ಪಬ್ಲಿಕ್ ಅಲರ್ಟ್
ಮೈಸೂರು: ಪೋಷಕರು ಆಂಗ್ಲ ಭಾಷಾ ವ್ಯಾಮೋಹದಲ್ಲಿ ಮುಳುಗಿರುವುದರಿಂದಲೋ ಅಥವಾ ತಮ್ಮ ಮಕ್ಕಳನ್ನು ವೈದ್ಯ, ಇಂಜಿನಿಯರ್ ವೃತ್ತಿಯಲ್ಲಿ ನೋಡುವ ಹೆಬ್ಬಯಕೆಯಿಂದಾಗಿಯೋ ಸಾಂಪ್ರದಾಯಿಕ ಕಲೆಗಳ ಕಲಿಕೆಯ ಮೂಲಕ ಅದನ್ನೇ ವೃತ್ತಿ ಮಾಡಿಕೊಳ್ಳಲು ಅನೇಕ ಸವಾಲುಗಳನ್ನು ಎದುರಿಸಬೇಕಾಗಿದೆ ಎಂದು ಶಾಸಕರಾದ ತನ್ವೀರ್ ಸೇಠ್ ಬೇಸರ ವ್ಯಕ್ತಪಡಿಸಿದರು.
ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಲಲಿತ ಕಲೆ ಮತ್ತು ಕರಕುಶಲ ಕಲೆ ಉಪ ಸಮಿತಿ ವತಿಯಿಂದ ಸಿದ್ದಾರ್ಥನಗರದ ಚಾಮರಾಜೇಂದ್ರ ಸರ್ಕಾರಿ ದೃಶ್ಯ ಕಲಾ ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿದ್ದ ಕಲಾ ಜಾತ್ರೆ ಉದ್ಘಾಟನೆ, ಟೆರಾಕೋಟಾ ಭಿತ್ತಿ ಶಿಲ್ಪಕಲೆಯ ಅನಾವರಣ ಹಾಗೂ ರಾಷ್ಟ್ರೀಯ ಕರಕುಶಲ ವಸ್ತು, ಲಲಿತ ಕಲೆ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮಲ್ಲಿರುವ ಅನೇಕ ಕಲೆ, ಸಂಸ್ಕೃತಿಗಳು ನಾಶಗೊಳ್ಳುತ್ತಿದ್ದು, ಈ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗಿದೆ ಎಂದರು.




ಪ್ರಸ್ತುತ ಪ್ರತಿಯೊಂದು ವಸ್ತುಗಳ ಉತ್ಪನ್ನದಲ್ಲಿ ಯಂತ್ರೋಪಕರಣಗಳ ಬಳಕೆ ಅತಿಯಾಗಿರುವ ಬೆನ್ನಲ್ಲೇ ಕಲಾಕೃತಿಗಳ ನಿರ್ಮಾಣಕ್ಕೆ ಮನುಷ್ಯನ ಕೈಚಳಕದ ಮುಂದೆ ಬೇರಾವ ಯಂತ್ರೋಪಕರಣಗಳು ಸಾಟಿಯಿಲ್ಲವಾಗಿದೆ. ಒಂದು ಬಂಡೆಯಿಂದ ಸುಂದರವಾದ ರೂಪ ತಯಾರಿಕೆಯಾಗಲೀ, ಮಣ್ಣಿನ ಕಲಾಕೃತಿಯಾಗಲೀ ಅಷ್ಟೇ ಅಲ್ಲದೇ ಶಿಲ್ಪಕಲಾ ಕುಸುರಿಗಳನ್ನು ಸಿದ್ಧಪಡಿಸುವುದಾಗಲೀ ಸುಲಭದ ಮಾತಾಗಿರುವುದಿಲ್ಲ. ಆದರೆ ಇಂದಿನ ಮಕ್ಕಳು ಆಟೋಟ, ವ್ಯಾಯಾಮದಂತಹ ದೈಹಿಕ ಚಟುವಟಿಕೆಗಳಿಂದ ವಂಚಿತರಾಗಿದ್ದು, ಮೊಬೈಲ್ ನಲ್ಲಿ ಮುಳುಗಿದ್ದಾರೆ. ಇನ್ನು ಶಾಲಾ ಕಾಲೇಜುಗಳು ಸಹ ಕೇವಲ ಪಾಠಕ್ಕೆ ಸೀಮಿತಗೊಂಡಿದ್ದು, ಕಲೆ ಮತ್ತು ಸಂಸ್ಕೃತಿ ಮೂಲಕ ಕಲಿಸುವಂತಾಗಬೇಕಿದೆ. ಆ ಮೂಲಕ ನಮ್ಮ ಕಲೆ ಸಂಸ್ಕೃತಿಯನ್ನು ಬೆಳೆಸುವಂತಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.
