ದಸರಾ ಜಂಬೂಸವಾರಿ ಮೆರವಣಿಗೆಯ ಕಲಾ ಪ್ರದರ್ಶನ ವ್ಯವಸ್ಥಿತ ಮತ್ತು ವಿನೂತನವಾಗಿರಲಿ: ಡಾ: ಯತೀಂದ್ರ ಸಿದ್ದರಾಮಯ್ಯ

latha prabhukumar
4 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ದಸರಾ ಜಂಬೂಸವಾರಿ ಮೆರವಣಿಗೆಯ ಕಲಾ ಪ್ರದರ್ಶನ ವ್ಯವಸ್ಥಿತ ಮತ್ತು ವಿನೂತನವಾಗಿರಲಿ: ಡಾ: ಯತೀಂದ್ರ ಸಿದ್ದರಾಮಯ್ಯ

ಮೈಸೂರು.ಸೆಪ್ಟೆಂಬರ್.16(ಕರ್ನಾಟಕ ವಾರ್ತೆ):-ದಸರಾ ಜಂಬೂಸವಾರಿ ಮೆರವಣಿಗೆಯ ಕಲಾ ಪ್ರದರ್ಶನ ವ್ಯವಸ್ಥಿತ ಮತ್ತು ವಿನೂತನವಾಗಿರಲಿ ಎಂದು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಯತೀಂದ್ರ ಸಿದ್ದರಾಮಯ್ಯ ಅವರು ತಿಳಿಸಿದರು.

ಅವರು ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ದಸರಾ ಮಹೋತ್ಸವ ಕಾರ್ಯಾಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಒಂದೇ ಕಲಾಪ್ರಕಾರದಲ್ಲಿ ಒಂದಕ್ಕಿಂತ ಹೆಚ್ಚು ಕಲಾತಂಡಗಳನ್ನು‌ ಆಯ್ಕೆ ಮಾಡಿದಾಗ ಎಲ್ಲಾ ತಂಡಗಳು‌ ಗುಂಪು ಅಭ್ಯಾಸ ನಡೆಸಿ ಏಕರೂಪದಲ್ಲಿ ಪ್ರದರ್ಶನ ನೀಡುವಂತೆ ಮುಂಚಿತವಾಗಿ ತಾಲೀಮು ನಡೆಸುವಂತೆ ತಿಳಿಸಿದರು.

ಗೋಲ್ಡ್ ಕಾಡ್೯ ಖರೀದಿ ಮಾಡಿದವರಿಗೆ ಸೀಟ್ ಸಂಖ್ಯೆ ನಮೂದಿಸಿ ಆಸನದ ವ್ಯವಸ್ಥೆ ಮಾಡಲಾಗುವುದು. ಗೋಲ್ಡ್ ಕಾಡ್೯ (complimentary) ವಿತರಣೆಗೆ ಅವಕಾಶವಿರುವುದಿಲ್ಲ ಎಂದರು.

ದಸರಾ ಮಹೋತ್ಸವ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ರಚಿಸಲಾಗಿರಯವ ಉಪಸಮಿತಿಯಲ್ಲಿ ಅಧಿಕಾರಿಗಳು ಯಾವುದೇ ಲೋಪವಾಗದಂತೆ ಉತ್ತಮವಾಗಿ ಕಾರ್ಯನಿರ್ವಹಿಸಿ ಎಂದರು.

ವಿವಿಧ ಜಿಲ್ಲೆಗಳಿಂದ ಆಗಮಿಸುವ ಕ್ರೀಡಾ ಹಾಗೂ ಕುಸ್ತಿ ಪಟುಗಳ ವಾಸ್ತವ್ಯಕ್ಕಾಗಿ ಕೊಠಡಿಗಳ ವ್ಯವಸ್ಥೆ ಯಾಗಬೇಕು. ಮಹಿಳಾ ದಸರಾ‌ ಸಮಿತಿ ವತಿಯಿಂದ ರಂಗೋಲಿ ಸ್ಪರ್ಧೆಗೆ ಹೆಚ್ಚಿ‌ನ ಸ್ಥಳಾವಕಾಶವಿರುವ ರಸ್ತೆ ಆಯ್ಕೆ ಮಾಡಿ ರಂಗೋಲಿಗಳು ವಿನೂತನವಾಗಿ ಉತ್ತಮ ಸಂದೇಶ ನೀಡುವ ರೀತಿ ಇರಲಿ ಎಂದರು.

