧ್ರ ತಳಿಯಾದ ಪುಂಗನೂರು  ಎತ್ತು,  ಹೋರಿ,ಹಳ್ಳಿಕಾರ್ ತಳಿ , ಬಂಡೂರು ಕುರಿಗಳು, ಎತ್ತಿನಗಾಡಿ ಎತ್ತುಗಳನ್ನು ಕರೆಸಲಾಗಿತ್ತು, ಹೊಸ ಹೊಸ ಕೃಷಿ ತಂತ್ರಜ್ಞಾನಗಳಾದ ಬೆಳೆ ಸಿಂಪಡಿಸುವ ಡ್ರೋನ್ ತಂತ್ರಜ್ಞಾನ ಯಂತ್ರ, ಭತ್ತ ನಾಟಿ ಯಂತ್ರ, ಇಪ್ಕೋ ನ್ಯಾನೋ ಯೂರಿಯಾ ಲಿಕ್ವಿಡ್,    ಸ್ವರಾಜ್ ಯಂತ್ರ, ಕಿಸಾನ್ ಬಂಡಿ, ಪವರ್ ಇಂಟರ್ ಕಲ್ಟಿವೇಟರ್ ಯಂತ್ರ, ,ಕಳೆ ತೆಗೆಯುವ ಯಂತ್ರ, ಹೈಟೆಕ್  ಹಾರ್ವೆಸ್ಟರ್ ಹಬ್  ಬಹು ಬೆಳೆಯ ಒಕ್ಕಣೆ ಯಂತ್ರ, ಭತ್ತದ ಬೇಲರ್, ಕಬ್ಬು ನಾಟಿ ಯಂತ್ರ, ಕಬ್ಬು ಕಟಾವು ಯಂತ್ರ ತೋಟಗಾರಿಕೆ ಇಲಾಖೆಯ ಟ್ಯಾಬ್ಲೋಗಳಂತಹ ಹೊಸ ಹೊಸ ತಂತ್ರಜ್ಞಾನಗಳನ್ನು ಪ್ರದರ್ಶನ ಮೆರವಣಿಗೆಯಲ್ಲಿ ಗಮನ ಸೆಳೆದವು.

ಮೆರವಣಿಗೆಗೆ ಚಾಲನೆ ನೀಡಿದ ಕೃಷಿ ಸಚಿವ ಎನ್‌.ಚೆಲುವರಾಯಸ್ವಾಮಿ ಮಾತನಾಡಿ, ಪರಿಸರ, ಸಂಸ್ಕಾರದ ವಿಚಾರದಲ್ಲಿ ಹಿಂದಿನ ನಡೆಗಳನ್ನು ಮುಂದುವರೆಸುವಲ್ಲಿ ನಾಡಿನ ರೈತರು ಎಂದೆಂದಿಗೂ ಮುಂದಿದ್ದಾರೆ. ರೈತರ ಬದುಕಿಗೆ ನಾವೆಲ್ಲರೂ ಒಗ್ಗಟ್ಟಾಗಿ ನಿಲ್ಲಬೇಕು. ಮೈಸೂರು ದಸರಾ ರಾಜ್ಯ ಮತ್ತು ರಾಷ್ಟ್ರ ಮಟ್ಟ ಅಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವುದು ನಮ್ಮ ದೇಶದ ಹೆಮ್ಮೆಯ ವಿಷಯವಾಗಿದೆ ಎಂದರು.
ಪಶುಸಂಗೋಪನಾ ಹಾಗೂ ರೇಷ್ಮೆ ಖಾತೆ ಸಚಿವ ಕೆ.ವೆಂಕಟೇಶ್ ಮಾತನಾಡಿ ರೈತ ದಸರಾದಲ್ಲಿ ಹೊಸ ಹೊಸ ತಂತ್ರಜ್ಞಾನದ ಪರಿಚಯ ಮಾಡುವುದು, ಅವುಗಳ ಉಪಯೋಗದ ಬಗ್ಗೆ ತಿಳಿಸುವಂತಹ ಕೆಲಸ ಮಾಡುತ್ತಿರುವುದು ಬಹಳ ಸಂತೋಷದ ವಿಷಯ. ಕೃಷಿ ದಿನ ಕಳೆದಂತೆ ದುಬಾರಿಯಾಗುತ್ತಿದ್ದು, ಈ ವ್ಯವಸಾಯದ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವುದರ ಮೂಲಕ ಉಪಯೋಗವನ್ನು ರೈತರು ಪಡೆದುಕೊಳ್ಳಬಹುದಾಗಿದ್ದು, ರೈತರಿಗೆ ಕೃಷಿಯಲ್ಲಿ ಆಧುನಿಕ ಬದ್ಧತೆಯ ಬಗ್ಗೆ ತಿಳುವಳಿಕೆ ಮೂಡಿಸುವುದು ಬಹಳ ಮುಖ್ಯ ಎಂದರು.
ಈ ಸಂಧರ್ಭದಲ್ಲಿ ಶಾಸಕ ಕೆ. ಹರೀಶ್ ಗೌಡ, ಚಾಮುಂಡೇಶ್ವರಿ ವಿದ್ಯುತ್ ನಿಗಮದ ಅಧ್ಯಕ್ಷ ರಮೇಶ್ ಬಂಡಿ ಸಿದ್ದೇಗೌಡ, ರೈತ ದಸರಾದ ಕಮಿಟಿಯ ಅಧ್ಯಕ್ಷ ಯೋಗೇಶ್ ಸೇರಿ ಮತ್ತಿತರರು ಉಪಸ್ಥಿತರಿದ್ದರು.

Share This Article
Leave a Comment