ಮದ್ದೂರು ಗಲಾಟೆ, ಚಾಮುಂಡಿ ಚಲೋ ಹಿಂದೆ ಬಿಜೆಪಿ ಕೈವಾಡ: ಲಕ್ಷ್ಮಣ್‌

Pratheek
4 Min Read

ಪಬ್ಲಿಕ್ ಅಲರ್ಟ್


ಮೈಸೂರು: ಮದ್ದೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಗಲಾಟೆಯ ಹಿಂದೆ ಬಿಜೆಪಿ ಯವರ ಕೈವಾಡವಿದೆ. ಅದೇ ರೀತಿ ಮೈಸೂರಿನಲ್ಲೂ ಚಾಮುಂಡಿ ಚಲೋ ಹೆಸರಿನಲ್ಲಿ ಗಲಾಟೆ ಎಬ್ಬಿಸಲು ಪ್ರಯತ್ನಪಟ್ಟರು ಅದು ಸಾಧ್ಯವಾಗಲಿಲ್ಲ. ಈ ಎರಡು ಘಟನೆಗಳನ್ನು ಎನ್.ಐ.ಎ ಮತ್ತು ಸಿಬಿಐ ಗೆ ವಹಿಸಿ ಎಂದು ಬಿಜೆಪಿಯವರು ಒತ್ತಾಯ ಮಾಡುತ್ತಾರಾ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಪ್ರಶ್ನಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,  ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರನ್ನು ದಸರಾಗೆ ಆಹ್ವಾನಿಸಿರುವ ವಿಚಾರದಲ್ಲಿ ಎರಡು ಗುಂಪುಗಳು ಪರ ವಿರೋಧ ಮಾಡಿದ್ದವು. ಹಿಂದೂ ಜಾಗರಣ ವೇದಿಕೆಯವರು ವಿರೋಧಿಸಿ ಚಾಮುಂಡಿ ಚಲೋಗರ ಕರೆ ನೀಡಿದರೆ, ಬಾನು ಮುಷ್ತಾಕ್ ಪರ ದಲಿತ ಮಹಾಸಭಾದವರು ಚಾಮುಂಡಿ ನಡಿಗೆ ಏರ್ಪಡಿಸಿದ್ದರು. ಇದಕ್ಕೆ ಪೊಲೀಸರು ಎರಡು ಗುಂಪುಗಳಿಗೂ ಅನುಮತಿ ನಿರಾಕರಿಸಿ ಯಾಕೆ ನಿರಾಕರಿಸಲಾಗುತ್ತಿದೆ ಎಂಬುದಕ್ಕೆ ಸ್ಪಷ್ಟವಾಗಿ ನೋಟಿಸ್ ಕೊಟ್ಟಿದ್ದಾರೆಂದರು.
ಆದರೆ ಬಿಜೆಪಿಯ ಶಾಸಕ ಟಿ.ಎಸ್.ಶ್ರೀವತ್ಸ, ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿ ಹಲವರು ಮೈಸೂರಿನಲ್ಲಿ ಕೋಮು ಗಲಭೆ ಸೃಷ್ಟಿಸಬೇಕು ಎಂಬ ಉದ್ದೇಶದಿಂದ ಪೊಲೀಸರ ಅನುಮತಿಯನ್ನು ನಿರಾಕರಿಸಿ ಚಾಮುಂಡಿ ಚಲೋಗೆ ಮುಂದಾಗಿದ್ದರು. ಮೈಸೂರು ಅಲ್ಲದೆ ಮಂಗಳೂರು, ಉಡುಪಿ, ಮಡಿಕೇರಿ, ಚಿಕ್ಕಮಗಳೂರು ಮತ್ತು ಹಾಸನ ಕಡೆಗಳಿಂದ ಬಸ್ಸು, ಕಾರು ಸೇರಿದಂತೆ ಇತರೆ ವಾಹನಗಳಲ್ಲಿ 5 ಸಾವಿರ ಜನರು ಮೈಸೂರಿಗೆ ಬಂದಿದ್ದಾರೆ. ಪೊಲೀಸರು ಇವರುಗಳನ್ನು ಅರ್ಧದಲ್ಲಿಯೇ ತಡೆದಿದ್ದಾರೆ. ಕೊಮು ಸೌಹಾರ್ಧ ಹಾಳು ಮಾಡಬೇಕೆಂದೆ ಬಂದಿದ್ದಾರೆ. ಇವರಲ್ಲಿ ಅನೇಕ ಗೂಂಡಾಗಳು ಬಂದಿದ್ದಾರೆ ಎಂದು ಹೇಳಿದರು.
