ಕನ್ನಡ ಕೇವಲ ಒಂದು ಭಾಷೆಯಲ್ಲ, ಇದು ನಮ್ಮ ಅಸ್ಮಿತೆ: ಎನ್ ಚೆಲುವರಾಯಸ್ವಾಮಿ

Chethan
3 Min Read

ಪಬ್ಲಿಕ್ ಅಲರ್ಟ್

ಮಂಡ್ಯ:  ಕನ್ನಡ ಸಾಹಿತ್ಯಕ್ಕೆ ದೊರೆತಿರುವ 8 ಜ್ಞಾನಪೀಠ ಪ್ರಶಸ್ತಿಗಳೇ ನಮ್ಮ ಭಾಷೆಯ ಶ್ರೀಮಂತಿಕೆಗೆ ಸಾಕ್ಷಿ. ಬಸವಣ್ಣನವರ ವಚನಗಳು, ದಾಸರ ಕೀರ್ತನೆಗಳು, ಕವಿಗಳ ಕಾವ್ಯಗಳು ನಮ್ಮ ನಾಡಿನ ಪರಂಪರೆ, ಕನ್ನಡ ಕೇವಲ ಒಂದು ಭಾಷೆಯಲ್ಲ, ಅದು ನಮ್ಮ ಅಸ್ಮಿತೆ
ಎಂದು ಕೃಷಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚೆಲುವರಾಯಸ್ವಾಮಿ ಹೇಳಿದರು.

ಜಿಲ್ಲಾಡಳಿತ ವತಿಯಿಂದ ನಗರದ ಸರ್.ಎಂ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ 70 ನೇ ಕನ್ನಡ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಾವೆಲ್ಲರೂ ಅತ್ಯಂತ ಸಡಗರ-ಸಂಭ್ರಮದಿಂದ ಎಲ್ಲ ಜಾತಿ ಮತ ಧರ್ಮಗಳ ಜನರು ಸೇರಿ ಒಗ್ಗೂಡಿ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತೇವೆ. 1950ರಲ್ಲಿ ಭಾರತವು ಗಣರಾಜ್ಯವಾದ ನಂತರ ಭಾಷಾವಾರು ಪ್ರಾಂತ್ಯಗಳ ರಚನೆಯ ಅನಿವಾರ್ಯತೆಯಿಂದ ಫಜಲ್‌ ಅಲಿ ನೇತೃತ್ವದ ಸಮಿತಿ ರಚಿಸಿ, ವರದಿ ಪಡೆಯಲಾಯಿತು.
ಆದಿ ಕವಿ ಪಂಪನಿಂದ ಇಲ್ಲಿಯವರೆಗೂ ಅನೇಕ ಕವಿಮಾನ್ಯರು, ಸಾಹಿತಿಗಳು ನಾಡು-ನುಡಿ ಹಾಗೂ ಕನ್ನಡ ನಾಡಿನ ಕಲೆ, ಸಂಸ್ಕೃತಿಯ ಬಗೆಗೆ ಸಮೃದ್ಧ ಸಾಹಿತ್ಯ ರಚಿಸಿದ್ದಾರೆ. ಮಂಡ್ಯದ ಈ ನಮ್ಮ ನೆಲವು ಹಲವು ಕವಿಗಳ, ಸಾಹಿತಿಗಳ ಹಾಗೂ ಕಲಾವಿದರಿಗೆ ಜನ್ಮ ನೀಡಿದ್ದು ಅವರ ಕನ್ನಡದ ಸೇವೆಯನ್ನು ನಾವೆಲ್ಲರೂ ಸ್ಮರಿಸಬೇಕಾಗಿದೆ. ಬಿ.ಎಂ.ಶ್ರೀ, ಪು.ತಿ.ನ., ಕೆ.ಎಸ್‌. ನರಸಿಂಹಸ್ವಾಮಿ, ಜಿ.ವೆಂಕಟಸುಬ್ಬಯ್ಯ, ಕೆ.ಎಸ್.ನಿಸಾರ್‌ಅಹಮದ್, ಬೆಸಗರಹಳ್ಳಿ ರಾಮಣ್ಣ, ಹೆಚ್.ಎಲ್‌. ನಾಗೇಗೌಡ ಇನ್ನೂ ಮೊದಲಾದ ಮಹನೀಯರನ್ನು ನಾವೆಲ್ಲರೂ ನೆನೆಯಬೇಕಿದೆ ಎಂದರು.

ರಾಜ್ಯದ ಜನರ ಬೆಂಬಲದೊಂದಿಗೆ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ನಾಡಿನ ಜನರ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ಹಾಗೂ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಜನ ಮೆಚ್ಚಿದ ಮುಖ್ಯಮಂತ್ರಿಗಳಾಗಿ ಸಿದ್ಧರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ರವರ ನೇತೃತ್ವದಲ್ಲಿ ಸರ್ಕಾರವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗಲಾಗುತ್ತಿದೆ ಎಂದು ಹೇಳಿದರು.

