400 ಕೋಟಿ ರೂ. ನಲ್ಲಿ ವೈಟ್ ಟ್ಯಾಪಿಂಗ್ ಗೆ ಶೀಘ್ರ ಚಾಲನೆ

Pratheek
3 Min Read

ಪಬ್ಲಿಕ್ ಅಲರ್ಟ್

ಮೈಸೂರು: ಮೈಸೂರು ನಗರದ ಪ್ರಮುಖ 12 ರಸ್ತೆಗಳಲ್ಲಿ ವೈಟ್ ಟ್ಯಾಪಿಂಗ್ ಮಾಡಲು 400 ಕೋಟಿ ರೂ.ಗಳು ಬಿಡುಗಡೆಯಾಗಿ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಶೀಘ್ರ ಚಾಲನೆ ನೀಡುವುದಾಗಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.
ಮೈಸೂರಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶಾಸಕರ ನೇತೃತ್ವದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ಬಳಿಕ ಪ್ರತಿಕ್ರಯಿಸಿದರು. ನಗರದಲ್ಲಿನ ಸಂಚಾರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿಗಳ ಜಂಟಿ ಸರ್ವೇ ಆಧರಿಸಿ ವೈಟ್ ಟ್ಯಾಪಿಂಗ್ ಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು ಶೀಘ್ರ ಚಾಲನೆ ನೀಡಲಾಗುವುದು. ಸಭೆಯಲ್ಲಿ ಶಾಸಕರು ಕೆಲವೊಂದು ಸಲಹೆ ನೀಡಿದ್ದು, ಅವುಗಳನ್ನು ಇದರೊಳಗೆ ಸೇರಿಸಿಕೊಳ್ಳಲಾಗುವುದು ಎಂದು ಹೇಳಿದರು‌.
ಇನ್ನೂ ಮೆಟ್ರೋ, ಮೆಟ್ರೋಪೊಲೊನಿಂದ ಲಿಂಗನದೇವರ ಕೊಪ್ಪಲಿನವರೆಗೆ ಸೇರಿ ಅನೇಕ‌ಕಡೆಗಳಲ್ಲಿ ಮುಂದಿನ 50 ವರ್ಷದ ಜನಸಂದಣಿಗೆ ಅಗತ್ಯವಾಗಿ ಬೇಕಾದ ಫ್ಲೇಒವರ್ ನಿರ್ಮಾಣದ ಬ್ಲೂಪ್ರಿಂಟ್ ತಯಾರಿ ಸಂಬಂಧವೂ ಸಹ ಚರ್ಚೆ ನಡೆಯಿತು. ಈ ವೇಳೆ ಮೈಸೂರಿನ ಪಾರಂಪರಿಕತೆ, ಪರಿಸರಕ್ಕೆ ಧಕ್ಕೆಯಾಗದ ರೀತಿಯಲ್ಲಿ ಅಭಿವೃದ್ಧಿ ನಡೆಸಲು ನಕ್ಷೆ ತಯಾರಿಸುವಂತೆ ಸೂಚಿಸಿದ್ದೇನೆ.‌ಇದು ಪ್ರಾಥಮಿಕ ಸಭೆ ಎಂದು ಹೇಳಿದರು.
ವಿಮಾನ ನಿಲ್ದಾಣ ವಿಸ್ತರಣೆಗೆ 240 ಎಕರೆ ಭೂಮಿ ವಶ ಪಡಿಸಿಕೊಂಡಿದ್ದು, ಉಳಿದ 40 ಎಕರೆ ಪ್ರಕ್ರಿಯೆ ವಾರದಲ್ಲಿ ಮುಗಿಯಲಿದೆ. ಟನಲ್ ನಿರ್ಮಾಣಕ್ಕೂ ಸಹ ಕೆಪಿಟಿಸಿಎಲ್ ಪ್ರಕ್ರಿಯೆ ಶುರು ಮಾಡುವು್ದಾಗಿ ತಿಳಿಸಿದ್ದು ಶೀಘ್ರ ಕಾರ್ಯರೂಪಕ್ಕೆ ಬರಲಿದೆ ಎಂದು ಹೇಳಿದರು.
8 ಹುಲಿಗಳ ಕೂಬಿಂಗ್ ಗೆ ಸೂಚನೆ: ಸದ್ಯದ ಮಾಹಿತಿ ಪ್ರಕಾರ 6 ರಿಂದ 8 ಹುಲಿಗಳು ನಾಡಿನತ್ತ ಬರುತ್ತಿರುವ ಮಾಹಿತಿಯಿದ್ದು ಅಷ್ಟನ್ನೂ ಹಿಡಿಯಲು ಕೂಬಿಂಗ್ ಕಾರ್ಯಾಚರಣೆ ನಡೆಸಲು ಸೂಚಿಸಿದ್ದೇವೆ. ಈ ಸಂಬಂಧ ಚಾಮರಾಜನಗರ ದಲ್ಲಿ ಹಿರಿಯ ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಯಲಿದೆ. ಅಲ್ಲಿ ಅರಣ್ಯಾಧಿಕಾರಿಗಳ ಭದ್ರತಾ ವೈಪಲ್ಯ ಸೇರಿ ಎಲ್ಲಾ ಚರ್ಚಿಸಲಾಗುವುದು ಎಂದರು.