ಪೊಲೀಸರನ್ನು ಬೇದಿಸಿ 500 ಜನ ಬಿಜೆಪಿ ಮತ್ತು ಹಿಂದೂ ಕಾರ್ಯಕರ್ತರ ಹೆಸರಿನ ಗೂಂಡಾಗಳು  ಚಾಮುಂಡಿ ಚಲೋ ನಡೆಸಲು ಬಂದಿದ್ದಾರೆ. ಅದರಲ್ಲಿ  46 ಮಂದಿ ಮಾತ್ರ ಮೈಸೂರು ನಗರ ಮತ್ತು ಜಿಲ್ಲೆಗೆ ಸೇರಿದವರು. ಇನ್ನು  412 ಮಂದಿ ಮಡಿಕೇರಿ, ಹಾಸನ, ಮಂಗಳೂರು, ಉಡುಪಿ ಮತ್ತು ಚಿಕ್ಕಮಗಳೂರು ಕಡೆಗಳಿಂದ ಬಂದಿದ್ದವರು. 20 ಜನ ಮಾತ್ರ ಬೆಂಗಳೂರಿನಿಂದ ಬಂದಿದ್ದರು. ಹಾಗಿದ್ದರೆ ಇವರ ಉದ್ದೇಶ ಏನಿತ್ತು. ಗಲಾಟೆ ಎಬ್ಬಿಸಬೇಕು ಎಂದೇ ಇವರು ಮೈಸೂರಿಗೆ ಬಂದಿದ್ದು ಎಂದು ಆರೋಪಿಸಿದರು.
ಚಾಮುಂಡಿ ಚಲೋ ನಡೆಸಿ ಮೈಸೂರನ್ನು ಕರಾವಳಿ ಮಾಡಬೇಕು ಎಂಬ ಉದ್ದೇಶ ಬಿಜೆಪಿಯವರಿಗಿತ್ತು. ಆದರೆ ನಮ್ಮ ಮೈಸೂರು ಪೊಲೀಸರು ನಾಕಾ ಬಂಧಿ ಹಾಕಿ ಎಲ್ಲರನ್ನೂ ಮುಂಜಾಗ್ರತಾ ಕ್ರಮವಾಗಿ ಬಂಧಿಸಿದರು.‌ಇಲ್ಲದಿದ್ದೆ ನಿನ್ನೆ ಮೈಸೂರಿನಲ್ಲಿ ದೊಡ್ಡ ಗಲಾಟೆಯನ್ನೇ ಸೃಷ್ಟಿ ಮಾಡುತ್ತಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮದ್ದೂರಿನಲ್ಲಿ ಗಣೇಶ ವಿಸರ್ಜನರ ವೇಳೆ ಗಲಾಟೆ ಎಬ್ಬಿಸಬೇಕು ಎಂದೇ ಗೂಂಡಾಗಳನ್ನು ಕರೆಸಿ ಬಿಜೆಪಿಯವರು ಕುತಂತ್ರ ನಡೆಸಿದ್ದರು. ರಾಮ್ ರಹೀಮ್ ನಗರದ ಮಸೀದಿ ರಸ್ತೆಯನ್ನು 144 ನೇ ಸೆಕ್ಷನ್ ಜಾರಿ ಮಾಡಿದ್ದರು ಬೇಕು ಎಂದೇ ಅಲ್ಲಿ ಮೆರವಣಿಗೆ ಹೋಗಿ ಗಲಾಟೆ ಎಬ್ಬಿಸಿದ್ದಾರೆ. ಮಸೀದಿಯಿಂದ ಕಲ್ಲು ಹೊಡೆದಿಲ್ಲ ಎಂದು ಐಜಿಪಿ ಬೋರಲಿಂಗಯ್ಯ ಅವರೇ ಸ್ಪಷ್ಟಪಡಿಸಿದ್ದಾರೆ. ಅಲ್ಲಿ ಕಲ್ಲು ಹೊಡೆದಿರುವುದು ಬಿಜೆಪಿಯವರೇ ಎಂದು ಎಂ.ಲಕ್ಷ್ಮಣ್ ಗಂಭೀರ ಆರೋಪ ಮಾಡಿದರು.
