ಹಣ ವಿತರಣೆಯ ಅಕ್ರಮ ಶೀಘ್ರ ತನಿಖೆಗೆ ರೈತರ ಆಗ್ರಹ

Pratheek
1 Min Read

ಪಬ್ಲಿಕ್ ಅಲರ್ಟ್
 
ಮೈಸೂರು: ಕೈಗಾರಿಕಾ ಪ್ರದೇಶಾಭಿವೃದ್ಧಿಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಎಕ್ಸ್‌ಗ್ರೇಷಿಯ ಪಾವತಿಸಲು ಬಿಡುಗಡೆ ಮಾಡಿರುವ ಹಣ ವಿತರಣೆಯಲ್ಲಿ ನಡೆದಿರುವ ಅಕ್ರಮದ ತನಿಖೆ ನಡೆಸಲು ವಿಳಂಬ ಖಂಡಿಸಿ, ತಪ್ಪಿತಸ್ಥ ತಹಶೀಲ್ದಾರ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.
ನಂಜನಗೂಡು ತಾಲೂಕು, ಚಿಕ್ಕಯ್ಯನಛತ್ರ ಹೋಬಳಿ, ಇಮ್ಮಾವು ಗ್ರಾಮದ ಸ.ನಂ:೩೯೦ರಿಂದ ೪೩೦ರವರೆಗಿನ ಭೂಮಿಯಲ್ಲಿ ಸ್ವಾಧೀನದಲ್ಲಿದ್ದ ರೈತರಿಗೆ ಎಕ್ಸ್‌ಗ್ರೇಷಿಯ ಪಾವತಿಸಲು ಬಿಡುಗಡೆ ಮಾಡಿರುವ ಹಣ ವಿತರಣೆಯಲ್ಲಿ ಅಕ್ರಮ ನಡೆದಿರುವ ಸಂಬಂಧ ಕರ್ನಾಟಕ ರಾಜ್ಯ ರೈತ ಸಂಘ ೧೨೫ ದಿನಗಳಿಂದ ಹೊರಾಟ ನಡೆಸುತ್ತಿದೆ. ಈ ಸಂಬಂಧ ಜಿಲ್ಲಾಧಿಕಾರಿ ೩೦ ದಿನಗಳೊಳಗೆ ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸಲು ತನಿಖಾಧಿಕಾರಿ ನೇಮಿಸಿದ್ದಾರೆ. ಆದರೆ ೨ ತಿಂಗಳಾದರು ಇದುವರೆಗೂ ವರದಿ ಸಲ್ಲಿಕೆಯಾಗಿಲ್ಲ ಎಂದು ಕಿಡಿ ಕಾರಿದರು.
ಕೆಐಎಡಿಬಿ ಪರಿಹಾರ ನೀಡಲೆಂದು ೧೮ ಕೋಟಿ ಬಿಡುಗಡೆಗೊಳಿಸಿತ್ತು. ಆದರೆ, ನಂಜನಗೂಡು ತಹಸೀಲ್ದಾರ್ ಸೇರಿದಂತೆ ಹಲವು ಅಧಿಕಾರಿಗಳು ಅಕ್ರಮ ಎಸಗಿ, ನಿಜವಾಗಿ ಭೂಮಿಯ ಅನುಭವನದಲ್ಲಿದ್ದವರಿಗೆ ತಲಾ ನಾಲ್ಕು ಲಕ್ಷ ಪರಿಹಾರ ನೀಡುವ ಬದಲು ರಾಜಕೀಯ ಹಿಂಬಾಲಕರಿಗೆ ನೀಡಿದ್ದಾರೆ. ಅಕ್ರಮ ವ್ಯವಹಾರದಲ್ಲಿ ಭಾಗಿಯಾಗಿರುವ ಬಗ್ಗೆ ಮೇಲ್ನೋಟಕ್ಕೆ ಕಂಡುಬಂದಿರುವ ನಂಜನಗೂಡು ತಾಲೂಕು ತಹಶೀಲ್ದಾರ್ ವಿರುದ್ದ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಹಕ್ಕೊತ್ತಾಯಗಳು: ಕೂಡಲೇ ಅಕ್ರಮದಲ್ಲಿ ಭಾಗಿಯಾಗಿರುವ ನಂಜನಗೂಡು ತಹಸೀಲ್ದಾರ್‌ನ್ನು ಅಮಾನತ್ತು ಮಾಡಬೇಕು. ತನಿಖಾ ವರದಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಬೇಕು. ರೈತರಿಗೆ ಪರಿಹಾರ ಮತ್ತು ಖಾಯಂ ಹುದ್ದೆ ನೀಡಬೇಕು. ಒಂದು ವಾರದಲ್ಲಿ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ರಾಜ್ಯಾದ್ಯಕ್ಷ ಬಡಗಲಪುರ ನಾಗೇಂದ್ರ, ಸಂಘಟನಾ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಪ್ರಧಾನ ಕಾರ್ಯದರ್ಶಿ ಪಿ.ಮರಂಕಯ್ಯ, ಯುವ ಘಟಕದ ಜಿಲ್ಲಾಧ್ಯಕ್ಷ ಪ್ರೇಮ್‌ರಾಜ್, ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ನೇತ್ರಾವತಿ ಸೇರಿದಂತೆ ಹಲವರು ಭಾಗವಹಿಸಿದ್ದರು.

Share This Article
Leave a Comment