ಹುಲಿದಾಳಿಗೆ ತುತ್ತಾದವರಿಗೆ ಈಗಾಗಲೇ ಉದ್ಯೋಗ ಖಾತರಿ ನೀಡಿದ್ದು, 20 ಲಕ್ಷ ಪರಿಹಾರವನ್ನು ಸ್ಥಳೀಯ ಶಾಸಕರ ಮೂಲಕ‌ಅರಣ್ಯಾ ಇಲಾಖೆ ಹಸ್ತಾಂತರಿಸಿದೆ. ಆದರೆ, ಅರಣ್ಯದಂಚಿನ ಮಂದಿಗೆ ನೈತಿಕ ಸ್ಥೈರ್ಯ ತುಂಬುವ ಕೆಲಸ‌ ಮುಂದಿನ ದಿನಗಳಲ್ಲಿ ಮಾಡಲಾಗುವುದು ಎಂದರು.
ಈಗಾಗಲೇ 18 ಹಾಡಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದು ಒಂದು ಹಾಡಿಗೆ ಹಕ್ಕುಪತ್ರ ಇಲ್ಲದ ಕಾರಣ ವಿದ್ಯುತ್ ನೀಡಿಲ್ಲ. ಶೀಘ್ರ ಅವರಿಗೂ ಹಕ್ಕು ಪತ್ರ ವಿತರಿಸಿ ವಿದ್ಯುತ್ ಕೊಡಲಾಗುವುದು ಎಂದರು. ಸಭೆಯಲ್ಲಿ ಶಾಸಕರಾದ ಜಿ.ಟಿ.ದೇವೇಗೌಡ, ತನ್ವೀರ್ ಸೇಠ್, ಕೆ.ಹರೀಶ್ ಗೌಡ, ಸಂಸದ ಯಧುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಜಿಲ್ಲಾಧಿಕಾರಿ ಡಾ.ಲಕ್ಷ್ಮಿಕಾಂತರೆಡ್ಡಿ, ನಗರಪಾಲಿಕೆ ಆಯುಕ್ತ ಸೇರಿ ಇನ್ನಿತರರು ಉಪಸ್ಥಿತರಿದ್ದರು.


