ಪಬ್ಲಿಕ್ ಅಲರ್ಟ್
ಮೈಸೂರು: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲೂ ಕನ್ನಡ ಲಿಪಿಯು ಹೆಚ್ಚು ಬಳಕೆಯಾಗುತ್ತಿರುವುದು ಸಂತಸದ ಬೆಳವಣಿಗೆಯಾಗಿರುತ್ತದೆ. ವಿಜ್ಞಾನ-ತಂತ್ರಜ್ಞಾನದ ಜೊತೆ ಜೊತೆಗೂ ಕನ್ನಡವನ್ನು ಬಳಸಿ, ಬೆಳೆಸಬೇಕಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.
ಒವೆಲ್ ಮೈದಾನದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ೭೦ನೇ ಕರ್ನಾಟಕ ರಾಜ್ಯೋತ್ಸವದ ಧ್ವಜಾರೋಹಣ ನೇರವೇರಿಸಿ ಮಾತನಾಡಿದರು. ೨೧ನೇ ಶತಮಾನದ ಈ ಹೊತ್ತಿನಲ್ಲಿ ಕನ್ನಡ ಭಾಷೆ ಆಧುನೀಕತೆಯೊಂದಿಗೆ ತನ್ನದೇ ಅಸ್ಮಿತೆಯನ್ನು ಉಳಿಸಿಕೊಂಡಿದೆ. ಈ ಮಣ್ಣಿಗೊಂದು, ಈ ನುಡಿಗೊಂದು ಸೊಗಸಿದೆ, ಸೌಂದರ್ಯವಿದೆ, ಬೆಡಗಿದೆ, ಆದ್ದರಿಂದ ಪ್ರಾದೇಶಿಕ ಸಂಸ್ಕೃತಿಯನ್ನು ಎತ್ತಿಹಿಡಿಯುವ ಕಾರ್ಯವನ್ನು ನಾವು ಮಾಡಬೇಕಿದೆ ಎಂದರು.
ತಂತ್ರಜ್ಞಾನದ ವೇಗದಲ್ಲಿ ಹಾಗೂ ಇಂದಿನ ಡಿಜಿಟಲ್ ಲೋಕದಲ್ಲಿ ಕನ್ನಡ ಭಾಷೆಯು ಹಿಂದುಳಿಯದಂತೆ ಸರಕಾರವು ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಕನ್ನಡದಲ್ಲಿ ಯೂನಿಕೋಡ್ ಅಕ್ಷರ ವಿನ್ಯಾಸ, ಪರಿವರ್ತಕಗಳು, ಚರವಾಣಿ (ಮೊಬೈಲ್‌ನಲ್ಲಿ) ಕನ್ನಡ ಬಳಕೆ, ಬ್ರೈಲ್ ಲಿಪಿಯಲ್ಲಿ ಕನ್ನಡ ಬಳಕೆ ಮತ್ತಿತರ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸಿದೆ ಎಂದು ತಿಳಿಸಿದರು.
ಕರ್ನಾಟಕವನ್ನು ಭಾರತದ ಅವಿಭಾಜ್ಯ ಅಂಗವಾಗಿ ಪರಿಕಲ್ಪಿಸಿ, ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ..! ಎನ್ನುವ ನಾಡಗೀತೆಯನ್ನು ಸವಿಯುತ್ತಾ.. ಎಲ್ಲಾದರೂ ಇರು, ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು, ಎಂಬ ಕವಿವಾಣಿಯಂತೆ ಅಖಂಡ ಕರ್ನಾಟಕ ನಿರ್ಮಾಣಕ್ಕೆ ಶ್ರಮಿಸಿದ ಎಲ್ಲಾ ಮಹನೀಯರುಗಳನ್ನು ಸ್ಮರಿಸುವ ಸುದಿನ ಇದಾಗಿದೆ. ಹಂಚಿಹೋಗಿದ್ದ ಕನ್ನಡ ನಾಡಿನ ಏಕೀಕರಣಕ್ಕಾಗಿ ಆಲೂರು ವೆಂಕಟರಾಯರು ಅನೇಕ ಸಮ್ಮೇಳನಗಳನ್ನು ನಡೆಸಿ ಹೋರಾಟ ಪ್ರಾರಂಭಿಸಿದರು. ೧೯೨೪ರಲ್ಲಿ ಬೆಳಗಾವಿಯ ಕಾಂಗ್ರೆಸ್ ಅಧಿವೇಶನದಲ್ಲಿ ಹುಯಿಲಗೊಳ ನಾರಾಯಣ ರಾಯರು: “ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು” ಎಂಬ ಗೀತೆಯನ್ನು ಹಾಡಿ ಪ್ರಾರಂಭಗೊಂಡು. ಮೈಸೂರು ರಾಜ್ಯವನ್ನು ೧೯೭೩ ರಲ್ಲಿ “ಕರ್ನಾಟಕ” ಎಂದು ಮರು ನಾಮಕರಣ ಮಾಡಲಾಯಿತು. ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಾಗ ದೇವರಾಜ್ ಅರಸು ಮುಖ್ಯಮಂತ್ರಿಯಾಗಿದ್ದರು ಎಂಬುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.
