ಪಬ್ಲಿಕ್ ಅಲರ್ಟ್ ನ್ಯೂಸ್:-ಜನನ ಮತ್ತು ಮರಣ ನೋಂದಣಿ ಶೇಕಡಾ 100 ರಷ್ಟು ಕಡ್ಡಾಯವಾಗಿ ಆಗಬೇಕು – ಡಾ ಪಿ ಶಿವರಾಜು
ಮೈಸೂರು ಮಾರ್ಚ್ 12 (ಕರ್ನಾಟಕ ವಾರ್ತೆ) ಜನನ ಮರಣ ನೋಂದಣಿ ಶೇಕಡಾ 100 ರಷ್ಟು ಕಡ್ಡಾಯವಾಗಿ ಆಗಬೇಕು ಎಂದು ಅಪರ ಜಿಲ್ಲಾಧಿಕಾರಿ ಗಳಾದ ಡಾ ಪಿ ಶಿವರಾಜು ಅವರು ತಿಳಿಸಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜನನ ಮರಣ ನೋಂದಣಿ ಕುರಿತು ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜನನ ನೋಂದಣಿಗಳು ಕಳೆದ ಮೂರು ತಿಂಗಳ ಅವಧಿಯಲ್ಲಿ ಶೇಕಡಾ 100 ರಷ್ಟು ಆಗಿರುವುದಕ್ಕೆ ಸರ್ಕಾರದ ಮಟ್ಟದಲ್ಲಿ ಪ್ರಶಂಶನಾ ಪತ್ರ ನೀಡಿರುವುದು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ ಎಂದರು.
ಜನನ ಆದ 21 ದಿನಗಳ ಒಳಗಾಗಿ ನೋಂದಣಿ ಆಗಬೇಕು. ಜಿಲ್ಲೆಯ ಚೆಲುವಾಂಬ ಆಸ್ಪತ್ರೆ, ಟಿ ನರಸೀಪುರ ತಾಲ್ಲೂಕು ಆಸ್ಪತ್ರೆ, ಹೆಚ್ ಡಿ ಕೋಟೆ ತಾಲ್ಲೂಕು ಆಸ್ಪತ್ರೆ ಹಾಗೂ ಮೈಸೂರು pktb & cd ಆಸ್ಪತ್ರೆ ಗಳು ನಿಗದಿತ ಅವಧಿಯಲ್ಲಿ ನೋಂದಣಿ ಮಾಡಿ ಶೇಕಡಾ 100 ರಷ್ಟು ಗುರಿ ಸಾಧನೆ ಮಾಡಿವೆ. ಜನನ ಘಟನೆಗಳ ವಿಳಂಬ ನೋಂದಣಿ ಮಾಡಿರುವ ನಂಜನಗೂಡು ತಾಲ್ಲೂಕು ಆಸ್ಪತ್ರೆ, ಹುಣಸೂರು ನಗರಸಭೆ, ನಂಜನಗೂಡು ನಗರಸಭೆ, ಟಿ ನರಸೀಪುರ ಪುರಸಭೆ, ಮೈಸೂರು ವಲಯ ಕಛೇರಿ 2 ಹಾಗೂ ವಲಯ ಕಛೇರಿ 8 ಗಳು ನೋಂದಣಿಯನ್ನು ವಿಳಂಬ ಮಾಡದೇ ನೋಂದಣಿ ಮಾಡಬೇಕು. ವಿಳಂಬ ನೋಂದಣಿಗೆ ಸಾರ್ವಜನಿಕರಿಂದ ಶುಲ್ಕ ಪಡೆಯದೇ ಸಂಬಂಧಿಸಿದ ಅಧಿಕಾರಿಗಳು ಪಾವತಿ ಮಾಡುವಂತೆ ಆಗಬೇಕು. ಆಗ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುತ್ತಾರೆ ಎಂದು ತಿಳಿಸಿದರು.