ವಿಜೇತರಾದ 39 ಕಲಾವಿದರನ್ನು ಈ ವೇಳೆ ಸನ್ಮಾನಿಸಿ ಗೌರವಿಸಲಾಯಿತು. ದೃಶ್ಯವಿದು ನಟಿಸಲು, ನಾದವಿದು ಆಲಿಸಲು, ಕಾವ್ಯವಿದು ವಾಚಿಸಲು, ನಾಟ್ಯವಿದು ನರ್ತಿಸಲು, ನಟನೆಯಿದು ನಟಿಸಲು, ಚಂದನ ವನದ ನಂದನವನಕ್ಕಿದೋ ಸ್ವಾಗತ ಎಂಬ ಶೀರ್ಷಿಕೆಯಲ್ಲಿ ಗಣ್ಯರನ್ನು ಸ್ವಾಗತಿಸಲಾಯಿತು.
ಪ್ರಸ್ತುತ ಸಮಾಜದಲ್ಲಿ 5ಜಿ ಜಗತ್ತಾಗಿದ್ದು, ಹುಟ್ಟಿದ ಮಕ್ಕಳಿಂದ ಹಿಡಿದು ಹಿರಿಯವರೆಗೂ ಮೊಬೈಲ್ ನ ಸಾಮಾಜಿಕ ಜಾಲತಾಣಗಳಿಗೆ ಮೊರೆ ಹೋಗಿದ್ದಾರೆ. ಮುಂದೆ ಹೊಟ್ಟೆಯಲ್ಲಿರುವ ಮಗು ಸಹ 6ಜಿ ಕಾಲದ್ದಾಗಿದ್ದು, ಮೊಬೈಲ್ ಹಿಡಿದೇ ಹೊರಬರಲಿದೆ ಎಂಬಂತಹ ಕಲಾಕೃತಿ, ಸಾಮಾಜಿಕ ಜಾಲತಾಣವೆಂಬ ಬಲೆಯಲ್ಲಿ ಸಿಲುಕಿದ ಮನುಷ್ಯರು ಎಂಬ ಕಲ್ಪನೆಯಲ್ಲಿ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ಇನ್ಸ್ ಸ್ಟಾ ಗ್ರಾಂ, ಯೂ ಟ್ಯೂಬ್, ಎಕ್ಸ್ ಖಾತೆ ಈ ರೀತಿಯ ಜಾಲತಾಣವೆಂಬ ಬಲೆಯಲ್ಲಿ ಸಿಲುಕುತ್ತಿರುವ ಮನುಷ್ಯನ ಕಲಾಕೃತಿಗಳನ್ನು ಪ್ರದರ್ಶನದಲ್ಲಿರಿಸಿದ್ದು, ಪ್ರಸ್ತುತ ಮಾನವನ ವರ್ತನೆಯ ನೈಜತೆಯು ಎಲ್ಲರನ್ನು ಆಕರ್ಷಿಸಿತು.