ಕನ್ನಡ ನಾಡು ನುಡಿ ಹಾಗೂ ಸಂಸ್ಕೃತಿಗಳ ಉಳಿವು ಬೆಳವಣಿಗೆಗಾಗಿ ಶ್ರಮಿಸಿದ ಅಸಂಖ್ಯ ಜನರ ತ್ಯಾಗ ಬಲಿದಾನ ಸೇರಿವೆ. ಅವರೆಲ್ಲರ ಸೇವೆಯನ್ನು ರಾಜ್ಯೋತ್ಸವದ ಈ ಶುಭ ಸಂದರ್ಭದಲ್ಲಿ ಸ್ಮರಿಸಬೇಕಿದೆ. ಡೆಪ್ಯೂಟಿ ಚನ್ನಬಸಪ್ಪ, ಎನ್.ಎಸ್. ಹರ್ಡಿಕರ್ ಮಂಜಪ್ಪ, ಗಂಗಾಧರ ರಾವ್ ದೇಶಪಾಂಡೆ, ಆರ್.ಆರ್.ದಿವಾಕರ್, ಸಕ್ಕರಿ ಬಾಳಾಚಾರ್ಯ, ಕುವೆಂಪು, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಕೆ.ಶಿವರಾಮ್ ಕಾರಂತ, ಎ.ಎನ್.ಕೃಷ್ಣರಾವ್ ಮತ್ತು ಬಿ.ಎಂ. ಶ್ರೀಕಂಠಯ್ಯ ಅನೇಕ ಮಹನೀಯರ ಹೋರಾಟವನ್ನು ಮರೆಯಲಾಗದೆಂದರು.
ಕನ್ನಡ ಸಾರಸ್ವತ ಲೋಕವು ೮ ಜ್ಞಾನಪೀಠ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿರುವುದು ಕನ್ನಡ ಭಾಷೆಯ ಗರಿಮೆಯಾಗಿದೆ. ಕುವೆಂಪು, ಬೇಂದ್ರೆ, ಕಾರಂತ, ಮಾಸ್ತಿ, ಗೋಕಾಕ್ ರಂತಹ ಮಹನೀಯರು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಹೀಗೆ ಸಾಹಿತ್ಯ, ಸಂಸ್ಕೃತಿ, ಸಂಗೀತ, ಸದಾಭಿರುಚಿ, ಸಂಪ್ರದಾಯ, ಸಂಸ್ಕಾರ ಹೀಗೆ ಯಾವುದೇ ಕ್ಷೇತ್ರದಲ್ಲೂ ನಾವು ಕಡಿಮೆಯಿಲ್ಲ. ಇಂತಹ ಪವಿತ್ರ ನೆಲದಲ್ಲಿ ಜನಿಸಿದ ನಾವೆಲ್ಲರೂ ಪುಣ್ಯವಂತರೂ ಎಂದರು.