ಮರಣ ಸಂಭವಿಸಿದ 21 ದಿನಗಳ ಒಳಗೆ ನೋಂದಣಿ ಆಗಬೇಕು. ಕಡಕೋಳ ಪಟ್ಟಣ ಪಂಚಾಯಿತಿ ಶ್ರೀರಾಂಪುರ, ಕೆ ಆರ್ ಆಸ್ಪತ್ರೆ, ನಂಜನಗೂಡು ನಗರಸಭೆ, ಹೂಟಗಳ್ಳಿ ನಗರ ಸಭೆ, ಟಿ ನರಸೀಪುರ ಪುರಸಭೆ, ರಮ್ಮನಹಳ್ಳಿ ಪಟ್ಟಣ ಪಂಚಾಯಿತಿ, ರಮ್ಮನಹಳ್ಳಿ ಪಟ್ಟಣ ಪಂಚಾಯಿತಿ, ಮೈಸೂರು ವಲಯ ಕಛೇರಿ-6, ವಲಯ ಕಛೇರಿ -9, ವಲಯ ಕಛೇರಿ -2, ಕೆ ಆರ್ ನಗರ ಪುರಸಭೆ, ಪಿರಿಯಾಪಟ್ಟಣ ಪುರಸಭೆ, ಬನ್ನೂರು ಪುರಸಭೆ, ಬೋಗಾದಿ ಪಟ್ಟಣ ಪಂಚಾಯಿತಿ ಗಳಲ್ಲಿ ಮರಣ ನೋಂದಣಿ ವಿಳಂಬವಾಗಿ ಆಗಿದೆ. ಶೇಕಡಾ 92.8 ರಷ್ಟು ವಿಳಂಬ ನೋಂದಣಿ ಆಗಿರುವ ಕಡಕೋಳ ಪಟ್ಟಣ ಪಂಚಾಯಿತಿಗೆ ನೋಟಿಸ್ ನೀಡಲಾಗುವುದು ಎಂದು ತಿಳಿಸಿದರು.
ವಿಳಂಬವಾಗಿ ಜನನ ಮರಣ ನೋಂದಣಿ ಮಾಡಿರುವ ಗ್ರಾಮ ಪಂಚಾಯಿತಿಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಸಂಬಂದಿಸಿದ ತಾಲ್ಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಗಳಿಗೆ ಪತ್ರ ಬರೆಯುವಂತೆ ತಿಳಿಸಿದರು. ಜನನ ಮರಣ ನೋಂದಣಿ ಕುರಿತಂತೆ ಸಿಬ್ಬಂದಿಗಳಿಗೆ ತರಬೇತಿಯನ್ನು ನೀಡಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳಾದ ಆರ್ ಚಿತ್ರಾ, ಜಿಲ್ಲಾ ಶಸ್ತ್ರಚಿಕಿತ್ಸರಾದ ಡಾ. ಸತೀಶ್ ಎನ್.ವಿ, ಜಿಲ್ಲಾ ಮಕ್ಕಳ ಸಂತಾನೋತ್ಪತ್ತಿ ಅಧಿಕಾರಿ ಡಾ. ಮಹಮ್ಮದ್ ಸಿರಾಜ್ ಅಹಮದ್, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರು ಸುರೇಶ್ ಅಂಗಡಿ, ಕೃಷಿ ಇಲಾಖೆಯ ಉಪ ನಿರ್ದೇಶಕರಾದ ಮಂಜುನಾಥ್, ತಹಶೀಲ್ದಾರ್ ರಾಮ್ ಪ್ರಸಾದ್, ಸಹಾಯಕ ನಿರ್ದೇಶಕ ಹೊನ್ನೇಗೌಡ ಎಂ ವಿ, ಸಹಾಯಕ ಸಾಂಖ್ಯಿಕ ಅಧಿಕಾರಿಗಳಾದ ಗಣೇಶ, ಸಂಧ್ಯಾ ಎಸ್ ಹಾಗೂ ವಿವಿಧ ಇಲಾಖೆಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು.