ಅಂತಯೇ ಕರ್ನಾಟಕ ಕಲಾ ರತ್ನ ಪ್ರಶಸ್ತಿ ಪಡೆದಿರುವ ರೂಪ ವಸುಂಧರ ಅವರ ಒಣ ಎಲೆ, ಹೂವಿನಿಂದ ರಚಿಸಿರುವ ಚಿತ್ರಕಲೆ, ಮನುಷ್ಯ ತನ್ನ ಮನಸ್ಸನ್ನು ನಿಯಂತ್ರಣದಲ್ಲಿರಿಸಿಕೊಳ್ಳುವ ಬಗೆಯ ಕುರಿತು ಕಲಾವಿದ ಎ.ಆರ್.ಮಂಜುನಾಥ್ ಅವರು ಚಿತ್ರಿಸಿರುವ ಕಲಾಕೃತಿಗಳು, ಪ್ರಸಿದ್ಧ ಸಾಹಿತಿಗಳು, ಮೈಸೂರು ಅರಮನೆ, ಜಯಮಾರ್ತಾಂಡ ಗೇಟ್, ನಂದಿ, ಚಾಮುಂಡಿಬೆಟ್ಟದ ಗೋಪುರ, ದೊಡ್ಡ ಗಡಿಯಾರ ಹಾಗೂ ಚಿತ್ರನಟರ ಸ್ಕೆಚ್ ಆರ್ಟ್ ಸೇರಿದಂತೆ ಹಲವು ವಿದ್ಯಾರ್ಥಿಗಳಿಂದ ಚಿತ್ರಿಸಿರುವ ಮಂಡಲ ಕಲೆ, ಬಾಲ್ಯಾವಸ್ಥೆಯಲ್ಲಿ ಆಟೋಟವಾಡುತ್ತಿರುವ ಮಕ್ಕಳ ಕ್ಯಾನ್ವಾಸ್ ಚಿತ್ರ, ಪೋಟ್ರೇಟ್ ಚಿತ್ರಗಳು ಮತ್ತು ಕಾರ್ಯಕ್ರಮದ ಆಕರ್ಷಣೆಯಲ್ಲೊಂದಾದ ಟೆರಾಕೋಟಾ ಭಿತ್ತಿ ಶಿಲ್ಪಕಲೆಯಲ್ಲಿ ಮಹಿಳೆ ವಿವಿಧ ವಿನ್ಯಾಸ, ಮೈಸೂರು ಶೈಲಿಯ ಸಾಂಪ್ರದಾಯಿಕ ಚಿತ್ರಕಲೆ ಸೇರಿದಂತೆ ಇನ್ನಿತರೆ ಕಲಾಕೃತಿಗಳು ವೀಕ್ಷಕರನ್ನು ತನ್ನತ್ತ ಸೆರೆ ಹಿಡಿದಿಟ್ಟಿತು.
ಕಾರ್ಯಕ್ರಮದಲ್ಲಿ ಇಂದಿರಾಗಾಂಧಿ ರಾಷ್ಟ್ರೀಯ ಕಲಾಕೇಂದ್ರದ ಪ್ರಾದೇಶಿಕ ನಿರ್ದೇಶಕ ಪ್ರೊ. ಡಿ.ಮಹೇಂದ್ರ, ಮುಂಬೈನ ಅಂತರಾಷ್ಟ್ರೀಯ ಖ್ಯಾತಿಯ ಅನಿಮೇಷನ್ ಕಲಾವಿದ ವೈಭವ್ ಕುಮರೇಶ್, ಶಿಲ್ಪ ಕಲಾ ಅಕಾಡೆಮಿಯ ಮಾಜಿ ಅಧ್ಯಕ್ಷ ವೆಂಕಟಾಚಲಪತಿ, ಕರ್ನಾಟಕ ಶಿಲ್ಪಕಲಾ ಸಂಸ್ಥೆ ಅಧ್ಯಕ್ಷ ಎಂ.ಸಿ.ರಮೇಶ್, ಲಲಿತಕಲೆ ಉಪ ಸಮಿತಿ ಅಧ್ಯಕ್ಷ ರಘು ರಾಜೇ ಅರಸ್, ಕಾವಾ ಡೀನ್ ಎ.ದೇವರಾಜು, ಆಡಳಿತಾಧಿಕಾರ ನಿರ್ಮಲಾ ಎಸ್. ಮಠಪತಿ, ಸಮಿತಿ ಉಪಾಧ್ಯಕ್ಷ ಭಾಸ್ಕರ್, ರಾಜೇಶ್, ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಮಂಜು ಪ್ರಸಾದ್, ಕಾರ್ಯದರ್ಶಿಯ ಸೂರ್ಯ ಸೇರಿ ಇನ್ನಿತರರು ಪಾಲ್ಗೊಂಡಿದ್ದರು.