ನಮ್ಮ ಸರ್ಕಾರ ಸಾಹಿತಿಗಳಿಗೆ ಹೆಚ್ಚಿನ ಗೌರವ ನೀಡಿದ್ದು, ಈ ಬಾರಿ ವಿಶ್ವವಿಖ್ಯಾತ ದಸರಾ ಮಹೋತ್ಸವನ್ನು ೨೦೨೫ರ ಅಂತರಾಷ್ಟ್ರೀಯ ಬೂಕರ್ ಬಹುಮಾನ ವಿಜೇತೆ ಡಾ. ಬಾನುಮುಷ್ತಾಕ್ ಉದ್ಘಾಟಿಸಿರುವುದು ಹೆಮ್ಮೆಯ ಸಂಗಾತಿಯಾಗಿದೆ. ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಕನ್ನಡದ ಮೇರು ಸಾಹಿತಿ ಎಸ್.ಎಲ್.ಭೈರಪ್ಪ ನಮ್ಮನ್ನೂ ಇತ್ತೀಚಿಗೆ ಅಗಲಿದ್ದು, ಸಕಲ ಸರ್ಕಾರಿ ಗೌರವಗಳೊಂದಿಗೆ ಮೈಸೂರಿನಲ್ಲೇ ಅವರ ಅಂತ್ಯ ಸಂಸ್ಕಾರ ನೆಡೆದಿದ್ದು, ನಾವೆಲ್ಲರೂ
ನಾಡಿನ ಕೀರ್ತಿಯನ್ನು ಹೆಚ್ಚಿಸಲು ಪ್ರಬುದ್ಧತೆಯನ್ನು ಬೆಳೆಸಿಕೊಂಡು ಒಗ್ಗಟ್ಟಾಗಿ ದುಡಿಯೋಣ, ಏಕೀಕರಣದಲ್ಲಿ ದುಡಿದವರ ಸೇವೆಯ ಸಾರ್ಥಕತೆಗೆ ಶ್ರಮಿಸೋಣ ಗತವೈಭವದ ಸಂಭ್ರಮಾಚರಣೆಗೆ ಪ್ರೀತಿಯಿಂದ ಸೌಹಾರ್ದತೆಯಿಂದ ಪಾಲ್ಗೊಳ್ಳೋಣ ಕನ್ನಡ ಭಾಷೆ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯ ಆರಾಧಕರಾಗೋಣ, ಮತ್ತು ಕನ್ನಡ ನೆಲ, ಜಲ, ಸಾಹಿತ್ಯ, ಸಂಸ್ಕೃತಿಯ ಸಂರಕ್ಷಣೆಗೆ ಸಂಕಲ್ಪ ಮಾಡೋಣ ಎಂದರು.
ಕಾರ್ಯಕ್ರಮದಲ್ಲಿ ಸಚಿವರು ಧ್ವಜ ವಂದನೆ ಸ್ವೀಕರಿಸಿದರು. ಪೊಲೀಸ್ ಇಲಾಖೆ, ಅಗ್ನಿ ಶಾಮಕ ದಳ, ಗೃಹ ರಕ್ಷಕ ದಳ, ಎನ್ ಸಿ ಸಿ, ಎನ್ ಎಸ್ ಎಸ್ ಹಾಗೂ ವಿವಿಧ ಶಾಲೆಗಳ ಮಕ್ಕಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಇದೇ ವೇಳೆ 95 ಮಂದಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಶಾಸಕರಾದ ಜಿ. ಟಿ.ದೇವೇಗೌಡ, ಕೆ.ಹರೀಶ್ ಗೌಡ, ತನ್ವೀರ್ ಸೇಠ್, ವಿಧಾನ ಪರಿಷತ್ ಸದಸ್ಯರಾದ ಸಿ.ಎನ್ ಮಂಜೇಗೌಡ, ಕೆ.ಶಿವಕುಮಾರ್, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ಯುಕೇಶ್ ಕುಮಾರ್, ಮೈಸೂರು ಮಹಾನಗರ ಪಾಲಿಕೆಯ ಆಯುಕ್ತ ಶೇಕ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜು, ಡಿಸಿಪಿಗಳಾದ ಸುಂದರ್ ರಾಜು, ಬಿಂದುಮಣಿ ಸೇರಿ ಇತರರು ಉಪಸ್ಥಿತರಿದ್ದರು.
ಪುಷ್ಪಾರ್ಚನೆ: ಕಾರ್ಯಕ್ರಮಕ್ಕೂ ಮುನ್ನ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಕನ್ನಡ ರಾಜ್ಯೋತ್ಸವದ ಅಂಗವಾಗಿ ಅರಮನೆ ಆವರಣದಲ್ಲಿರುವ ಶ್ರೀ ಭುವನೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ಪುಷ್ಪಾರ್ಚನೆಯನ್ನು ಸಲ್ಲಿಸಿದರು. ಬಳಿಕ ಶ್ರೀ ಭುವನೇಶ್ವರಿ ತಾಯಿಯ ಮೆರವಣಿಗೆ ರಥಕ್ಕೆ ಚಾಲನೆ ನೀಡಿದರು.


