ಪಬ್ಲಿಕ್ ಅಲರ್ಟ್
ಮೈಸೂರು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಹುದ್ದೆಗೇರಲು ಸಿಎಂ ವಿರುದ್ಧ ಮಾಟಮಂತ್ರ ಪ್ರಯೋಗ ನಡೆಸಿದ್ದಾರೆಂದು ಸುಳ್ಳು ಮಾಹಿತಿ ಹರಡಿ ಸಮಾಜದಲ್ಲಿ ಅಶಾಂತಿ, ದ್ವೇಷ ಸೃಷ್ಠಿಸಲು ಹೊರಟಿರುವ ಶಾಸಕ ಮುನಿರತ್ನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ನಗರದಲ್ಲಿ ನಗರ ಕಾಂಗ್ರೆಸ್ ಸಮಿತಿಯಿಂದ ದೂರು ನೀಡಲಾಯಿತು.
ನಗರ ಕಾಂಗ್ರೆಸ್ ವಕ್ತಾರ ಎಂ.ರಾಜೇಶ್ ನೇತೃತ್ವದಲ್ಲಿ ನಗರ ಪೊಲೀಸ್ ಉಪ ಆಯುಕ್ತೆ ಬಿಂದುಮಣಿ ಅವರಿಗೆ ದೂರು ನೀಡಿ ಮಾತನಾಡಿದ ಅವರು, ಅ.12ರಂದು ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಸುದ್ದಿ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೇರಳದಲ್ಲಿ ಮಾಟಮಂತ್ರ ಮಾಡಿ ಒಂದು ಕೋಣ ಮತ್ತು ಕಾಡುಹಂದಿಯನ್ನು ಬಲಿ ಕೊಟ್ಟಿದ್ದಾರೆ. ಇದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಗಂಡಾಂತರ ಕಾದಿದೆ ಎಂಬ ಅಸತ್ಯ ಮತ್ತು ಅವಹೇಳನಕಾರಿ ಹೇಳಿಕೆಯನ್ನು ನೀಡಿದ್ದಾರೆ.
ಇದರಿಂದಾಗಿ ರಾಜ್ಯದ ಜನಸಾಮಾನ್ಯರ ನಡುವೆ ತಪ್ಪು ಗ್ರಹಿಕೆ ಹಾಗೂ ಮೂಢನಂಬಿಕೆಗಳನ್ನು ಹುಟ್ಟಿಸುವಂತಹುದಾಗಿದೆ. ಸಮುದಾಯಗಳ ನಡುವೆ ದ್ವೇಷ ಮತ್ತು ಭಿನ್ನಾಭಿಪ್ರಾಯಗಳನ್ನು ಉಂಟುಮಾಡುವ ಅಪಾಯವನ್ನು ಉಂಟುಮಾಡುತ್ತದೆ. ರಾಜ್ಯದ ಶಾಂತಿ, ಸೌಹಾರ್ದತೆ ಮತ್ತು ಸಾಮಾಜಿಕ ಸಮನ್ವಯತೆಗೆ ಧಕ್ಕೆ ತರುವಂತದ್ದಾಗಿದೆ ಒಬ್ಬ ಶಾಸಕರಾಗಿ ತಮ್ಮ ಸ್ಥಾನಕ್ಕೆ ತಕ್ಕ ಜವಾಬ್ದಾರಿಯುತ ನಡವಳಿಕೆಯನ್ನು ತೋರಬೇಕಾದವರು ಇಂತಹ ನೈತಿಕತೆಹೀನ ಮತ್ತು ಜನರ ಭಾವನೆಗಳಿಗೆ ಧಕ್ಕೆ ತರುವ ಹೇಳಿಕೆ ನೀಡಿರುವುದು ಅತೀ ಗಂಭೀರ ವಿಷಯವಾಗಿದೆ ಎಂದರು.
ಈ ಹಿನ್ನೆಲೆಯಲ್ಲಿ ಮುನಿರತ್ನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಅವರು ಮಾಡಿದ ಹೇಳಿಕೆಗೆ ಸಂಬಂಧಿಸಿದಂತೆ ಯಾವುದೇ ಪುರಾವೆ ಇದ್ದರೆ, ಅದನ್ನು ಮಾಧ್ಯಮದ ಮುಂದೆ ಪ್ರಕಟಿಸಬೇಕು. ಪುರಾವೆ ನೀಡದೆ ತಪ್ಪು ಮಾಹಿತಿ ಹರಡಿರುವುದರಿಂದ ಭಾರತೀಯ ನ್ಯಾಯ ಸಂಹಿತೆಗಳ ಸೆಕ್ಷನ್ ಅಡಿ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು. ಲೋಕೇಶ್ ಕುಮಾರ್ ಮಾದಾಪುರ, ಕಾಳೇಗೌಡ ಕೆರ್ಗಳ್ಳಿ, ರದಿ ಉಲ್ಲಾಖಾನ್, ಸೈಯದ್ ಫಾರೂಕ್, ರಂಗಸ್ವಾಮಿ, ನಾಗೇಶ್, ಕೃಷ್ಣಪ್ಪ, ಮೋಹನ್ ಇನ್ನಿತರರು ಉಪಸ್ಥಿತರಿದ್ದರು.