ನಮ್ಮ ಸರ್ಕಾರದ ಮೂಲ ಧ್ಯೇಯ ಸಮಾನತೆ ಮತ್ತು ಸಾಮಾಜಿಕ ನ್ಯಾಯ ಜನಸಾಮಾನ್ಯರ ಮತ್ತು ಹಿಂದುಳಿದ ವರ್ಗದವರ ಅಗತ್ಯತೆಗಳನ್ನು ಪೂರೈಸುವ ಹಿನ್ನಲೆಯಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸುವ ಮೂಲಕ ನುಡಿದಂತೆ ನಡೆದಿದ್ದೇವೆ ಎಂಬ ಹೆಗ್ಗಳಿಕೆ ನಮ್ಮ ಸರ್ಕಾರದ ಹೆಮ್ಮೆ ಎಂದು ಅಭಿಪ್ರಾಯಪಟ್ಟರು.

ಪ್ರಸಕ್ತ ವರ್ಷದಲ್ಲಿ ಕಾವೇರಿ ಮಾತೆಯ ಕೃಪೆಯಿಂದ ನಮ್ಮ ಹೆಮ್ಮೆಯ ಕೆ.ಆರ್.ಎಸ್.‌ ಅಣೆಕಟ್ಟು ಮೂರು ಭಾರಿ ಭರ್ತಿ ಆಗಿದೆ. ಅಲ್ಲದೇ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಜೂನ್‌ ತಿಂಗಳಿನಲ್ಲಿಯೇ ಜಲಾಶಯವು ಸಂಪೂರ್ಣವಾಗಿ ಭರ್ತಿಯಾಗಿರುವುದು ಅತ್ಯಂತ ಸಂಭ್ರಮದ ವಿಷಯವಾಗಿದೆ. ಈ ಸಂದರ್ಭದಲ್ಲಿ ಮತ್ತೊಂದು ಹೆಮ್ಮೆಯ ಸಂಗತಿ ಎಂದರೆ, ದಕ್ಷಿಣ ಭಾರತದಲ್ಲಿಯೇ ಪ್ರಥಮವಾಗಿ “ಕಾವೇರಿ ಆರತಿ” ಕಾರ್ಯಕ್ರಮವನ್ನು ಮಂಡ್ಯದ ಕೃಷ್ಣರಾಜ ಸಾಗರ ಜಲಾಶಯದಲ್ಲಿ ಆಯೋಜಿಸಿದ್ದು, ಕನ್ನಡಿಗರ ಜೀವನಾಡಿ ಕಾವೇರಿ ಮಾತೆಗೆ ಗಂಗಾ ಆರತಿ ಮಾದರಿಯಲ್ಲಿ ನಡೆದ ಕಾವೇರಿ ಆರತಿ ಜನರ ಮನ ಸೆಳೆದಿದೆ. ಈ ಕಾರ್ಯಕ್ರಮಕ್ಕೆ ಸಹಕರಿಸಿದ ಸರ್ವರಿಗೂ ಧನ್ಯವಾದ ತಿಳಿಸಿದರು.

ಪ್ರಸಕ್ತ ಸಾಲಿನಲ್ಲಿ: “ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮ ಯೋಜನೆಯಡಿ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ರಸ್ತೆ, ನೈರ್ಮಲ್ಯ ಹಾಗೂ ಅಭಿವೃದ್ದಿ ಕಾಮಗಾರಿಗಳನ್ನು ಒಟ್ಟು ರೂ. 50 ಕೋಟಿಗಳಲ್ಲಿ ಕೈಗೊಳ್ಳಲು ಉದ್ದೇಶಿಸಲಾಗಿದೆ. ಮಂಡ್ಯದಲ್ಲಿ ಯಶಸ್ವಿಯಾಗಿ ನಡೆದ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸವಿನೆನಪಿಗಾಗಿ ರೂ.5.00 ಕೋಟಿ ವೆಚ್ಚದಲ್ಲಿ ಕನ್ನಡ ಭವನವನ್ನು ಮಂಡ್ಯ ನಗರದ ವಿಶ್ವೇಶ್ವರಯ್ಯ ಕ್ರಿಡಾಂಗಣದ ಪಕ್ಕದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿರುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಗಣಿಗ ರವಿಕುಮಾರ್,ದಿನೇಶ್ ಗೂಳಿಗೌಡ,ಜಿಲ್ಲಾಧಿಕಾರಿ ಡಾ.ಕುಮಾರ್,ಸಿಇಓ ಕೆ.ಆರ್,ನಂದಿನಿ,ಪೋಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ,ಮಾಜಿ ಶಾಸಕ ಎಂ.ಶ್ರೀನಿವಾಸ್,ನಗರಸಭೆಯ ಅಧ್ಯಕ್ಷ ಎಂ.ವಿ.ಪ್ರಕಾಶ್,ಮೈಶುಗರ್ ಅಧ್ಯಕ್ಷ ಸಿ ಡಿ ಗಂಗಾಧರ್,ಕರ್ನಾಟಕ ಸಣ್ಣಕೈಗಾರಿಕಾ ಅಭಿವೃದ್ದಿ ನಿಗಮದ ಉಪಾಧ್ಯಕ್ಷೆ ವಿಜಯಲಕ್ಷ್ಮಿ ರಘುನಂದನ್,ಮೂಡಾ ಅಧ್ಯಕ್ಷ ನಯೀಮ್ ಇತರಿದ್ದರು.

Share This Article
Leave a Comment