ಬಾಕ್ಸ್
95 ಮಂದಿಗೆ ರಾಜ್ಯೋತ್ಸವ ಸನ್ಮಾನ
ಮೈಸೂರು: ಒವೆಲ್ ಮೈದಾನದಲ್ಲಿ ಬರೋಬ್ಬರಿ 95 ಮಂದಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಾಹಿತ್ಯ ಕ್ಷೇತ್ರದಲ್ಲಿ ರತ್ನಚಂದ್ರಶೇಖರ್, ನಗರ್ಲೆ ಶಿವಕುಮಾರ್, ಪ್ರೇಮಾಮಾದಪ್ಪ, ಮರುಡೇಶ್ ಮೂರ್ತಿ, ಡಿ.ನಾಗೇಂದ್ರಪ್ಪ, ಆದಿಲ್ ಅಕ್ತರ್, ಪ್ರೊ.ಎನ್.ಕೆ.ಲೋಲಕ್ಷಿ, ಮಂಗಳ ಮುದ್ದುಮಾದಪ್ಪ.
ಪತ್ರಿಕೋದ್ಯಮಕ್ಷೇತ್ರದಲ್ಲಿ ದಯಾಶಂಕರ್ ಮೈಲಿ, ವೀರಭದ್ರಪ್ಪ ಬಿಸ್ಲಳಿ, ರಮೇಶ್‌ನಾಯಕ, ಎಚ್.ಎಸ್.ದಿನೇಶ್ ಮಹೇಶ್ ಭಗೀರಥ, ಧರ್ಮಾಪುರ ನಾರಾಯಣ್, ಕಾರ್ತಿಕ್, ಎಂ.ಟಿ.ಯೋಗೇಶ್ ಕುಮಾರ್, ಶೇಖರ್ ಕಿರುಗಂದ, ಶ್ರೀರಾಮ್, ಹಂಪಾನಾಗರಾಜ್, ಎಚ್.ಆರ್.ಶಿವಕುಮಾರ್, ವೈದ್ಯಕೀಯ ಹಾಗೂ ಸಮಾಜ ಸೇವೆ ಕ್ಷೇತ್ರದಲ್ಲಿ ಡಾ.ರವೀಶ್, ಶಿಕ್ಷಣಕ್ಷೇತ್ರದಲ್ಲಿ ಎಂ.ಡಿ.ಗೋಪಿನಾಥ್, ಎಂವಿ ತ್ಯಾಗರಾಜ್, ಗೌಡಯ್ಯ, ಬಿ.ಕೆ.ಜ್ಞಾನ ಪ್ರಕಾಶ್, ಎಚ್.ಎಸ್.ಲಿಂಗರಾಜೇಗೌಡ, ವಿ.ಆರ್.ವಾಣಿ, ಮಂಜುಳಾಕ್ಷಿ, ರೇಣುಕ, ವಿಜಯಲಕ್ಷ್ಮಿ ಮಾನಾಪುರ,
ಕನ್ನಡಪರ ಹೋರಾಟ ಕ್ಷೇತ್ರದಲ್ಲಿ ಮಾದಪ್ಪ, ನಾಗರಾಜು, ಜಯಕುಮಾರ್, ಎಸ್.ಕೆ.ರಾಜುಗೌಡ, ಪುರುಷೋತ್ತಮ್, ಸಿಂಧುವಳ್ಳಿ ಶಿವಕುಮಾರ್, ಡೇರಿ ವೆಂಕಟೇಶ್, ನಂಜುಂಡ ಕ್ಷೇತ್ರದಲ್ಲಿ ಪಡೆದುಕೊಂಡಿದ್ದಾರೆ. ಸಮಾಜಸೇವೆಯಲ್ಲಿ ಮೈಸೂರು ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಕೆ.ಬಿ.ಲಿಂಗರಾಜು, ಆರ್.ಯಶೋಧ, ಸ್ನೇಕ್ ಶ್ಯಾಂ, ಕೆ.ವಿ.ಮಲ್ಲೇಶ್ ಸೇರಿ ಬರೋಬ್ಬರಿ 95 ಮಂದಿ ಪ್ರಶಸ್ತಿ ಸ್ವೀಕರಿಸಿದರು.