ಗಣೇಶ ವಿಸರ್ಜನೆಗೂ ಮುನ್ನ ಅಲ್ಲಿಗೆ ಬಂದವರಿಗೆ ಬಿಜೆಪಿಯವರು ಕೇಸರಿ ಶಾಲು, ಒಂದು ಕ್ವಾಟ್ರು ಎಣ್ಣೆ ಮತ್ತು ಬಿರಿಯಾನಿಯನ್ನು ನೀಡಿ ಗೂಂಡಾಗಳನ್ನು ಕರೆಸಿ  ಗಲಾಟೆಗೆ ತಯಾರಿ ಮಾಡಿದ್ದಾರೆ.  ಅಲ್ಲಿ ಮೆರವಣಿಗೆ ಹೋಗುವ ಸಂದರ್ಭದಲ್ಲಿ ಇವರೇ ಕಲ್ಲನ್ನು ಹೊಡೆದು ಕೋಮು ಗಲಭೆ ಸೃಷ್ಟಿ ಮಾಡಲು ಯತ್ನಿಸಿದ್ದಾರೆ. ಮಂಡ್ಯವನ್ನು ಕಬ್ಜ ಮಾಡಿಕೊಳ್ಳಬೇಕು ಎಂದು ಅಲ್ಲಿ ಶಾಂತಿ ಕದಡುತ್ತಿದ್ದಾರೆ ಎಂದು ಕಿಡಿಕಾರಿದರು.
ಶ್ರೀರಂಗಪಟ್ಟಣ, ನಾಗಮಂಗಲ, ಈಗ ಮದ್ದೂರು. ಹೀಗೆ ಒಂದೊಂದಾಗಿ ಬಿಜೆಪಿಯವರು ಮಂಡ್ಯದಲ್ಲಿ ಬೇರು ಬಿಡಲು ಯತ್ನಿಸುತ್ತಿದ್ದಾರೆ.ಕುಮಾರಸ್ವಾಮಿ ಕೇಂದ್ರದಲ್ಲಿ ಮಂತ್ರಿ ಮಾಡಿದರು ಎಂದು ಮಂಡ್ಯವನ್ನು ಬಿಜೆಪಿಗೆ ಅಡಿಟ್ಟು ಬಿಟ್ಟಿದ್ದಾರೆ.  ಮುಂದೊಂದು ದಿನ ಇವರು ಜೆಡಿಎಸ್ ಪಕ್ಷವನ್ನೇ ನುಂಗಿ ಬಿಡುತ್ತಾರೆ ಎಂದು ಹೇಳಿದರು.
ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಒಳ್ಳೆಯ ಆಡಳಿತ ನೀಡಿ ಶಾಂತಿ ಕಾಪಾಡುತ್ತಿದ್ದಾರೆ.‌ಇದನ್ನು ಸಹಿಸದ ಬಿಜೆಪಿ ಕೇಂದ್ರ ನಾಯಕರು ಅಮಿತ್ ಶಾ ಸೂಚನೆಯಂತೆ ಕರ್ನಾಟಕದಲ್ಲಿ ಗಲಾಟೆ ಎಬ್ಬಿಸಿ ಅಶಾಂತಿ ಸೃಷ್ಟಿಸಿ ಅಧಿಕಾರ ಪಡೆಯಬೇಕು ಎಂಬ ಸಂಚು ರೂಪಿಸಿದ್ದಾರೆ. ಬಿಜೆಪಿಯವರು ಮೇಲ್ವರ್ಗದವರನ್ನು ಗಲಾಟೆಗೆ ಬಿಟ್ಟುಕೊಳ್ಳದೆ,  ಹಿಂದುಳಿದವರು, ದಲಿತರನ್ನು ಮುಂದೆ ಬಿಟ್ಟುಕೊಂಡು ಗಲಾಟೆ ನಡೆಸುತ್ತಿದ್ದಾರೆ. ಬಾವಿಗೆ ತಳ್ಳಿ ಆಳ ನೋಡುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯವರು ಈ ಎರಡೂ ಘಟನೆಗಳ ಬಗ್ಗೆ ಎನ್.ಐ.ಎ ಅಥವಾ ಸಿಬಿಐಗೆ ವಹಿಸಿ ಎಂದು ಒತ್ತಾಯ ಮಾಡಲಿ ನೋಡೋಣ ಎಂದು ಕೇಳಿದರು.
ಮೈಸೂರು ಜಿಲ್ಲೆಯ ವರದಿಗಾರರೊಬ್ಬರ ಬಗ್ಗೆ ಏಕವಚನದಲ್ಲಿ ನಿಂದಿಸಿ ಮಾತನಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲು ಮಾಡಬೇಕೆಂದು ಪ್ರತಾಪಸಿಂಹ ಹೇಳಿಕೆಯನ್ನು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಖಂಡಿಸಿದರು. ಸುದ್ದಿಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಕಾಂಗ್ರೆಸ್ ಮುಖಂಡರಾದ ಬಿ.ಎಂ.ರಾಮು, ಗಿರೀಶ್, ಮಾಧ್ಯಮ ವಕ್ತಾರ ಮಹೇಶ್ ಉಪಸ್ಥಿತರಿದ್ದರು.


ಕೋಟ್:
ಮದ್ದೂರಿನಲ್ಲಿ ಮುಸ್ಲಿಮರ ಬಗ್ಗೆ ಅಗೌರವವಾಗಿ ಮಾತನಾಡಿ ಟ್ರೋಲ್ ಗೆ ಒಳಗಾದ ಮಹಿಳೆ ಜ್ಯೋತಿ ಹಿನ್ನಲೆ ಏನು ಎಂಬುದನ್ನು ಆಕೆಯ ತನ್ನ ಸೋಶಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿದ್ದಾರೆ. ಒಂದು ಕ್ವಾಟ್ರು ಎಣ್ಣೆ, ಎರಡು ಬಿಯರ್ ಎಂದು ಹೇಳಿಕೊಂಡಿದ್ದಾರೆ. ಈಕೆ ಮುಸ್ಲಿಮರ ಬಗ್ಗೆ ಘೋಷಣೆ ಕೂಗಿದ ಹಾಗೆ ಮುಸ್ಲಿಮರು ಹಿಂದೂಗಳ ವಿರುದ್ಧ ಅದೇ ತರಹ ಘೋಷಣೆ ಕೂಗಿದರೆ ಹಿಂದೂಗಳು ಸಹಿಸಿಕೊಳ್ಳುತ್ತಾರಾ.
-ಎಂ.ಲಕ್ಷ್ಮಣ್, ಕೆಪಿಸಿಸಿ ವಕ್ತಾರ.

Share This Article
Leave a Comment