ಬಾಕ್ಸ್
ಕ್ರಾಂತಿಯಲ್ಲ ಬ್ರಾಂತಿ
ನವೆಂಬರ್ ಗೆ ಸಚಿವ ಸಂಪುಟ ಪುನರ್ ರಚನೆ, ಸಿಎಂ ಬದಲಾವಣೆಯ ಕ್ರಾಂತಿ ಕುರಿತ ಪ್ರಶ್ನೆಗೆ ಇದೆಲ್ಲಾ ಬ್ರಾಂತಿ ಅಷ್ಟೇ. ನಮ್ಮ ಹೈಕಮಾಂಡ್ ಇದಾವುದರ ಬಗ್ಗೆ ಸೂಚನೆ ನೀಡಿಲ್ಲ. ಹಾಗೊಂದು ವೇಳೆ ಹೈಕಮಾಂಡ್ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆಂದು ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.

ಬಾಕ್ಸ್
58 ರ ವಾರ್ಡ್ ರಸ್ತೆ ಅಭಿವೃದ್ಧಿ ಪಡಿಸಿ, ರಮ್ಮನಹಳ್ಳಿವರೆಗೆ ರಸ್ತೆ ಒತ್ತುವರಿ ತೆರವಿಗೊಳಿಸಿ, ಲಿಂಗದೇವರಕೊಪ್ಪಲಿನವರೆಗೂ ಫ್ಲೇಒವರ್ ಮಾಡಿ. ಕ್ಷೇತ್ರದಲ್ಲಿನ ನಗರಕ್ಕೆ ಹೊಂದಿಕೊಂಡಂತಿರುವ ಪ್ರದೇಶದಲ್ಲಿನ ಕಸ ಸಮಸ್ಯೆ ಹಾಗೂ ಬಡಾವಣೆ ಅಭಿವೃದ್ಧಿ ಗೆ ಅನುದಾನ ಕೊಡಿ.
– ಜಿ.ಟಿ.ದೇವೇಗೌಡ, ಶಾಸಕ

ಬಾಕ್ಸ್
ನಾಲ್ಕು ಪಥರಸ್ತೆಗೆ ಅನುಮೋದನೆ
ಮೈಸೂರು:  ಫೌಂಟೇನ್ ಸರ್ಕಲ್ ನಿಂದ ಬನ್ನಿಮಂಟಪದವರೆಗಿನ ರಸ್ತೆ, ಗೋಪಾಲಗೌಡ ಆಸ್ಪತ್ರೆಯಿಂದ ಚಾಮುಂಡಿ ವಿಹಾರ ಕ್ರೀಡಾಂಗಣದವರೆಗೆ, ಮೈಸೂರು ನಗರ ಬಸ್ ನಿಲ್ದಾಣದಿಂದ ಫೈಲೆಟ್ ವೃತ್ತದವರೆಗಿನ ರಸ್ತೆಗಳನ್ನು ನಾಲ್ಕು ಪಥದ ರಸ್ತೆಯಾಗಿ ವಿಸ್ತರಿಸುವಂತೆ ಶಾಸಕ‌ ತನ್ವೀರ್ ಸೇಠ್ ಒತ್ತಾಯಿಸಿದರು.
ಇದಕ್ಕೆ ದನಿಗೂಡಿಸಿದ ಸಚಿವ ಮಹದೇವಪ್ಪ ಈಬಗ್ಗೆ ಪರಿಶೀಲಿಸಿ ವರದಿ ನೀಡಿ ಅನುಮೋದನೆ ಮಾಡುವುದಾಗಿ ಒಪ್ಪಿಗೆ ಸೂಚಿಸಿದರು. ಜತೆಗೆ ಮಹದೇವಪುರ ಮುಖ್ಯ ರಸ್ತೆಯನ್ನು ರಮ್ಮನಹಳ್ಳಿವರೆಗೂ ವಿಸ್ತರಿಸುವಂತೆ ಕೋರಿದರು. ಈ ಬಗ್ಗೆ ಪರಿಶೀಲಿಸುವ ಭರವಸೆ ನೀಡಿದರು

Share This Article
Leave a Comment