ಪಬ್ಲಿಕ್ ಅಲರ್ಟ್
ಮೈಸೂರು: ಅಭಿರುಚಿ ಪ್ರಕಾಶನ, ಪುಸ್ತಕ ಪ್ರಕಾಶನ, ಪ್ರಗತಿಪರ ಸಂಘಟನೆಗಳ ಒಕ್ಕೂಟ, ಮಾನವ ಮಂಟಪ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ದಲಿತ ಸಂಘರ್ಷ ಸಮಿತಿ, ನಿರಂತರ ಫೌಂಡೇಷನ್ ಸಹಯೋಗದಲ್ಲಿ ಕಿರು ರಂಗಮಂದಿರದಲ್ಲಿ ಕರ್ವಾಲೊ ೫೦, ತೇಜಸ್ವಿ ಮತ್ತು ಪರಿಸರ ಕಾರ್ಯಕ್ರಮದಲ್ಲಿ ಕರ್ವಾಲೋ ಸುತ್ತಮುತ್ತ: ಸಂವಾದ ನಡೆಯಿತು.
ವನ್ಯಜೀವಿ ಛಾಯಾಗ್ರಾಹಕರಾದ ಕೃಪಾಕರ-ಸೇನಾನಿ ಅವರ ಪ್ರಶ್ನೆಗಳಿಗೆ ಉತ್ತರಿಸಿದ ತೇಜಸ್ವಿ ಒಡನಾಡಿ ಬಿ.ಎಂ.ಶ್ರೀರಾಮ್ ತೇಜಸ್ವಿ ಅವರ ಒಡನಾಟ ಸ್ಮರಿಸಿ ಪೂರ್ಣಚಂದ್ರ ತೇಜಸ್ವಿಗೆ ಕವಿ ಕುವೆಂಪು ಪುತ್ರನಾಗದೇ ಬೆಳೆಯುವ ಚಾಲೆಂಜ್ ಇತ್ತು ಎಂದರು. ಸಂವಾದದಲ್ಲಿ ಪಾಲ್ಗೊಂಡಿದ್ದವರು ನಗೆಗಡಲಲ್ಲಿ ತೇಲಿದರು. ಕರ್ವಾಲೋ ಕಾದಂಬರಿ ಪ್ರಕಟಗೊಂಡಾಗ ಸಾಹಿತ್ಯ ವಲಯ ಯಾವ ರೀತಿ ಸ್ವೀಕರಿಸಿತ್ತು ಎಂಬ ಪ್ರಶ್ನೆಗೆ ಉತ್ತರಿಸಿದ ಶ್ರೀರಾಮ್, ಕನ್ನಡ ಸಾಹಿತ್ಯ ವಲಯ ಯಾವಾಗಲೂ ಮಂದ. ಆಗ ಕೆಲವರು ವಿಜ್ಞಾನ ಲೇಖಕ ಎಂದು ಗೇಲಿ ಮಾಡಿದರು. ಸ್ನೇಹಿತರು ಸಿಕ್ಕಾಪಟ್ಟೆ ಹೊಗಳಿದರು. ಒಳ್ಳೆ ವಿಮರ್ಶೆ ಬರೆದದ್ದು ಲಂಕೇಶ್ ಎಂದು ಸ್ಮರಿಸಿದರು.
ಕನ್ನಡ ಎಂಎ ವಿದ್ಯಾರ್ಥಿಯಾದ ತೇಜಸ್ವಿ ಅವರಿಗೆ ವಿಜ್ಞಾನದ ಮೇಲೆ ಆಸಕ್ತಿ ಯಾವ ರೀತಿ ಬೆಳೆಯಿತು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಮೈಸೂರು ವಿವಿ ಗ್ರಂಥಾಲಯಕ್ಕೆ ಬರುತ್ತಿದ್ದ ಸಾಹಿತ್ಯ ಮತ್ತು ವಿಜ್ಞಾನ ಪತ್ರಿಕೆಗಳ ಅಗಾಧವಾದ ಅಧ್ಯಯನ, ನ್ಯಾಷನಲ್ ಜಿಯಾಗ್ರಫಿ ಪ್ರಭಾವ ಬೀರಿದೆ. ತೇಜಸ್ವಿ ಸೃಷ್ಟಿಸಿದ ಪಾತ್ರಗಳು ಬಂದು ಮಾತಾಡಿದ ಪ್ರಸಂಗವನ್ನು ಶ್ರೀರಾಮ್ ಬಿರಿಯಾನಿ ಮರಿಯಪ್ಪ ಅವರನ್ನು ನೆನಪಿಸಿಕೊಂಡಾಗ ಸಭಾಂಗಣ ನಗೆಗಡಲಲ್ಲಿ ತೇಲಿತು ಎಂದು ತಿಳಿಸಿದರು.