ವಿಶ್ವವಿಖ್ಯಾತ ಮೈಸೂರು ದಸರಾ ಕಾರ್ಯಕ್ರಮಗಳನ್ನು ಒಗ್ಗೂಡಿಸಿ ನ್ಯಾಷನಲ್ ಜಿಯೋಗ್ರಾಫಿಕ್ ಚಾನಲ್ ವತಿಯಿಂದ ಸಾಕ್ಷ್ಯಚಿತ್ರ ನಿರ್ಮಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಸ್ಥಬ್ದಚಿತ್ರ ಆಯ್ಕೆಗೆ ರಾಜ್ಯ ಮಟ್ಟದ ಸಮಿತಿ ರಚನೆ ಶಿವರಾಜ್ ತಂಗಡಗಿ

ರಾಜ್ಯದ ಒಟ್ಟು 30 ಜಿಲ್ಲೆಗಳ ಸ್ಥಬ್ದ ಚಿತ್ರಗಳ ಪೈಕಿ ಜಂಬೂ ಸವಾರಿಯಲ್ಲಿ ಭಾಗವಹಿಸುವ ಉತ್ತಮ 15 ಜಿಲ್ಲೆಯ ಸ್ಥಬ್ದಚಿತ್ರವನ್ನು ಆಯ್ಕೆ ಮಾಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ಎಸ್ ತಂಗಡಗಿ ಅವರು ತಿಳಿಸಿದರು.

ಮೆರವಣಿಗೆಯಲ್ಲಿ ಭಾಗವಹಿಸುವ ಸ್ಥಬ್ದಚಿತ್ರ ಹಾಗೂ ಕಲಾತಂಡಗಳಿಗೆ ಜಂಬೂಸವಾರಿಯಲ್ಲಿ ಸಾಗುವಾಗ ನಿಗದಿತ ಸ್ಥಳಗಳಲ್ಲಿ ಪ್ರದರ್ಶನ ನೀಡಲು ಸಮಯ (ನಿಮಿಷಗಳಲ್ಲಿ) ನಿಗದಿ ಮಾಡಿ ಶಿಸ್ತುಬದ್ಧವಾಗಿ ಸಾಗಲು ವ್ಯವಸ್ಥೆ ಮಾಡಿ ಎಂದರು.

ದಸರಾ ಮಹೋತ್ಸವಕ್ಕೆ ಹೊರ ದೇಶಗಳಿಂದ‌ ರಾಯಭಾರಿಗಳನ್ನು ಆಹ್ವಾನಿಸಲಾಗುತ್ತಿದ್ದು, ಈಗಾಗಲೇ‌ ಮೂರು ಮಂದಿ ಒಪ್ಪಿಗೆ ಸಹ ನೀಡಿದ್ದಾರೆ. ಅವರನ್ನು ಶಿಷ್ಠಾಚಾರದಂತೆ ಆಹ್ವಾನಿಸಿ ಅಗತ್ಯ ವ್ಯವಸ್ಥೆಗಳನ್ನು ಮಾಡಬೇಕು ಎಂದರು.

ದಸರಾ ಮಹೋತ್ಸವದ ಡ್ರೋಣ್ ಶೋ ಗೆ ವಿಷಯವಾರು ಮಾಡಲ್ ಸಿದ್ಧಪಡಿಸಿ ಮಾನ್ಯ ಮುಖ್ಯಮಂತ್ರಿಗಳಿಂದ ಅನುಮತಿ ಪಡೆದು ಸಿದ್ಧತೆ ಮಾಡಿಕೊಳ್ಳಿ ಎಂದರು.

ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ‌ ಹರೀಶ್ ಗೌಡ ಅವರು ಮಾತನಾಡಿ ಮೈಸೂರಿನಲ್ಲಿರುವ ವಿವಿಧ ವೃತ್ತಗಳಿಗೆ ತನ್ನದೇ ಆದ ಇತಿಹಾಸವಿದೆ. ವೃತ್ತಗಳಿಗೆ ಅದರ ವಿಶೇಷತೆ ಯ ಅನುಗುಣವಾಗಿ ವಿದ್ಯುತ್ ದೀಪಾಲಂಕಾರ ಮಾಡಿ ಎಂದರು.

ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಜಿ‌ ಅವರು ಈ ಬಾರಿ ವಿನೂತನವಾಗಿ ಹಾಗೂ ಶಿಸ್ತುಬದ್ಧವಾಗಿ ಕಾರ್ಯಕ್ರಮಗಳನ್ನು ಆಯೋಜಿಸಲು ಜಿಲ್ಲಾಡಳಿತದಿಂದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಉಪಸಮಿತಿಗಳಲ್ಲಿ ಕಾರ್ಯಕ್ರಮ ಆಯೋಜಿಸುವ ಸಂದರ್ಭದಲ್ಲಿ ತೊಂದರೆಯಾದಲ್ಲಿ ತಕ್ಷಣ ಜಿಲ್ಲಾಡಳಿತದ ಗಮನಕ್ಕೆ ತರಬೇಕು ಎಂದು ಸೂಚನೆ ನೀಡಿದರು.

ಸ್ವಾಗತ‌ ಸಮಿತಿ ನವ ಬಣ್ಣಗಳಲ್ಲಿ ಆಹ್ವಾನ ಪತ್ರವನ್ನು ಸಿದ್ಧಪಡಿಸಿ ಗಣ್ಯರನ್ನು ಆಹ್ವಾನಿಸಲಾಗುವುದು.ವಾಸ್ತವ್ಯಕ್ಕಾಗಿ ಹೋಟೆಲ್, ಹಾಸ್ಟಲ್ ಹಾಗೂ ಡಾರ್ಮೆಟರಿಗಳಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ಐಶ್ವರ್ಯ ಆರ್ ಅವರು ತಿಳಿಸಿದರು.

ಬಂದೋಬಸ್ತ್ ಹಾಗೂ ಪಂಜಿನ ಕವಾಯತ್ ದಸರಾ ಸಂದರ್ಭದಲ್ಲಿ ಯಾವುದೇ ಲೋಪವಾಗದಂತೆ ಬಂದೋಬಸ್ತ್ ವ್ಯವಸ್ಥೆ ಮಾಡಲಾಗುವುದು. ಪಂಜಿನ ಕವಾಯತ್ ನಲ್ಲಿ ಕಳೆದ ಸಾಲಿನಂತೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಮೈಸೂರು ನಗರ ಪೊಲೀಸ್ ಆಯುಕ್ತೆ ‌ಸೀಮಾ ಲಾಟ್ಕರ್ ಅವರು ತಿಳಿಸಿದರು.

ಯುವ ದಸರಾ ಯುವ ದಸರಾ ಕಾರ್ಯಕ್ರಮ ಅಕ್ಟೋಬರ್ 13 ರಿಂದ 17 ರವರೆಗೆ ನಡೆಯಲಿದೆ. ಖ್ಯಾತ ಚಲನಚಿತ್ರ ನೃತ್ಯ ನಿರ್ದೇಶಕ ಪ್ರಭುದೇವ ಅವರು ಉದ್ಘಾಟಿಸಲಿದ್ದಾರೆ. ಪ್ರಖ್ಯಾತ ಕಲಾವಿದರು 5 ದಿನಗಳ ಕಾಲ ಕಾರ್ಯಕ್ರಮ ನೀಡಲಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ‌ ಬಾಲದಂಡಿ ಅವರು ತಿಳಿಸಿದರು.

ಕಂಬಳ ಕಂಬಳ ಕಾರ್ಯಕ್ರಮ ಅಕ್ಟೋಬರ್ 18 ಹಾಗೂ 19 ರಂದು ಸಾತ್ಕಳ್ಳಿಯಲ್ಲಿ ನಡೆಯಲಿದೆ. ಕಂಬಳದಲ್ಲಿ ಒಟ್ಟು 150 ಕೋಣಗಳ ತಂಡ ಜೂನಿಯರ್ ಹಾಗೂ ಸೀನಿಯರ್ ವಿಭಾಗದಲ್ಲಿ ಭಾಗವಹಿಸಲಿದೆ. ಸಾರ್ವಜನಿಕರಿಗೆ 8000 ಆಸನದ ವ್ಯವಸ್ಥೆ ಮಾಡಲಾಗಿದೆ. ಸರ್ಕಾರದ ಮಾರ್ಗಸೂಚಿಗಳನ್ವಯ ಕಂಬಳ ನಡೆಸಲಾಗುವುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಯುಕೇಶ್ ಕುಮಾರ್ ಅವರು ತಿಳಿಸಿದರು.

