ಮೈಸೂರು: ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಸುತ್ತೂರು ಮಠದ 23ನೇ ಪೀಠಾಧಿಪತಿಗಳಾದ ಡಾ.ಶ್ರೀ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿ ಅವರ 110ನೇ ಜಯಂತಿ ಮಹೋತ್ಸವವನ್ನು ಆ.29ರಂದು ಅನೇಕ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಿದೆ.
ಈ ಕುರಿತು ಜೆಎಸ್ ಎಸ್ ಆಸ್ಪತ್ರೆಯ ರಾಜೇಂದ್ರ ಭವನದ ಸುದ್ದಿಗೋಷ್ಠಿಯಲ್ಲಿ ಜೆಎಸ್ ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಬೆಟಸೂರು ಮಠ ಮಾತನಾಡಿ,ಪಿಯುಸಿಯ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗಗಳಲ್ಲಿ ಅತಿ ಹೆಚ್ಚು ಅಂಕಗಳಿಸಿದ ಪ್ರತಿ ವಿಭಾಗದ ಮೊದಲ ಮೂವರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತದೆ.
ಜೆಎಸ್‌ಎಸ್ ಶಾಲಾಕಾಲೇಜುಗಳ ಉತ್ತಮ ವಾರ್ಷಿಕ ಸಂಚಿಕೆಗಳು ಹಾಗೂ ‘ಪ್ರಸಾದ’ ಮಾಸಿಕ ಸಂಚಿಕೆಯ ವಾರ್ಷಿಕ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಗುತ್ತದೆ. ಜೆಎಸ್ಎಸ್ ಪ್ರಸಾದ ನಿಲಯಗಳಲ್ಲಿದ್ದು ವ್ಯಾಸಂಗ ಮಾಡುತ್ತಿರುವ ಹೆಚ್ಚಿನ ಅಂಕ ಗಳಿಸಿ ಆರ್ಥಿಕ ನೆರವು ಅಗತ್ಯವಿರುವ ವಿದ್ಯಾರ್ಥಿಗಳಿಗೆ ಜೆಎಸ್‌ಎಸ್ ಪ್ರಸಾದನಿಲಯಗಳ ಹಿರಿಯ ವಿದ್ಯಾರ್ಥಿಗಳ ಸಂಘದಿಂದ ವಿದ್ಯಾರ್ಥಿವೇತನ ನೀಡಲಾಗುವುದು. ಪುರಸ್ಕಾರವು ನಗದು, ಸ್ಮರಣಿಕೆ ಹಾಗೂ ಮೌಲಿಕ ಪುಸ್ತಕಗಳನ್ನು ಒಳಗೊಂಡಿರುತ್ತದೆ ಎಂದರು.

ಮೃಗಾಲಯಕ್ಕೆ ಕೊಡುಗೆ: ಜಯಂತಿಯ ಅಂಗವಾಗಿ ಮೈಸೂರಿನ ಮೃಗಾಲಯದ ಪ್ರಾಣಿಪಕ್ಷಿ ಸಂಕುಲಕ್ಕೆ ಆಹಾರ ವಿತರಣೆ ಮಾಡಲು ಪ್ರತಿ ವರ್ಷದಂತೆ ಈ ವರ್ಷವೂ ಒಂದು ಲಕ್ಷ ರೂ.ಗಳನ್ನು ನೀಡಲಾಗುವುದು. ಶ್ರೀಮಠದಲ್ಲಿ ಜೆಎಸ್‌ಎಸ್ ಆಸ್ಪತ್ರೆಯಿಂದ ನೇತ್ರ, ರಕ್ತ, ಅಂಗಾಂಗಗಳು ಹಾಗೂ ದೇಹದಾನಗಳ ಬಗ್ಗೆ ಮಾಹಿತಿ ನೀಡಲು ಮಾಹಿತಿ ಕೇಂದ್ರ ತೆರೆಯಲಾಗುತ್ತದೆ. ಅಲ್ಲಿಯೇ ನೋಂದಣಿ ಮಾಡಿಕೊಳ್ಳಲೂ ಆವಕಾಶವಿರುತ್ತದೆ. ಶ್ರೀ ಶಿವರಾತ್ರಿ ರಾಜೇಂದ್ರ ಕಲಾಬಳಗದಿಂದ ರಾತ್ರಿ 9ಘಂಟೆಗೆ ಶ್ರೀ ಪ್ರಭುಲಿಂಗಲೀಲೆ ನಾಟಕವನ್ನು ಏರ್ಪಡಿಸಲಾಗಿದೆ. ಜಯಂತಿ ಮಹೋತ್ಸವದ ಅಂಗವಾಗಿ ಜೆಎಸ್‌ಎಸ್ ಗ್ರಂಥಮಾಲೆಯ ಪ್ರಕಟಣೆಗಳಿಗೆ ಆ. 29ರಿಂದ ಸೆ.30ರವರೆಗೆ ಶೇ.50ರಷ್ಟು ರಿಯಾಯಿತಿ ನೀಡಲಾಗುತ್ತದೆ. ಜತೆಗೆ ಅಂಗಸಂಸ್ಥೆಗಳು ಹಾಗೂ ವಿವಿಧೆಡೆಗಳಲ್ಲಿ ಜಯಂತಿ ಆಚರಣೆ ಮಾಡಲಾಗುತ್ತದೆ ಎಂದರು.
ಜೆಎಸ್ ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಮಂಜುನಾಥ್, ಜೆಎಸ್ ಎಸ್ ಕಾಲೇಜು ವಿಭಾಗದ ಕಾರ್ಯದರ್ಶಿ ಶಿವಕುಮಾರಸ್ವಾಮಿ, ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ ಇನ್ನಿತರರು ಸುದ್ದಿಗೋಷ್ಠಿಯಲ್ಲಿದ್ದರು.