ಚಿಂತಕ ರಾಜೇಂದ್ರ ಚೆನ್ನಿ ಸಮಾರಂಧ ಉದ್ಘಾಟಿಸಿ ಮಾತನಾಡಿ, ವಿಜ್ಞಾನ ಮನುಷ್ಯನ ಕೈಗೆ ಆಯುಧವಾಗಬಾರದು. ವಿಜ್ಞಾನ ಅಣುಬಾಂಬ್ ತಯಾರಿಸುವ ಯಂತ್ರವಾದರೆ ಅಪಾಯ. ೩ನೇ ಮಹಾಯುದ್ಧಕ್ಕೆ ವಿಜ್ಞಾನವನ್ನು ದುರುಪಯೋಗ ಮಾಡಿಕೊಳ್ಳುತ್ತಿರುವುದನ್ನು ಕಾಣುತ್ತಿದ್ದೇವೆ. ಸೃಷ್ಟಿಯನ್ನು ವಿನಾಶ ಮಾಡಲು ಸಜ್ಜಾಗಿದ್ದಾರೆ ಎಂದು ವಿಷಾದಿಸಿದರು.
ಜೀವ ವಿಕಾಸಕ್ಕೆ ಕೊನೆಯೆಂದು ಎಂದು ಕರ್ವಾಲೋ ಕಾದಂಬರಿಯಲ್ಲಿ ಬರುವ ಸಾಲು ಪ್ರತಿ ಕ್ಷಣ ಕುತೂಹಲದಿಂದ ಬದುಕುಬೇಕು ಎನ್ನುವುದನ್ನು ಹೇಳುತ್ತವೆ. ತೇಜಸ್ವಿ ಅವರು ಅಂದು ಹೇಳಿದ ಮಾತುಗಳು ಇಂದು ವಿಶ್ವವಿದ್ಯಾನಿಲಯದಲ್ಲಿ ಚರ್ಚೆ ಆಗುತ್ತಿದೆ ಎಂದರು.
ಸಾಹಿತಿ ಜಿ.ಪಿ.ಬಸವರಾಜು ಪ್ರಾಸ್ತಾವಿಕವಾಗಿ ಮಾತನಾಡಿ, ೧೯೮೦ರಲ್ಲಿ ಪುಸ್ತಕವಾಗಿ ಪ್ರಕಟಗೊಂಡ ಕರ್ವಾಲೋ ಕಾದಂಬರಿ ೯೫ ಮುದ್ರಣಗಳನ್ನು ಕಂಡಿದೆ. ಎಲ್ಲ ತಲೆಮಾರಿನವರನ್ನು ಪ್ರಭಾವಿಸಿದೆ. ನವ್ಯಸಾಹಿತ್ಯ ಕಾಲಘಟ್ಟದಲ್ಲಿ ಸಾಹಿತ್ಯ ಕೃಷಿ ಆರಂಭಿಸಿ, ಅದರ ಇಕ್ಕಟ್ಟಿನ ದಾರಿ ಕಂಡುಕೊಂಡು, ಅದರಿಂದ ಬಿಡಿಸಿಕೊಂಡವರು ತೇಜಸ್ವಿ ಎಂದರು.
ಕರ್ವಾಲೋ ಕಾದಂಬರಿಯಲ್ಲಿ ಸಂವಿಧಾನದ ಮೌಲ್ಯ ಇದೆ. ಜ್ಞಾನ ಅಕಾಡೆಮಿಕ್ಗೆ ಸೀಮಿತವಾಗಿಲ್ಲ ಎಂಬುದನ್ನು ಪಾತ್ರಗಳ ಮೂಲಕ ಅದ್ಭುತವಾಗಿ ಸೃಷ್ಟಿಸಲಾಗಿದೆ. ವೈಜ್ಞಾನಿಕ ಮತ್ತು ವೈಚಾರಿಕವಾದ ಈ ಕೃತಿ ೫೦ ವರ್ಷ ತುಂಬಿದಾಗ ಕನ್ನಡಿಗರು, ಸರ್ಕಾರ ಸಂಭ್ರಮಾಚರಣೆ ಮಾಡದಿರುವುದು ದುರ್ದೈವದ ಸಂಗತಿ ಎಂದು ಹೇಳಿದರು. ನಾ ಕಂಡಂತೆ ತೇಜಸ್ವಿ ಕುರಿತು ಕುಪ್ಪಳ್ಳಿ ಪ್ರತಿಷ್ಠಾನದ ಸಮ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್, ಕೃಷಿ, ಹೋರಾಟ, ಛಾಯಾಗ್ರಹಣ ಮತ್ತು ಪರಿಸರ ಕುರಿತು ಎಂ.ವಿ.ಕೃಷ್ಣ, ತೇಜಸ್ವಿ ಅವರ ಒಡನಾಟದಲ್ಲಿ ಕುರಿತು ಪುಸ್ತಕ ಪ್ರಕಾಶನದ ರಾಘವೇಂದ್ರ ಮಾತನಾಡಿದರು. ಅಭಿರುಚಿ ಗಣೇಶ್ ಸ್ವಾಗತಿಸಿದರು.