ಸಾಂಸ್ಕೃತಿಕ ಉಪಸಮಿತಿ ಅರಮನೆ ಹಾಗೂ 10 ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.ಈಗಾಗಲೇ ಅರ್ಜಿ ಆಹ್ವಾನಿಸಲಾಗಿದೆ. 3000 ಕ್ಕಿಂತ ಹೆಚ್ಚಿನ ಅರ್ಜಿ ಬಂದಿರುತ್ತದೆ. ‌400 ರಿಂದ 500 ತಂಡಗಳಿಗೆ ಪ್ರದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಯುಕೇಶ್ ಕುಮಾರ್ ಅವರು ತಿಳಿಸಿದರು.

ರೈತ ದಸರಾ ಅಕ್ಟೋಬರ್ 16 ರಿಂದ 18 ರವರೆಗೆ 3 ದಿನಗಳ ಕಾಲ ಜೆ.ಕೆ.ಮೈದಾನದಲ್ಲಿ ನಡೆಯಲಿದೆ. ಹಾಲು ಕರೆಯುವ ಸ್ಪರ್ಧೆ, 10 ಜನ ರೈತರಿಗೆ ಸನ್ಮಾನ, ರೈತರಿಗೆ ಉಪಯುಕ್ತ ಮಾಹಿತಿ ನೀಡಲು ಜೆ.ಕೆ ಗ್ರೌಂಡ್ ನಲ್ಲಿ ಮಳಿಗೆಗಳ ವ್ಯವಸ್ಥೆ ಮಾಡಲಾಗುವುದು ಎಂದು ಜಂಟಿ ಕೃಷಿ ನಿರ್ದೇಶಕ ಕೆ.ಹೆಚ್ ರವಿ ಅವರು ತಿಳಿಸಿದರು.

ಮೈಸೂರು ಮಹಾನಗರ ಪಾಲಿಕೆ ಉಪ ಆಯಕ್ತೆ ವೀಣಾ ಅವರು ಮಾತನಾಡಿ ಆಹಾರ ಮೇಳವನ್ನು ಮಹಾರಾಜ ಗ್ರೌಂಡ್ ನಲ್ಲಿ ಆಯೋಜಿಸಲಾಗುವುದು. 120 ಸ್ಟಾಲ್ ಗಳು ಹಾಗೂ 16 ವಿಧಧ ಖಾದ್ಯಕ್ಕೆ ನೊಂದಣಿ ಮಾಡಲಾಗಿದೆ. ಲಾಟರಿ ಮೂಲಕ ಮಾರಾಟಗಾರರನ್ನು ಆಯ್ಕೆ ಮಾಡಲಾಗುವುದು ಎಂದರು.

ಭೂ ದಾಖಲೆಗಳ ಉಪನಿರ್ದೇಶಕಿ ರಮ್ಯ ಅವರು ಯೋಗ ದಸರಾದಲ್ಲಿ ಸ್ಪರ್ಧೆಗಳನ್ನು ಆಯೋಜಿಸುವ ಬಗ್ಗೆ ಸಭೆಗೆ ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ದಸರಾ- 2026 ರ ವೆಬ್ ಸೈಟ್ ಗೆ https://mysoredasara.gov.in
ಚಾಲನೆ ನೀಡಲಾಯಿತು ದಸರಾ ಯುವ ಸಂಭ್ರಮ ಪೋಸ್ಟರ್ ಬಿಡುಗಡೆ ಮಾಡಿದರು.

ಸಭೆಯಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಅಧ್ಯಕ್ಷ ರಮೇಶ್ ಬಾಬು ಬಂಡಿಸಿದ್ದೇಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಮಂಜುಶ್ರೀ, ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಎಂ‌.ಕೆ ಸವಿತಾ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Share This Article
Leave a Comment