ಪಬ್ಲಿಕ್ ಅಲರ್ಟ್
ಮೈಸೂರು: ನಾನು ದೈವವನ್ನು ನಂಬುವವನು ಈ ಸಿನಿಮಾವನ್ನು ದೈವದ ಅನುಮತಿ ಪಡೆದು ಮಾಡಿದ್ದೇನೆ ಎಂದು ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದರು.
ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆದ ನಂತರ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅವರು, ದೈವ ಹಾಗೂ ದೇವರ ವಿಚಾರಗಳನ್ನು ಸಿನಿಮಾದಲ್ಲಷ್ಟೇ ಹೇಳುತ್ತೇನೆ. ಅದರ ಬಗ್ಗೆ ಹೆಚ್ಚು ನಾನು ಮಾತನಾಡಲ್ಲ. ತಾಯಿ ಹಾಗೂ ದೈವದ ಆಶೀರ್ವಾದ ಇದ್ದ ಕಾರಣಕ್ಕೆಯೇ ಸಿನಿಮಾವನ್ನು ಸರಿಯಾದ ರೀತಿಯಲ್ಲಿ ಪೂರ್ಣಗೊಳಿಸಲು ಸಾಧ್ಯವಾಗಿದ್ದು, ಜನರಿಗೆ ತಲುಪಿಸಲು ಸಾಧ್ಯವಾಗಿದ್ದು ಎಂದು ನಾನು ನಂಬುತ್ತೇನೆ. ದೇಶಾದ್ಯಂತ ಕಾಂತಾರ ಚಾಪ್ಟರ್ -1 ಯಶಸ್ವಿಯಾಗಿ ಪ್ರದರ್ಶನ ಆಗುತ್ತಿದ್ದು, ಈ ಯಶಸ್ಸು ಎಲ್ಲರಿಗೂ ಸಲ್ಲಬೇಕು ಎಂದು ಸಂತೋಷ ವ್ಯಕ್ತಪಡಿಸಿದರು.
ಕಾಂತಾರ ಚಾಪ್ಟರ್ -1 ದೈವದ ಅನುಮತಿ ಪಡೆದು ಚಿತ್ರೀಕರಣ ಮಾಡಿದ್ದೇನೆ. ನಾನು ದೈವವನ್ನು ನಂಬುವವನು. ಚಿತ್ರವನ್ನು ನಾಡಿನ ಜನರು ನೋಡಿ, ಅದ್ಭುತ ಯಶಸ್ಸನ್ನು ಕೊಟ್ಟಿದ್ದಾರೆ. ಇದರ ಯಶಸ್ಸು ಮೊದಲು ಸಲ್ಲಬೇಕಾಗಿರುವುದು ಕನ್ನಡಿಗರಿಗೆ. ಹಾಗಾಗಿ ಕನ್ನಡಿಗರಿಗೆಲ್ಲ ಧನ್ಯವಾದ ತಿಳಿಸುತ್ತೇನೆ. ದೈವ ಆರಾಧಕರು ಸಿನಿಮಾ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಇಂದು ನಾನು ಚಾಮುಂಡೇಶ್ವರಿ ತಾಯಿಯ ಆಶೀರ್ವಾದ ಪಡೆದಿದ್ದೇನೆ. ನಾನು ದೈವವನ್ನು ನಂಬುವವನಾಗಿರುವ ಕಾರಣ, ಸಿನಿಮಾದಲ್ಲಿ ಎಲ್ಲಿಯೂ ದೈವವನ್ನು ತೋರಿಸುವ ರೀತಿಯಲ್ಲಿ ತಪ್ಪುಗಳಾಗದಂತೆ ಗಮನ ಕೊಟ್ಟು ಸಿನಿಮಾ ಮಾಡಿದ್ದೇವೆ. ಹಿರಿಯ ಮಾರ್ಗದರ್ಶನ ಪಡೆದುಕೊಂಡು ಸಿನಿಮಾ ಮಾಡಿದ್ದೇವೆ. ಪ್ರತಿಯೊಂದು ವಿಚಾರಗಳಿಗೂ ಅವರವರದ್ದೇ ಆದಂತಹ ದೃಷ್ಟಿಕೋನಗಳಿರುತ್ತವೆ. ಆವರಿಗೆ ಹೇಳುವ ಹಕ್ಕಿದೆ. ಅವರು ಹೇಳುತ್ತಾರೆ ಎಂದು ತಿಳಿಸಿದರು



ನನಗೂ ದೈವಕ್ಕೂ ನಡುವೆ ಏನು ವಿಚಾರ ಇದೆ. ನಾನು ದೈವವನ್ನು ಯಾವ ರೀತಿ ನಂಬುತ್ತೇನೆ. ಸಿನಿಮಾದಲ್ಲಿ ಯಾವ ರೀತಿ ತರಬೇಕೆಂದುಕೊಂಡಿದ್ದೆನೋ ಅದೇ ಅದೇ ರೀತಿ ಸಿನಿಮಾ ಮಾಡಿದ್ದೇವೆ. ನಾನು ಹೊಸಬ ಅಲ್ಲ. ಹಿಂದೆಯೂ ತಂದಿದ್ರು, ಮುಂದೆಯೂ ತರುವವರಿದ್ದಾರೆ. ತರುವವರು ಸರಿಯಾದ ರೀತಿಯಲ್ಲಿ ತರಬೇಕು ಅಂತ ನಾನು ಹೇಳುತ್ತೇನೆ ಅಷ್ಟೆ ಎಂದರು.
