ಒಂದು ಛಾಯಚಿತ್ರ ಸಾವಿರ ಪದಕ್ಕೆ ಸಮ: ಸಿ.ಎಂ‌.ಸಿದ್ದರಾಮಯ್ಯ

Pratheek
2 Min Read

ಪಬ್ಲಿಕ್ ಅಲರ್ಟ್


ಮೈಸೂರು: ಮಾಧ್ಯಮದಲ್ಲಿ  ಒಂದು ಛಾಯಚಿತ್ರ ಸಾವಿರ ಪದಗಳಿಗೆ ಸಮ. ಹೀಗಾಗಿ ಫೋಟೋ ಜರ್ನಲಿಸ್ಟ್ ಗಳು ಪತ್ರಿಕಾ ವೃತ್ತಿಯ ಮುಖ್ಯ ಭಾಗ. ಲೇಖನಿ ಹಾಗೂ ಕ್ಯಮರಾ ಮಾಧ್ಯಮದ ಮುಖ್ಯ ಅಸ್ತ್ರಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಕರ್ನಾಟಕ ಫೋಟೋ ಜರ್ನಲಿಸ್ಟ್ ಅಸೋಸಿಯೇಷನ್ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಆಯ್ಕೆ ಆದ ಫೋಟೋ ಜರ್ನಲಿಸ್ಟ್ ಗಳಿಗೆ “ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ” ವಿತರಿಸಿ ಮಾತನಾಡಿದರು. ಫೋಟೋ ಜರ್ನಲಿಸ್ಟ್ ಗಳು  ಫೋಟೋಗಳನ್ನು ಬೇರೆ ಸಂದರ್ಭಗಳಲ್ಲಿ ಬಳಸಿ ತಿರುಚಿದ ಅಭಿಪ್ರಾಯ ಮೂಡಿಸುವುದು ಆರೋಗ್ಯಕರವಲ್ಲ ಎಂದರು.
ಪತ್ರಕರ್ತರು ಸತ್ಯ ಹೇಳ್ತಾರೆ ಎನ್ನುವ ನಂಬಿಕೆಯಿಂದ ನಿಮ್ಮನ್ನು ಪ್ರಜಾಪ್ರಭುತ್ವದ ನಾಲ್ಕನೇ ಆಧಾರ ಸ್ತಂಬ ಎಂದು ಕರೆಯುತ್ತಾರೆ. ಪತ್ರಕರ್ತರು ಸುಳ್ಳು ಹೇಳುವುದಿಲ್ಲ ಎನ್ನುವ ನಂಬಿಕೆ ಈಗಲೂ ಇದೆ. ಆದರೆ, ಊಹಾ ಪತ್ರಿಕೋದ್ಯಮ ವಿಪರೀತ ಆಗುತ್ತಿದೆ. ಊಹೆ ಮಾಡಿಕೊಂಡು ಸುದ್ದಿ ಮಾಡುವುದು ಗೌರವ ತರುವುದಿಲ್ಲ ಎಂದರು.
ಸಾಮಾಜಿಕ ವ್ಯವಸ್ಥೆಯನ್ನು ಜನರ ಮುಂದೆ ವಾಸ್ತವವಾಗಿ ಇಡುವ ಕೆಲಸ ಮಾಡುತ್ತಲೇ ಇಲ್ಲ ನೀವು. ನೂರಾರು ವರ್ಷಗಳ ಕಾಲ ಶೂದ್ರ ಸಮುದಾಯವನ್ನು ಶಿಕ್ಷಣದಿಂದ ದೂರ ಇಟ್ಟಿದ್ದ ಕಾರಣಕ್ಕೆ ಅಸಮಾನತೆ ಬೆಳೆದಿದೆ. ಇದನ್ನೆಲ್ಲಾ ಜನರಿಗೆ ಅರ್ಥ ಮಾಡಿಸಬೇಕಿದೆ. ಪತ್ರಕರ್ತರು ಮೌಡ್ಯವನ್ನು ಬೆಂಬಲಿಸಬಾರದು. ಬಸವಣ್ಣನವರು 12 ನೇ ಶತಮಾನದಲ್ಲೇ ಮೌಡ್ಯದ ವಿರುದ್ಧ ಚಳವಳಿ ನಡೆಸಿದರು.   ಪತ್ರಕರ್ತರು ಮೌಡ್ಯದ ವಿರುದ್ಧ ಜನರನ್ನು ಎಚ್ಚರಿಸುವ ಕೆಲಸ ಹೆಚ್ಚು ಮಾಡಲಿ. ಪತ್ರಕರ್ತರು ಸದಾ ಸಮಾಜದ ಬಗ್ಗೆ ಚಿಂತಿಸುತ್ತಾರೆ.  ಸಮಾಜಕ್ಕೆ ಉಪಯುಕ್ತವಾಗುವ ಸೆನ್ಸೇಷನ್ ಸುದ್ದಿಗಳನ್ನು ಮಾಡಿ ಎಂದು ಕಿವಿಮಾತು ಹೇಳಿದರು.
ವಿಧಾನ ಪರಿಷತ್ ಶಾಸಕ ಕೆ.ಶಿವಕುಮಾರ್‌ ಮಾತನಾಡಿ ಮಾನ್ಯ ಮುಖ್ಯಮಂತ್ರಿಗಳು ತಮ್ಮ ಅಧಿಕಾರ ಅವಧಿಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಅನುಕೂಲಕಾರಿಯಾಗಿರುವ ಆರೋಗ್ಯ ವಿಮೆ, ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ಯೋಜನೆಯನ್ನು ತಂದಿದ್ದಾರೆ ಎಂದರು.
ಇಂದಿನ ದಿನಗಳಲ್ಲಿ ನ್ಯೂಸ್ ಪ್ರಿಂಟ್ ಬೆಲೆ ಹೆಚ್ಚಳವಾಗಿದ್ದು, ಸಣ್ಣ ಪತ್ರಿಕೆಗಳ ಉಳಿವಿಗಾಗಿ ಸಣ್ಣ ಪತ್ರಿಕೆಗಳ ಅನುಕೂಲಕಾರಿಯಾದ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಬೇಕು ಎಂದರು. ಮುಖ್ಯಮಂತ್ರಿಗಳ ಮಾಧ್ಯಮ‌ ಸಲಹೆಗಾರರಾದ ಕೆ.ವಿ.ಪ್ರಭಾಕರ್, ಶಾಸಕರಾದ ಹರೀಶ್ ಗೌಡ, ವಿಧಾನ ಪರಿಷತ್ ಶಾಸಕ ತಿಮ್ಮಯ್ಯ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಎನ್ ಕೆ ಲೋಕನಾಥ್, ಜಿಲ್ಲಾ ಅಸೋಸಿಯೇಷನ್ ಅಧ್ಯಕ್ಷ ಪ್ರಗತಿ ಗೋಪಾಲಕೃಷ್ಣ ಸೇರಿ ಇತರರು ಉಪಸ್ಥಿತರಿದ್ದರು.

Share This Article
Leave a Comment