ಕುಂದಾಪುರದ ಕೆರಾಡಿ ಗ್ರಾಮದಿಂದ ಬಂದು, ಚಿತ್ರರಂಗದಲ್ಲಿ ಹಲವಾರು ವರ್ಷ ಕೆಲಸ ಮಾಡಿ, ಈ ದೊಡ್ಡ ಸಿನಿಮಾ ಮಾಡಿದ್ದೇನೆ. ಇದು ಜನರಿಗೆ ತಲುಪಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಸಿನಿಮಾಗೆ ಒಳ್ಳೆಯ ಹೆಸರು ಬಂದಿದೆ. ಇದು ತುಂಬಾ ಖುಷಿಯಾಗಿದೆ. ನಮ್ಮ ಕೆಲಸವನ್ನು ಬೇರೆ ಭಾಷೆಯವರು ಹೊಗಳುತ್ತಿರುವುದು, ಇನ್ನೂ ಹೆಚ್ಚಿನ ಕೆಲಸ ಮಾಡಲು ಪ್ರೇರೇಪಿಸುತ್ತದೆ ಎಂದು ಹೇಳಿದರು.
ನಾನು ಕಾಂತಾರದ ನೆಕ್ಸ್ಟ್ ಏನು ಎನ್ನುವುದರ ಬಗ್ಗೆ ಮಾತನಾಡುವುದಿಲ್ಲ. ನನ್ನ ಮುಂದಿನ ಚಿತ್ರ “ಜೈ ಹನುಮಾನ್” ಇದಕ್ಕಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ ಎಂದರು.
ಅಮಿತಾ ಬಚ್ಚನ್ ಭೇಟಿಯ ಬಗ್ಗೆ ಪ್ರತಿಕ್ರಿಯಿಸಿ, ಕನ್ನಡ ಚಿತ್ರರಂಗದಲ್ಲಿ ಅಣ್ಣಾವ್ರು ಹೇಗೋ ಅದೇ ರೀತಿ ಬಾಲಿವುಡ್ನಲ್ಲಿ ಅಮಿತಾ ಬಚ್ಚನ್ ಅವರನ್ನು ನೋಡುತ್ತಾರೆ. ಅಣ್ಣಾವ್ರು ಹಾಗೂ ಅಮಿತಾಬ್ ತುಂಬಾ ಒಳ್ಳೆಯ ಸ್ನೇಹಿತರಾಗಿದ್ದರು. ಅಣ್ಣಾವ್ರ ವಿಶೇಷ ವ್ಯಕ್ತಿತ್ವದ ಬಗ್ಗೆಯೂ ಹಂಚಿಕೊಂಡಿದ್ದಾರೆ. ಇದೆಲ್ಲವೂ ಸಾಧ್ಯವಾಗಿದ್ದು ಕಾಂತಾರದಿಂದ. ಹಾಗಾಗಿ ನಾನು ಕಾಂತಾರಕ್ಕೆ ಚಿರಋಣಿ ಎಂದರು.
ದೈವದ ರೀತಿ ಚಿತ್ರ ಮಂದಿರದ ಮುಂದೆ ನಟನೆ ಮಾಡಬಾರದು. ನಾವು ಶ್ರದ್ಧೆ ಮತ್ತು ಭಕ್ತಿಯಿಂದ ಸಿನಿಮಾ ಮಾಡಿದ್ದೇವೆ. ಇದರಿಂದ ನಮಗೆ ಬೇಜಾರು ಆಗುತ್ತದೆ ಯಾರು ಈ ರೀತಿ ಮಾಡಬಾರದು ಎಂದು ಮನವಿ ಮಾಡಿದರು.
ಫ್ಯಾನ್ಸ್ ವಾರ್ ವಿಚಾರದಲ್ಲಿ ನಾನು ಸಲಹೆ ಕೊಡುವಷ್ಟು ದೊಡ್ಡವನಲ್ಲ . ಎಲ್ಲಾ ನಟರನ್ನು ಅಭಿಮಾನಿಯಾಗಿ ನೋಡುತ್ತೇನೆ. ಕನ್ನಡ ಚಿತ್ರರಂಗದ ಬಗ್ಗೆ ಎಲ್ಲರೂ ಹೆಮ್ಮೆ ಪಡುವ ಕಾಲ ಬಂದಿದೆ. ಕಾಂತಾರ ಚಾಪ್ಟರ್ -1 ಗಳಿಕೆ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ. ಸಿನಿಮಾದ ಡೈರೆಕ್ಟರ್ ಅಷ್ಟೇ. ಈ ಸಿನಿಮಾದ ನಿರ್ಮಾಣ ಸಂಸ್ಥೆಯ ವಿಜಯ್ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದರು. ಮೈಸೂರಿನ ಚಿತ್ರಮಂದಿರಗಳಿಗೆ ತೆರಳಿ ಪ್ರೇಕರಿಗೆ ಕೃತಜ್ಞತೆ ಅರ್ಪಿಸಿದರು.
